‘ದಬಂಗ್’ ಸೀಕ್ವೆಲ್ ಖಚಿತ, ಆದರೆ ‘ಬಜರಂಗಿ ಭಾಯಿಜಾನ್ 2’ ಸಾಧ್ಯವಿಲ್ಲ: ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಅವರು ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಚಿತ್ರದ ಬಿಡುಗಡೆಗೆ ಸಜ್ಜಾಗಿದ್ದಾರೆ. ಈ ಪ್ರಯುಕ್ತ ಹಲವು ಮಾಧ್ಯಮಗಳಿಗೆ ಅವರು ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅಭಿಮಾನಿಗಳಿಗೆ ಇರುವ ಎರಡು ಪ್ರಮುಖ ಸಿನಿಮಾಗಳ ಸೀಕ್ವೆಲ್ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ದಬಂಗ್’ ಸೀಕ್ವೆಲ್ ಖಚಿತ, ಆದರೆ ‘ಬಜರಂಗಿ ಭಾಯಿಜಾನ್ 2’ ಸಾಧ್ಯವಿಲ್ಲ: ಸಲ್ಮಾನ್ ಖಾನ್
Bajrangi Bhaijaan Poster

Updated on: Nov 22, 2026 | 3:02 PM

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರು ತಮ್ಮ ವೃತ್ತಿಜೀವನದ ಎರಡು ಅತ್ಯಂತ ಜನಪ್ರಿಯ ಸಿನಿಮಾಗಳಾದ ‘ದಬಂಗ್’ ಮತ್ತು ‘ಬಜರಂಗಿ ಭಾಯಿಜಾನ್’ ಸೀಕ್ವೆಲ್‌ಗಳ ಕುರಿತು ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ಇತ್ತೀಚೆಗೆ ‘ಎಬಿಪಿ ನ್ಯೂಸ್’ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಸಲ್ಮಾನ್, ಚುಲ್‌ಬುಲ್ ಪಾಂಡೆ ಪಾತ್ರದಲ್ಲಿ ಮತ್ತೆ ತೆರೆಯ ಮೇಲೆ ಬರುವ ಸುಳಿವು ನೀಡಿದ್ದಾರೆ. ಆದರೆ, ಕಬೀರ್ ಖಾನ್ ನಿರ್ದೇಶನದ 2015ರ ಸೂಪರ್ ಹಿಟ್ ಚಿತ್ರ ‘ಬಜರಂಗಿ ಭಾಯಿಜಾನ್’ ಸೀಕ್ವೆಲ್ ಮಾಡುವ ಸಾಧ್ಯತೆಯನ್ನು ಅವರು ತಳ್ಳಿಹಾಕಿದ್ದಾರೆ.

2010ರಲ್ಲಿ ಬಿಡುಗಡೆಯಾದ ‘ದಬಂಗ್’ ಚಿತ್ರದ ಮೂಲಕ ಸಲ್ಮಾನ್ ಖಾನ್ ಅವರ ಚುಲ್‌ಬುಲ್ ಪಾಂಡೆ ಪಾತ್ರ ಪ್ರೇಕ್ಷಕರ ಮನಗೆದ್ದಿತ್ತು. ಬಳಿಕ 2012 ಮತ್ತು 2019ರಲ್ಲಿ ಈ ಚಿತ್ರದ ಎರಡು ಸೀಕ್ವೆಲ್‌ಗಳು ತೆರೆಕಂಡಿದ್ದವು. ಇದೀಗ ಈ ಫ್ರಾಂಚೈಸಿಯ ಮುಂದಿನ ಭಾಗದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಲ್ಮಾನ್, ಈ ಸಿನಿಮಾವನ್ನು ಮುಂದುವರಿಸುವ ನಿರ್ಧಾರ ತಮ್ಮ ಕುಟುಂಬದ ಕೈಯಲ್ಲೇ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

Loading...

ಈ ಬಗ್ಗೆ ಮಾತನಾಡಿದ ಅವರು, ‘ದಬಾಂಗ್ ಸೀಕ್ವೆಲ್ ಖಂಡಿತವಾಗಿಯೂ ಬರುತ್ತದೆ. ಅದು ನಮ್ಮ ಕೈಯಲ್ಲೇ ಇದೆ. ಉಳಿದ ಸಿನಿಮಾಗಳು ಬೇರೆಯವರ ಕೈಯಲ್ಲಿವೆ’ ಎನ್ನುವ ಮೂಲಕ ‘ದಬಾಂಗ್ 4’ ಚಿತ್ರ ಸೆಟ್ಟೇರುವುದನ್ನು ಖಚಿತಪಡಿಸಿದ್ದಾರೆ.

ಆದರೆ, ‘ಬಜರಂಗಿ ಭಾಯಿಜಾನ್ 2’ ಕುರಿತ ಪ್ರಶ್ನೆಗೆ ಸಲ್ಮಾನ್ ಖಾನ್ ವಿಭಿನ್ನ ಉತ್ತರ ನೀಡಿದ್ದಾರೆ. 2015ರಲ್ಲಿ ಕಬೀರ್ ಖಾನ್ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಬಜರಂಗಿ ಭಾಯಿಜಾನ್’ ಚಿತ್ರದಲ್ಲಿ ಪಾಕಿಸ್ತಾನದ ಪುಟ್ಟ ಬಾಲಕಿಯನ್ನು ಆಕೆಯ ಕುಟುಂಬದೊಂದಿಗೆ ಸೇರಿಸುವ ಪವನ್ ಕುಮಾರ್ ಚತುರ್ವೇದಿ ಪಾತ್ರದಲ್ಲಿ ಸಲ್ಮಾನ್ ಮನೋಜ್ಞವಾಗಿ ನಟಿಸಿದ್ದರು. ಆ ಚಿತ್ರಕ್ಕಿದ್ದ ಭಾವನಾತ್ಮಕ ಬೆಸುಗೆಯನ್ನು ಮತ್ತೊಂದು ಸಿನಿಮಾ ಮೀರಿಸಲು ಸಾಧ್ಯವಿಲ್ಲ ಎಂಬುದು ಸಲ್ಮಾನ್ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ‘ಬಿಗಿ ಭದ್ರತೆಯ ನಡುವೆಯೂ ಭಯದಲ್ಲಿ ಬದುಕುತ್ತಿದ್ದೇನೆ’: ಸಲ್ಮಾನ್ ಖಾನ್ ಅಚ್ಚರಿಯ ಹೇಳಿಕೆ

‘ಬಜರಂಗಿ ಭಾಯಿಜಾನ್ ವಿಚಾರಕ್ಕೆ ಬಂದರೆ, ಭಾವನಾತ್ಮಕವಾಗಿ ಪ್ರೇಕ್ಷಕರೊಂದಿಗೆ ಬೆಸೆಯುವ ವಿಚಾರದಲ್ಲಿ ಆ ಚಿತ್ರವನ್ನು ಮೀರಿಸುವ ಮತ್ತೊಂದು ಸಿನಿಮಾ ಬರುವುದು ಸಾಧ್ಯವಿಲ್ಲ ಎಂದು ನನಗನಿಸುತ್ತದೆ. ಮೊದಲ ಭಾಗದೊಂದಿಗೆ ಎರಡನೇ ಭಾಗವನ್ನು ಹೋಲಿಕೆ ಮಾಡಿ, ‘ಇದರಲ್ಲಿ ಅಷ್ಟೊಂದು ಮಜಾ ಇಲ್ಲ’ ಎಂದು ಜನರು ಹೇಳುವಂತಹ ಕೆಲಸವನ್ನು ನಾನು ಮಾಡಲು ಬಯಸುವುದಿಲ್ಲ. ಹಾಗಾಗಿ, ಬಜರಂಗಿ ಭಾಯಿಜಾನ್ ಸೀಕ್ವೆಲ್ ನಿರ್ಮಾಣವಾಗುವುದಿಲ್ಲ ಎಂದು ನನಗನಿಸುತ್ತದೆ’ ಎಂದು ಸಲ್ಮಾನ್ ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us