AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್ ನೆರೆಯವರಿಗೆ ಮುಂಬೈ ಹೈಕೋರ್ಟ್ ಬಲವಾದ ಎಚ್ಚರಿಕೆ; ಏನಿದು ವಿಷಯ?

ಸಲ್ಮಾನ್ ಖಾನ್ ಮತ್ತು ಕೇತನ್ ಕಕ್ಕರ್ ನಡುವಿನ ಪನ್ವೇಲ್ ಭೂ ವಿವಾದದಲ್ಲಿ ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಸಾಮಾಜಿಕ ಮಾಧ್ಯಮವು ಯಾರನ್ನೂ ದೂಷಿಸುವ ವೇದಿಕೆಯಲ್ಲ ಎಂದ ಕೋರ್ಟ್, ಕಕ್ಕರ್ ಅವರಿಗೆ ಸಲ್ಮಾನ್ ವಿರುದ್ಧದ ಮಾನಹಾನಿಕರ ಪೋಸ್ಟ್‌ಗಳನ್ನು ತಕ್ಷಣ ತೆಗೆದುಹಾಕುವಂತೆ ಸೂಚಿಸಿದೆ. ಈ ಪ್ರಕರಣವು ಸೆಲೆಬ್ರಿಟಿಗಳು ಮತ್ತು ಸಾಮಾನ್ಯ ನಾಗರಿಕರ ನಡುವಿನ ಡಿಜಿಟಲ್ ವೇದಿಕೆಗಳ ಬಳಕೆಯ ಮಿತಿಗಳನ್ನು ಸ್ಪಷ್ಟಪಡಿಸಿದೆ.

ಸಲ್ಮಾನ್ ನೆರೆಯವರಿಗೆ ಮುಂಬೈ ಹೈಕೋರ್ಟ್ ಬಲವಾದ ಎಚ್ಚರಿಕೆ; ಏನಿದು ವಿಷಯ?
ಸಲ್ಮಾನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jun 12, 2026 | 10:54 AM

Share

ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ಪನ್ವೇಲ್ ಫಾರ್ಮ್‌ಹೌಸ್‌ನ ನೆರೆಮನೆಯವರಾದ ಕೇತನ್ ಕಕ್ಕರ್ ನಡುವಿನ ಜಮೀನು ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ’ಸಾಮಾಜಿಕ ಜಾಲತಾಣಗಳು ಯಾರನ್ನೂ ದೂಷಿಸುವ ಅಥವಾ ಅವಹೇಳನ ಮಾಡುವ ಹಕ್ಕನ್ನು ಯಾರಿಗೂ ನೀಡುವುದಿಲ್ಲ, ಅದು ಸಾಮಾನ್ಯ ನಾಗರಿಕನಿರಲಿ ಅಥವಾ ಸೆಲೆಬ್ರಿಟಿಯಾಗಿರಲಿ’ ಎಂದು ಗಂಭೀರವಾಗಿ ಹೇಳಿದೆ. ಅಲ್ಲದೆ, ಸಲ್ಮಾನ್ ಖಾನ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿರುವ ಆಕ್ಷೇಪಾರ್ಹ ಪೋಸ್ಟ್‌ಗಳು ಹಾಗೂ ವಿಡಿಯೋಗಳನ್ನು ತೆಗೆದುಹಾಕುವಂತೆ ನೆರೆಮನೆಯವರಾದ ಕೇತನ್ ಕಕ್ಕರ್ ಅವರಿಗೆ ನ್ಯಾಯಮೂರ್ತಿ ಶರ್ಮಿಳಾ ದೇಶಮುಖ್ ಸೂಚಿಸಿದ್ದಾರೆ.

ಏನಿದು ಜಮೀನು ವಿವಾದ?

ಅಮೆರಿಕದಲ್ಲಿ ನೆಲೆಸಿದ್ದ ಅನಿವಾಸಿ ಭಾರತೀಯ ಕೇತನ್ ಕಕ್ಕರ್, 1990ರ ದಶಕದಲ್ಲಿ ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಪನ್ವೇಲ್‌ನಲ್ಲಿರುವ ಸಲ್ಮಾನ್ ಖಾನ್ ಅವರ ಪ್ರಸಿದ್ಧ ‘ಅರ್ಪಿತಾ ಫಾರ್ಮ್ಸ್’ ಬಳಿ ಎರಡೂವರೆ ಎಕರೆ ಗುಡ್ಡಗಾಡು ಭೂಮಿಯನ್ನು ಖರೀದಿಸಿದ್ದರು. ಆರಂಭದಲ್ಲಿ ಎರಡೂ ಕುಟುಂಬಗಳ ನಡುವೆ ಉತ್ತಮ ಸಂಬಂಧವಿತ್ತು. ಆದರೆ, 2019 ರಲ್ಲಿ ಇವರ ನಡುವಿನ ಬಾಂಧವ್ಯ ಹದಗೆಟ್ಟಿತು.

ಸಲ್ಮಾನ್ ಖಾನ್ ಮೇಲಿರುವ ಗಂಭೀರ ಆರೋಪಗಳೇನು?

ತಮ್ಮ ಜಮೀನಿನಲ್ಲಿದ್ದ ಪರಿಸರ ಸ್ನೇಹಿ ಮನೆ ಮತ್ತು ಗಣಪತಿ ದೇವಸ್ಥಾನವನ್ನು ಕೆಡವಲಾಗಿದೆ, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಹಾಗೂ ತಮ್ಮ ಭೂಮಿಯನ್ನು ಖಾಸಗಿ ಅರಣ್ಯ ಪ್ರದೇಶವೆಂದು ಘೋಷಿಸಲು ಕೆಲವು ದಾಖಲೆಗಳನ್ನು ತಿರುಚಲಾಗಿದೆ’ ಎಂದು ಕೇತನ್ ಕಕ್ಕರ್, ಸಲ್ಮಾನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು.

ಸಲ್ಮಾನ್ ಖಾನ್ ವಕೀಲರ ವಾದವೇನು?

ಸಲ್ಮಾನ್ ಖಾನ್ ಈ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಕೇತನ್ ಕಕ್ಕರ್ ಖರೀದಿಸಲು ಬಯಸಿದ್ದ ಭೂಮಿಯ ಪ್ರಕ್ರಿಯೆಯೇ ಕಾನೂನುಬಾಹಿರವಾಗಿತ್ತು, ಹೀಗಾಗಿಯೇ ಸರ್ಕಾರ ಅದನ್ನು ರದ್ದುಗೊಳಿಸಿದೆ ಎಂದು ಸಲ್ಮಾನ್ ಅವರ ವಕೀಲರು ಸ್ಪಷ್ಟಪಡಿಸಿದ್ದಾರೆ. ಈ ಕೋಪದಲ್ಲಿ ಕಕ್ಕರ್ ಅವರು ಸಲ್ಮಾನ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎನ್ನುವುದು ನಟನ ವಾದವಾಗಿದೆ.

ವಿವಾದಕ್ಕೆ ಧಾರ್ಮಿಕ ತಿರುವು ಮತ್ತು ಮಾನನಷ್ಟ ಮೊಕದ್ದಮೆ

ಖಾಸಗಿಯಾಗಿ ವಿವಾದ ಬಗೆಹರಿಯದಿದ್ದಾಗ, ಕೇತನ್ ಕಕ್ಕರ್ ಸಾಮಾಜಿಕ ಜಾಲತಾಣಗಳಲ್ಲಿ ಸಲ್ಮಾನ್ ವಿರುದ್ಧ ಸರಣಿ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದರು. ಒಂದು ವಿಡಿಯೋದಲ್ಲಿ ಸಲ್ಮಾನ್ ಅವರನ್ನು ಬಾಬರ್ ಮತ್ತು ಔರಂಗಜೇಬ್‌ಗೆ ಹೋಲಿಸಿ, ಗಣಪತಿ ಹಾಗೂ ಅಯೋಧ್ಯೆ ದೇವಾಲಯದ ಪ್ರಸ್ತಾಪ ಮಾಡಿ ವಿವಾದಕ್ಕೆ ಧಾರ್ಮಿಕ ತಿರುವು ನೀಡಲು ಯತ್ನಿಸಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಸಲ್ಮಾನ್ ಖಾನ್ ಅವರು ಕಕ್ಕರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ಕೆಳ ನ್ಯಾಯಾಲಯದಲ್ಲಿ ತಕ್ಷಣದ ಪರಿಹಾರ ಸಿಗದ ಕಾರಣ ಸಲ್ಮಾನ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ಸಲ್ಮಾನ್ ಖಾನ್ ಆಪ್ತನ ಜಿಮ್ ಮೇಲೆ ಬಿಷ್ಣೊಯಿ ಗ್ಯಾಂಗ್ ದಾಳಿ

ಹೈಕೋರ್ಟ್ ನೀಡಿದ ಖಡಕ್ ಎಚ್ಚರಿಕೆ

ಪ್ರಕರಣದ ತೀರ್ಪು ನೀಡಿರುವ ಬಾಂಬೆ ಹೈಕೋರ್ಟ್, ವಿಷಯ ನ್ಯಾಯಾಲಯದಲ್ಲಿ ಬಾಕಿ ಇರುವಾಗ ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿರುವುದನ್ನು ಪ್ರಶ್ನಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಲಭವಾಗಿ ನಮ್ಮ ಅಭಿಪ್ರಾಯ ಹೇಳಬಹುದು ಎಂದಾಕ್ಷಣ, ಇನ್ನೊಬ್ಬರ ಪ್ರತಿಷ್ಠೆಗೆ ಕಳಂಕ ತರುವಂತೆ ದೂಷಿಸುವುದು ಸರಿಯಲ್ಲ ಎಂದು ಕೋರ್ಟ್ ಕಕ್ಕರ್ ಅವರಿಗೆ ಎಚ್ಚರಿಕೆ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us