
ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಪನ್ವೇಲ್ ಫಾರ್ಮ್‌ಹೌಸ್ ಸದಾ ಸುದ್ದಿಯಲ್ಲಿರುತ್ತದೆ. ಸಿನಿಮಾ ತಾರೆಯರು ಹಾಗೂ ಆಪ್ತರಿಂದ ತುಂಬಿ ತುಳುಕುವ ಈ ಐಷಾರಾಮಿ ಫಾರ್ಮ್‌ಹೌಸ್ ಪ್ರವೇಶದ ಬಗ್ಗೆ ನಟನ ಸೋದರ ಭಾವ ಆಯುಷ್ ಶರ್ಮಾ ಇತ್ತೀಚಿನ ಸಂದರ್ಶನವೊಂದರಲ್ಲಿ ಅತ್ಯಂತ ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
‘ದಿ ಲಲ್ಲನ್‌ಟಾಪ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆಯುಷ್, ‘ಸಲ್ಮಾನ್ ಖಾನ್ ಅವರ ಫಾರ್ಮ್‌ಹೌಸ್‌ಗೆ ಯಾರೂ ಅಷ್ಟು ಸುಲಭವಾಗಿ ಹೋಗಲು ಸಾಧ್ಯವಿಲ್ಲ. ಸ್ವತಃ ಸಲ್ಮಾನ್ ಅವರೇ ಆಹ್ವಾನ ನೀಡಿದವರಿಗೆ ಮಾತ್ರ ಅಲ್ಲಿಗೆ ಎಂಟ್ರಿ ಇರುತ್ತದೆ. ಭಾಯ್ ಅನುಮತಿಯಿಲ್ಲದೆ ಯಾರೂ ಆ ಜಾಗಕ್ಕೆ ಕಾಲಿಡಲು ಸಾಧ್ಯವಿಲ್ಲ’ ಎಂದಿದ್ದಾರೆ.
ಫಾರ್ಮ್‌ಹೌಸ್ ಒಳಗಿನ ಮತ್ತೊಂದು ಮಜಾದ ವಿಚಾರವನ್ನು ಹಂಚಿಕೊಂಡ ಆಯುಷ್, ‘ಅಲ್ಲಿಗೆ ಹೋದ ಮೇಲೆ ಇನ್ನೊಂದು ಕುತೂಹಲಕಾರಿ ಘಟನೆ ನಡೆಯುತ್ತದೆ. ಅತಿಥಿಗಳು ತಮ್ಮ ಇಷ್ಟದಂತೆ ಅಲ್ಲಿಗೆ ಹೋಗಬಹುದು. ಆದರೆ, ಅಲ್ಲಿಂದ ಯಾವಾಗ ಹೊರಡಬೇಕು ಎಂಬುದನ್ನು ಸಲ್ಮಾನ್ ಖಾನ್ ಅವರೇ ನಿರ್ಧರಿಸುತ್ತಾರೆ! ಅವರು ಗ್ರೀನ್ ಸಿಗ್ನಲ್ ಕೊಡುವವರೆಗೂ ಅತಿಥಿಗಳು ಅಲ್ಲೇ ಕಾಯಬೇಕಾಗುತ್ತದೆ’ ಎಂದು ನಗುತ್ತಾ ರಹಸ್ಯ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ ವಿಡಿಯೋ ನೋಡಿ ಅಭಿಮಾನಿಗಳಲ್ಲಿ ಆತಂಕ: ಸಲ್ಲುಗೆ ಕಾಡುತ್ತಿದೆಯೇ ಅನಾರೋಗ್ಯ?
ಇದೇ ಸಂದರ್ಶನದಲ್ಲಿ ಆಯುಷ್, ತಾವು ನಟನಾಗಲು ಹೆಣಗಾಡುತ್ತಿದ್ದ ದಿನಗಳಲ್ಲಿ ಸಲ್ಮಾನ್ ಖಾನ್ ಅವರನ್ನು ಮೊದಲ ಬಾರಿಗೆ ಭೇಟಿಯಾದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. ‘ಆಗ ಸಲ್ಮಾನ್ ನನ್ನನ್ನು ನೋಡಿ, ನಿನ್ನಲ್ಲಿ ಉತ್ತಮ ನಟನಾಗುವ ಸಾಮರ್ಥ್ಯವಿದೆ. ಆದರೆ ನೀನಿನ್ನೂ ಸಂಪೂರ್ಣವಾಗಿ ಸಿದ್ಧವಾಗಿಲ್ಲ ಎಂದು ನೇರವಾಗಿಯೇ ಹೇಳಿದರು. ಅಲ್ಲದೆ, ನಟನೆಯ ಜೊತೆಗೆ ಇತರ ವಿಷಯಗಳ ಮೇಲೂ ಗಮನಹರಿಸಿ ಶ್ರಮಪಡುವಂತೆ ಸಲಹೆ ನೀಡಿದ್ದರು’ ಎಂದು ಹಳೇ ನೆನಪನ್ನು ಹಂಚಿಕೊಂಡಿದ್ದಾರೆ.
ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಖಾನ್ ಮತ್ತು ಆಯುಷ್ ಶರ್ಮಾ ಅವರ ವಿವಾಹವು ನವೆಂಬರ್ 18, 2014ರಂದು ಹೈದರಾಬಾದ್‌ನ ಐತಿಹಾಸಿಕ ಫಲಕ್ನುಮಾ ಅರಮನೆಯಲ್ಲಿ ನಡೆದಿತ್ತು. ಪ್ರಸ್ತುತ ಈ ದಂಪತಿಗೆ ಅಹಿಲ್ ಮತ್ತು ಆಯತ್ ಎಂಬ ಇಬ್ಬರು ಮಕ್ಕಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.