Salman Khan: ‘ವೈರಿಗೂ ಆ ನೋವು ಬೇಡ’; ತಮಗೆ ಬಂದಿದ್ದ ಅಪರೂಪದ ಕಾಯಿಲೆ ಬಗ್ಗೆ ಹೇಳಿದ ಸಲ್ಮಾನ್ ಖಾನ್
ಸಲ್ಮಾನ್ ಖಾನ್ ಅವರು 7.5 ವರ್ಷಗಳ ಕಾಲ ಟ್ರೈಜಿಮಿನಲ್ ನರಶೂಲೆಯಿಂದ ಬಳಲುತ್ತಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಈ ಅಪರೂಪದ ಕಾಯಿಲೆಯಿಂದ ಅವರಿಗೆ ಅಸಹ್ಯಕರ ನೋವು ಉಂಟಾಗುತ್ತಿತ್ತು, ಅದು ತಿನ್ನುವುದು ಮತ್ತು ಮಾತನಾಡುವುದನ್ನು ಕೂಡ ಕಷ್ಟಕರವಾಗಿಸಿತ್ತು. ಅವರು ಈ ನೋವನ್ನು 'ಶತ್ರುವಿಗೂ ಬೇಡ' ಎಂದು ವಿವರಿಸಿದ್ದಾರೆ. ಈ ಕಾಯಿಲೆಯ ಬಗ್ಗೆ ಅವರ ಅನುಭವಗಳನ್ನು ಅವರು ಹಂಚಿಕೊಂಡಿದ್ದಾರೆ.

ಸಲ್ಮಾನ್ ಖಾನ್ ಅವರು ಬಾಲಿವುಡ್ನಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ವಿಚಿತ್ರ ಕಾಯಿಲೆ ಇರೋ ಬಗ್ಗೆ ಹೇಳಿಕೊಂಡಿದ್ದಾರೆ. ಅವರಿಗೆ ಟ್ರೈಜಿಮಿನಲ್ ನ್ಯೂರಾಲ್ಜಿಯಾ ಎಂಬ ಸಮಸ್ಯೆ ಇತ್ತಂತೆ. ಈ ಬಗ್ಗೆ ಅವರಿಗೆ ಲಾರಾ ದತ್ತ ಜೊತೆ ‘ಪಾರ್ಟ್ನರ್’ ಸಿನಿಮಾ ಶೂಟ್ ಮಾಡುವಾಗ ತಿಳಿಯಿತು. ಲಾರಾ ಅವರು ಸಲ್ಲು ಗಲ್ಲದಿಂದ ಒಂದು ಕೂದಲನ್ನು ಕಿತ್ತರಂತೆ. ಆಗ ಈ ಬಗ್ಗೆ ಗೊತ್ತಾಯಿತು.
ಪ್ರೈಮ್ ವಿಡಿಯೋದ ‘ಟೂ ಮಚ್’ ಟಾಕ್ಶೋಗೆ ಸಲ್ಲು ಬಂದಿದ್ದಾರೆ. ಆಮಿರ್ ಖಾನ್ ಕೂಡ ಈ ಸಂದರ್ಭದಲ್ಲಿ ಇದ್ದರು. ಈ ಶೋ ಗುರುವಾರ ಬರಲಿದೆ. ‘ಬೈಪಾಸ್ ಶಸ್ತ್ರಚಿಕಿತ್ಸೆಗಳು, ಹೃದಯ ಕಾಯಿಲೆಗಳು ಮತ್ತು ಇನ್ನೂ ಅನೇಕ ಸಮಸ್ಯೆಗಳಿಂದ ಬಳಲುತ್ತಿರುವ ಬಹಳಷ್ಟು ಜನರಿದ್ದಾರೆ. ನನಗೆ ಟ್ರೈಜಿಮಿನಲ್ ನರಶೂಲೆ ಇತ್ತು. ಶತ್ರುವಿಗೂ ಆ ನೋವು ಇರಬೇಕೆಂದು ನೀವು ಬಯಸುವುದಿಲ್ಲ. ನನಗೆ ಏಳೂವರೆ ವರ್ಷಗಳ ಕಾಲ ಅದು ಇತ್ತು. ಪ್ರತಿ 4-5 ನಿಮಿಷಗಳಿಗೊಮ್ಮೆ ಅದು ನೋವುಂಟು ಮಾಡುತ್ತಿತ್ತು’ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.
‘ಮಾತನಾಡುವಾಗ ಇದ್ದಕ್ಕಿದ್ದಂತೆ ಆ ನೋವು ಬರುತ್ತಿತ್ತು. ಬೆಳಗ್ಗಿನ ತಿಂಡಿ ಸೇವಿಸಲು ಸುಮಾರು ಒಂದೂವರೆ ಗಂಟೆ ತೆಗೆದುಕೊಳ್ಳುತ್ತಿತ್ತು. ಹೀಗಾಗಿ ನಾನು ನೇರವಾಗಿ ಊಟಕ್ಕೆ ಹೋಗುತ್ತಿದ್ದೆ. ಆಮ್ಲೆಟ್ನ ಅಗೆದು ತಿನ್ನಲು ಸಾಧ್ಯವಾಗದ ಕಾರಣ, ನಾನು ಬಲವಂತದಿಂದ ತಿನ್ನಬೇಕಿತ್ತು’ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.
ಇದನ್ನೂ ಓದಿ:ಬಿಗ್ ಬಾಸ್ನಲ್ಲಿ ಸಲ್ಮಾನ್ ಖಾನ್ಗೆ ರಕ್ಷಣೆ ನೀಡಲು ದೊಡ್ಡ ನಿರ್ಧಾರ
ಆರಂಭದಲ್ಲಿ ಜನರು ಸಲ್ಮಾನ್ ಹಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಭಾವಿಸಿದ್ದರು. ಅವರು ಸುಮಾರು 750 ಎಂಜಿ ಪೇನ್ ಕಿಲ್ಲರ್ ಟ್ಯಾಬ್ಲೆಟ್ ತೆಗೆದುಕೊಳ್ಳುತ್ತಿದ್ದರು. ಆದರೂ ಅದು ಸಹ ಸಹಾಯಕ್ಕೆ ಬರುತ್ತಿರಲಿಲ್ಲ. ‘ನಾನು ಪಾರ್ಟ್ನರ್ ಸಿನಿಮಾ ಮಾಡುತ್ತಿದ್ದೆ. ಲಾರಾ ಕೂಡ ಇದ್ದರು. ಅವರು ನನ್ನ ಮುಖದಿಂದ ಕೂದಲು ಕಿತ್ತರು. ನನಗೆ ಅತೀವ ನೋವಾಯಿತು. ನಾನು ಆಗ ಜೋಕ್ ಆಗಿ ತೆಗೆದುಕೊಂಡಿದ್ದೆ’ ಎಂದು ಅವರು ಹೇಳಿದ್ದಾರೆ.
ಟ್ರೈಜಿಮಿನಲ್ ನ್ಯೂರಾಲ್ಜಿಯಾ ಎಂದರೆ ಮುಖದ ಒಂದು ಬದಿಯಲ್ಲಿ ಹಠಾತ್, ತೀಕ್ಷ್ಣವಾದ, ವಿದ್ಯುತ್ ಆಘಾತದಂತಹ ನೋವು ಕಾಣಿಸಿಕೊಳ್ಳುವುದು. ಹಲ್ಲುಜ್ಜುವಾಗ, ಮಾತನಾಡುವುದು ನೋವು ಹೆಚ್ಚಬಹುದು. ಟ್ರೈಜಿಮಿನಲ್ ನರವನ್ನು ಒಂದು ರಕ್ತನಾಳವು ಸಂಕುಚಿತಗೊಳಿಸುವುದರಿಂದ ಸಂಭವಿಸುತ್ತದೆ ಎಂದು ವೈದ್ಯ ಲೋಕ ಹೇಳುತ್ತದೆ. ಟ್ರೈಜಿಮಿನಲ್ ನ್ಯೂರಾಲ್ಜಿಯಾ ಒಂದು ದೀರ್ಘಕಾಲದ ಸಮಸ್ಯೆ ಆಗಿದ್ದು, ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ, ನೋವನ್ನು ಕಡಿಮೆ ಮಾಡಲು ಮತ್ತು ನಿಯಂತ್ರಿಸಲು ಹಲವಾರು ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಆಯ್ಕೆಗಳು ಲಭ್ಯವಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



