ಬಾಲಿವುಡ್ನ ಖ್ಯಾತ ನಟ ಸಂಜಯ್ ದತ್ ಅವರಿಗೆ ಇಂದು (ಜುಲೈ 29) ಜನ್ಮದಿನದ (Sanjay Dutt Birthday) ಸಡಗರ. ವಿಶ್ವಾದ್ಯಂತ ಅವರು ಅಭಿಮಾನಿಗಳನ್ನು ಹೊಂದಿದ್ದಾರೆ. ಎಲ್ಲರಿಂದಲೂ ಅವರಿಗೆ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. 63ನೇ ವಸಂತಕ್ಕೆ ಸಂಜಯ್ ದತ್ (Sanjay Dutt) ಕಾಲಿಟ್ಟಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ಹಲವು ದಶಕಗಳ ಅನುಭವ ಇದೆ. ಈಗಲೂ ಕೂಡ ಅವರು ಸಖತ್ ಬೇಡಿಕೆ ಉಳಿಸಿಕೊಂಡಿದ್ದಾರೆ. ಅದರಲ್ಲೂ ‘ಕೆಜಿಎಫ್: ಚಾಪ್ಟರ್ 2’ (KGF Chapter 2) ಸಿನಿಮಾ ಬಿಡುಗಡೆ ಆದ ಬಳಿಕ ಅವರಿಗೆ ಪ್ಯಾನ್ ಇಂಡಿಯಾ ಇಮೇಜ್ ಬಂತು. ಈ ಚಿತ್ರದಲ್ಲಿ ಅವರು ಮಾಡಿದ ಅಧೀರ ಪಾತ್ರವನ್ನು ಪ್ರೇಕ್ಷಕರು ಸಖತ್ ಮೆಚ್ಚಿಕೊಂಡಿದ್ದಾರೆ. ಹಲವು ಚಿತ್ರಗಳಲ್ಲಿ ಸಂಜಯ್ ದತ್ ಬ್ಯುಸಿ ಆಗಿದ್ದಾರೆ. ಹೊಸ ಹೊಸ ಆಫರ್ಗಳು ಅವರನ್ನು ಹುಡುಕಿಕೊಂಡು ಬರುತ್ತಿದೆ. ಅನಾರೋಗ್ಯವನ್ನೂ ಮೆಟ್ಟಿನಿಂತು ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ.
ಫಿಟ್ನೆಸ್ ಬಗ್ಗೆ ಸಂಜಯ್ ದತ್ ಅವರು ಸದಾ ಕಾಳಜಿ ವಹಿಸುತ್ತಾರೆ. 63ನೇ ವಯಸ್ಸಿನಲ್ಲೂ ಅವರು ದೇಹವನ್ನು ಕಟ್ಟುಮಸ್ತಾಗಿ ಇಟ್ಟುಕೊಂಡಿದ್ದಾರೆ. ಎಂದಿಗೂ ಅವರು ವರ್ಕೌಟ್ ತಪ್ಪಿಸುವುದಿಲ್ಲ. ಈ ವಿಚಾರದಲ್ಲಿ ಸಂಜಯ್ ದತ್ ಅನೇಕರಿಗೆ ಮಾದರಿ ಆಗಿದ್ದಾರೆ. ಎಲ್ಲ ಬಗೆಯ ಪಾತ್ರಗಳನ್ನೂ ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ.
ಸಂಜಯ್ ದತ್ ಹುಟ್ಟುಹಬ್ಬದ ಪ್ರಯುಕ್ತ ಅವರ ಮೂರನೇ ಪತ್ನಿ ಮಾನ್ಯತಾ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ. ವರ್ಕೌಟ್ ಮಾಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದು, ‘ನನ್ನ ರಾಕ್ಸ್ಟಾರ್ಗೆ ಹುಟ್ಟುಹಬ್ಬದ ಶುಭಾಶಯಗಳು. ಎಂದೆಂದಿಗೂ ನಮಗೆ ಸ್ಫೂರ್ತಿ ನೀಡುತ್ತಿರಿ’ ಎಂದು ಮಾನ್ಯತಾ ಅವರು ಹಾರೈಸಿದ್ದಾರೆ. ಅಭಿಮಾನಿಗಳು, ಸೆಲೆಬ್ರಿಟಿಗಳು, ಆಪ್ತರು ಕೂಡ ಸಂಜಯ್ ದತ್ ಜನ್ಮದಿನಕ್ಕೆ ವಿಶ್ ಮಾಡುತ್ತಿದ್ದಾರೆ.
2022ರ ವರ್ಷ ಸಂಜಯ್ ದತ್ ಅವರಿಗೆ ಸಖತ್ ವಿಶೇಷ. ಈ ವರ್ಷ ಅವರು ನಟಿಸಿದ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ತೆರೆಕಂಡು ಅದ್ಭುತ ಯಶಸ್ಸು ಪಡೆಯಿತು. ಅಧೀರ ಪಾತ್ರದಲ್ಲಿ ಸಂಜು ಬಾಬಾ ಮಿಂಚಿದರು. ಆ ಮೂಲಕ ಅವರ ಬೇಡಿಕೆ ಹೆಚ್ಚಿತು. ‘ಕೆಜಿಎಫ್ 2’ ತಂಡದ ಜೊತೆ ಕೆಲಸ ಮಾಡಿದ್ದಕ್ಕೆ ಅವರಿಗೆ ಸಖತ್ ಖುಷಿ ಇದೆ. ದಕ್ಷಿಣ ಭಾರತದ ಸಿನಿಮಾಗಳನ್ನು ಅವರು ಹಾಡಿ ಹೊಗಳುತ್ತಿದ್ದಾರೆ. ಸಂಜಯ್ ದತ್ ನಟಿಸಿದ ‘ಶಂಷೇರಾ’ ಚಿತ್ರ ಇತ್ತೀಚೆಗೆ ಬಿಡುಗಡೆ ಆಯಿತು. ಆದರೆ ಅಂದುಕೊಂಡ ಮಟ್ಟಕ್ಕೆ ಆ ಸಿನಿಮಾ ಕಲೆಕ್ಷನ್ ಮಾಡಿಲ್ಲ.
Published On - 9:17 am, Fri, 29 July 22