ಸಂಜಯ್ ದತ್ (Sanjay Dutt) ಅವರು ಕಳೆದ ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿದ್ದಾರೆ. ವೃತ್ತಿ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಅವರು ಕಂಡಿದ್ದಾರೆ. ಸಂಜಯ್ ದತ್ ಅವರು ನಟನೆ ಬಿಟ್ಟು ಬೇರಾವ ವಿಚಾರಕ್ಕೂ ತಲೆಕೆಡಿಸಿಕೊಂಡವರಲ್ಲ. ‘ಹಿಂದಿ ಬಿಗ್ ಬಾಸ್ 5’ಅನ್ನು ಸಂಜಯ್ ದತ್ ಹೋಸ್ಟ್ ಮಾಡಿದ್ದು ಬಿಟ್ಟರೆ, ಕಿರುತೆರೆಯಲ್ಲಿ ಅವರು ಕೆಲಸ ಮಾಡಿಲ್ಲ. ಈಗ ಸಂಜಯ್ ದತ್ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ನಲವತ್ತು ವರ್ಷಗಳ ಅನುಭವ ಹಾಗೂ ಗಳಿಕೆಯನ್ನು ಕೂಡಿಸಿ ಅವರು ನಿರ್ಮಾಣ ಸಂಸ್ಥೆ (Production House) ಒಂದನ್ನು ಆರಂಭಿಸಿದ್ದಾರೆ. ಭಿನ್ನ ಸಿನಿಮಾಗಳನ್ನು ನಿರ್ಮಾಣ ಮಾಡಬೇಕು ಎನ್ನುವ ಆಲೋಚನೆ ಅವರದ್ದು. ಈ ಮೂಲಕ ನಿರ್ಮಾಪಕರಾಗಿಯೂ ಸಂಜಯ್ ದತ್ ಈಗ ಬಡ್ತಿ ಪಡೆದಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.
2010ಕ್ಕೂ ಮೊದಲು ಬಾಲಿವುಡ್ನಲ್ಲಿ ಸಾಕಷ್ಟು ಸೂಪರ್ಹಿಟ್ ಚಿತ್ರಗಳು ತೆರೆಗೆ ಬಂದಿವೆ. ಅದಕ್ಕೆ ಹೋಲಿಕೆ ಮಾಡಿದರೆ, ಈಗ ಬಾಲಿವುಡ್ ಕೊಂಚ ಮಂಕಾಗಿದೆ. ಆ ಸುವರ್ಣ ಯುಗವನ್ನು ಮರಳಿ ತರಬೇಕು ಎನ್ನುವ ಕನಸಿನೊಂದಿಗೆ ಈ ನಿರ್ಮಾಣ ಸಂಸ್ಥೆ ಆರಂಭವಾಗಿದೆ. ‘ಥ್ರೀ ಡೈಮೆನ್ಶನ್ ಮೋಷನ್ ಪಿಕ್ಚರ್ಸ್’ ಎಂಬ ಹೆಸರನ್ನು ಸಂಜಯ್ ದತ್ ಈ ನಿರ್ಮಾಣ ಸಂಸ್ಥೆಗೆ ಇಟ್ಟಿದ್ದಾರೆ.
ಬಾಲಿವುಡ್ನಲ್ಲಿ ಭಿನ್ನ ಸಿನಿಮಾಗಳನ್ನು ಮಾಡಬೇಕು ಎನ್ನುವ ಉದ್ದೇಶದೊಂದಿಗೆ ಅವರು ಈ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಆ ಬಗ್ಗೆ ಅವರು ಮಾತನಾಡಿದ್ದಾರೆ. ‘ನಾವು ಚಿತ್ರರಂಗಕ್ಕೆ ಕಾಲಿಟ್ಟಾಗ ಹೀರೋಯಿಸಂ ಶುರುಮಾಡಿದೆವು. ಅದು ಈಗ ನಿಂತಿದೆ ಎನ್ನುವ ಭಾವನೆ ಕಾಡುತ್ತಿದೆ. ಹೀಗಾಗಿ, ಅದನ್ನು ಮತ್ತೆ ತರಬೇಕಿದೆ. ಅದಕ್ಕಾಗಿ ಈ ಸಿನಿಮಾ’ ಎಂದಿದ್ದಾರೆ ಸಂಜಯ್ ದತ್.
1981ರಲ್ಲಿ ತೆರೆಗೆ ಬಂದ ‘ರಾಕಿ’ ಚಿತ್ರದ ಮೂಲಕ ಹೀರೋ ಆಗಿ ಬಣ್ಣದ ಬದುಕು ಆರಂಭಿಸಿದರು ಸಂಜಯ್ ದತ್. 80 ಹಾಗೂ 90ರ ದಶಕದಲ್ಲಿ ಹಿಂದಿ ಚಿತ್ರರಂಗದಲ್ಲಿ ಮುಂಚೂಣಿಯಲ್ಲಿದ್ದರು. ಸಿದ್ಧಾಂತ್ ಸಚ್ದೇವ್ ನಿರ್ದೇಶನದ ಹಾರರ್-ಕಾಮಿಡಿ ಚಿತ್ರವನ್ನು ‘ಥ್ರೀ ಡೈಮೆನ್ಶನ್ ಮೋಷನ್ ಪಿಕ್ಚರ್ಸ್’ ನಿರ್ಮಾಣ ಮಾಡುತ್ತಿದೆ. ನಾಲ್ಕು ಹೊಸ ಮುಖಗಳು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಇನ್ನೂ ಹೆಸರು ಇಟ್ಟಿಲ್ಲ.
ತಮ್ಮ ಸಿನಿಮಾಗಳ ಬಗ್ಗೆ ಇತ್ತೀಚೆಗೆ ಅವರು ಮಾತನಾಡಿದ್ದರು. ‘2022 ಆರಂಭದಲ್ಲೇ ನನ್ನ ಮೂರು ಚಿತ್ರಗಳು ಬಿಡುಗಡೆ ಆಗಬೇಕಿದೆ. ಇದಕ್ಕೆ ನಾನು ತುಂಬಾ ಉತ್ಸುಕನಾಗಿದ್ದೇನೆ. ಈ ಸಿನಿಮಾಗಳು ರಿಲೀಸ್ ಆಗುವುದಕ್ಕೆ ಎದುರು ನೋಡುತ್ತಿದ್ದೇನೆ. ಆದರೆ, ಕೊವಿಡ್ ಹೆಚ್ಚುತ್ತಿದೆ. ಹೀಗಾಗಿ ಎಲ್ಲವೂ ಅನಿಶ್ಚಿತವಾಗಿದೆ. ‘ಶಂಶೇರಾ’, ‘ಕೆಜಿಎಫ್ 2’ ಮತ್ತು ‘ಪೃಥ್ವಿರಾಜ್’ ಈ ಮೂರು ಚಿತ್ರಗಳು ಥಿಯೇಟರ್ ರಿಲೀಸ್ಗಾಗಿಯೇ ಮಾಡಿದ್ದಾಗಿದೆ’ ಎಂದಿದ್ದರು ಸಂಜಯ್ ದತ್. ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾ ಏಪ್ರಿಲ್ 14ರಂದು ತೆರೆಗೆ ಬರುತ್ತಿದೆ.
ಇದನ್ನೂ ಓದಿ: ‘ಕೆಜಿಎಫ್ 2’ ರಿಲೀಸ್ಗೂ ಮುನ್ನವೇ ಗುಡ್ ನ್ಯೂಸ್; ಮತ್ತೆ ಒಂದಾಗ್ತಾರೆ ಸಂಜಯ್ ದತ್-ರವೀನಾ ಟಂಡನ್
ಆಮಿರ್ ಖಾನ್ ವಿರುದ್ಧ ರವೀನಾ ಟಂಡನ್ ಸೇಡು; ದಶಕಗಳ ಬಳಿಕ ಬಾಯ್ಬಿಟ್ಟ ‘ಕೆಜಿಎಫ್ 2’ ನಟಿ
Published On - 8:51 am, Tue, 8 February 22