
ನಟ ರಣಬೀರ್ ಕಪೂರ್ (Ranbir Kapoor) ಅವರು ತಂದೆ ಆಗುತ್ತಿರುವ ಖುಷಿಯಲ್ಲಿ ಇದ್ದಾರೆ. ಹಲವು ವರ್ಷಗಳ ಕಾಲ ಅವರು ಆಲಿಯಾ ಭಟ್ ಜೊತೆ ಪ್ರೀತಿಯಲ್ಲಿ ಮುಳುಗಿದ್ದರು. ಈ ವರ್ಷ ಅದ್ದೂರಿಯಾಗಿ ಅವರ ಮದುವೆ ನೆರವೇರಿತು. ವೈವಾಹಿಕ ಜೀವನಕ್ಕೆ ಕಾಲಿಟ್ಟು ಎರಡೂವರೆ ತಿಂಗಳು ಕಳೆಯುವುದರೊಳಗೆ ಆಲಿಯಾ ಭಟ್ (Alia Bhatt) ಪ್ರೆಗ್ನೆಂಟ್ ಎಂಬ ವಿಚಾರ ಹೊರಬಿತ್ತು. ಆ ಸುದ್ದಿ ಕೇಳಿ ಫ್ಯಾನ್ಸ್ ಅಚ್ಚರಿಪಟ್ಟರು. ಈಗ ರಣಬೀರ್ ಕಪೂರ್ ಅವರು ತಮಗೆ ಹೆಣ್ಣು ಮಗು (Baby Girl) ಬೇಕು ಎಂದು ಆಸೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ, ಮಕ್ಕಳನ್ನು ನೋಡಿಕೊಳ್ಳುವುದು ಹೇಗೆ ಎಂಬುದನ್ನು ಕೂಡ ಅವರು ಕಲಿಯುತ್ತಿದ್ದಾರೆ. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಣಬೀರ್ ಕಪೂರ್ ಅವರು ‘ಶಂಷೇರಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಈಗ ಬಿಡುಗಡೆಗೆ ಹತ್ತಿರವಾಗುತ್ತಿದ್ದು, ಪ್ರಚಾರ ಕಾರ್ಯದಲ್ಲಿ ಅವರು ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಟಿವಿ ಕಾರ್ಯಕ್ರಮದಲ್ಲಿ ಅವರು ಚಿತ್ರದ ಪ್ರಚಾರ ಮಾಡಿದರು. ಈ ವೇಳೆ ಅವರಿಗೆ ವೈಯಕ್ತಿಕ ಜೀವನದ ಬಗ್ಗೆಯೂ ಪ್ರಶ್ನೆ ಎದುರಾಯಿತು. ಗಂಡು ಮಗು ಅಥವಾ ಹೆಣ್ಣು ಮಗು, ಎರಡರಲ್ಲಿ ಯಾವುದು ಬೇಕು ಎಂದು ಕೇಳಿದ ಪ್ರಶ್ನೆಗೆ ರಣಬೀರ್ ಉತ್ತರಿಸಿದ್ದಾರೆ. ‘ಹೆಣ್ಣು ಮಗು ಬೇಕು’ ಎಂದು ಅವರು ಹೇಳಿದ್ದಾರೆ.
ಪುಟ್ಟ ಮಕ್ಕಳನ್ನು ನೋಡಿಕೊಳ್ಳುವುದು ಸುಲಭದ ಕೆಲಸ ಅಲ್ಲ. ಅದನ್ನು ರಣಬೀರ್ ಕಪೂರ್ ಈಗಲೇ ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಮಗುವನ್ನು ಹೇಗೆ ಎತ್ತಿಕೊಳ್ಳಬೇಕು? ಡೈಪರ್ ಬದಲಿಸುವುದು ಹೇಗೆ? ಬಾಟಲಿಯಲ್ಲಿ ಹಾಲು ಕುಡಿಸುವುದು ಹೇಗೆ ಎಂಬಿತ್ಯಾದಿ ಪಾಠಗಳನ್ನು ಅವರು ಕಲಿಯುತ್ತಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.
ಜುಲೈ 22ರಂದು ‘ಶಂಷೇರಾ’ ಚಿತ್ರ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರು ದ್ವಿಪಾತ್ರ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ವಾಣಿ ಕಪೂರ್ ನಟಿಸಿದ್ದಾರೆ. ಈಗಾಗಲೇ ಟ್ರೇಲರ್ ಧೂಳೆಬ್ಬಿಸಿದೆ. ಅದ್ದೂರಿ ಬಜೆಟ್ನಲ್ಲಿ ಈ ಚಿತ್ರ ಮೂಡಿಬಂದಿದೆ. ಸಂಜಯ್ ದತ್ ಅವರು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ಶಂಷೇರಾ’ ಚಿತ್ರ ನಿರೀಕ್ಷೆ ಮೂಡಿಸಿದೆ. ಇನ್ನು, ರಣಬೀರ್ ಕಪೂರ್ ನಟಿಸಿರುವ ‘ಬ್ರಹ್ಮಾಸ್ತ್ರ’ ಚಿತ್ರ ಕೂಡ ಹೈಪ್ ಸೃಷ್ಟಿ ಮಾಡಿದೆ.