ಸೆಲೆಬ್ರಿಟಿಗಳ ಲೋಕದಲ್ಲಿ ಲವ್ ಆಗೋದು ಎಷ್ಟು ಸುಲಭವೋ ಬ್ರೇಕಪ್ ಆಗೋದು ಕೂಡ ಅಷ್ಟೇ ಸುಲಭ ಎಂಬಂತಾಗಿದೆ. ಸಂಬಂಧ ಚಿಗುರಿದ ಬಳಿಕ ಕೆಲವೇ ತಿಂಗಳು ಕಳೆಯುವುದರೊಳಗೆ ಆ ಸಂಬಂಧಕ್ಕೆ ಎಳ್ಳು-ನೀರು ಬಿಡಲಾಗುತ್ತದೆ. ಅದನ್ನು ಕೆಲವರು ಒಪ್ಪಿಕೊಳ್ಳುತ್ತಾರೆ. ಇನ್ನೂ ಕೆಲವರು ಮುಚ್ಚಿಡುತ್ತಾರೆ. ನಟಿ ಶಮಿತಾ ಶೆಟ್ಟಿ (Shamita Shetty) ಅವರು ತಮ್ಮ ರಿಲೇಷನ್ಶಿಪ್ ಬಗ್ಗೆ ಈಗ ನೇರವಾಗಿ ಸ್ಪಷ್ಟನೆ ನೀಡಿದ್ದಾರೆ. ಅವರ ಬದುಕಿನಲ್ಲಿ ಬ್ರೇಕಪ್ ಬಿರುಗಾಳಿ ಬೀಸಿದೆ. ಒಂದಷ್ಟು ದಿನಗಳ ಕಾಲ ನಟ ರಾಕೇಶ್ ಬಾಪಟ್ (Raqesh Bapat) ಜೊತೆ ಓಡಾಡುತ್ತಿದ್ದ ಶಮಿತಾ ಶೆಟ್ಟಿ ಈಗ ಪ್ರೀತಿ-ಪ್ರೇಮಕ್ಕೆ ಪೂರ್ಣವಿರಾಮ ಹಾಕಿದ್ದಾರೆ. ರಾಕೇಶ್ ಬಾಪಟ್ ಜೊತೆ ತಮಗೆ ಬ್ರೇಕಪ್ (Shamita Shetty Break Up) ಆಗಿದೆ ಎಂಬುದನ್ನು ಸೋಶಿಯಲ್ ಮೀಡಿಯಾ ಮೂಲಕ ಅವರು ಖಚಿತ ಪಡಿಸಿದ್ದಾರೆ. ಬಿಗ್ ಬಾಸ್ ಒಟಿಟಿ ಮೂಲಕ ಇವರಿಬ್ಬರು ಒಂದಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇಬ್ಬರ ನಡುವಿನ ಸಂಬಂಧ ಹಳಸಿತು.
ಶಮಿತಾ ಶೆಟ್ಟಿ ಅವರಿಗೆ ಈಗ 43 ವರ್ಷ ವಯಸ್ಸು. ಶಿಲ್ಪಾ ಶೆಟ್ಟಿಯ ಸಹೋದರಿ ಎಂಬ ಕಾರಣಕ್ಕೆ ಅವರಿಗೆ ಹೆಚ್ಚು ಪ್ರಚಾರ ಸಿಗುತ್ತದೆ. ರಾಕೇಶ್ ಬಾಪಟ್ ಜೊತೆ ಅವರು ಡೇಟಿಂಗ್ ಮಾಡಲು ಆರಂಭಿಸಿದಾಗ ಅಭಿಮಾನಿಗಳಿಗೆ ಖುಷಿ ಆಗಿತ್ತು. ಇನ್ನಾದರೂ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂದು ಎಲ್ಲರೂ ಊಹಿಸಿದ್ದರು. ಬಿಗ್ ಬಾಸ್ ಒಟಿಟಿ ಮುಗಿದ ಬಳಿಕವೂ ಅನೇಕ ಬಾರಿ ರಾಕೇಶ್ ಬಾಪಟ್ ಮತ್ತು ಶಮಿತಾ ಶೆಟ್ಟಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆದರೆ ಇಬ್ಬರ ಸಂಬಂಧ ಮದುವೆ ಮಂಟಪದವರೆಗೆ ಬಂದಿಲ್ಲ.
ರಾಕೇಶ್ ಬಾಪಟ್ ಮತ್ತು ಶಮಿತಾ ಶೆಟ್ಟಿ ನಡುವೆ ಬ್ರೇಕಪ್ ಆಗಿದೆ ಎಂಬ ಸುದ್ದಿ ಹಲವು ದಿನಗಳಿಂದ ಕೇಳಿಬರುತ್ತಲೇ ಇತ್ತು. ಆದರೆ ಆ ಬಗ್ಗೆ ಯಾರೂ ಅಧಿಕೃತವಾಗಿ ಮಾತನಾಡಿರಲಿಲ್ಲ. ಈಗ ಶಮಿತಾ ಶೆಟ್ಟಿ ಅವರು ಖಚಿತಪಡಿಸಿದ್ದಾರೆ. ‘ಈ ವಿಚಾರವನ್ನು ಸ್ಪಷ್ಟಪಡಿಸುವುದು ತುಂಬ ಮುಖ್ಯ ಎನಿಸುತ್ತಿದೆ. ನಾನು ಮತ್ತು ರಾಕೇಶ್ ಬಾಪಟ್ ಜೊತೆಯಾಗಿಲ್ಲ. ಕಳೆದ ಕೆಲವು ಸಮಯದಿಂದ ನಾವು ದೂರ ಇದ್ದೇವೆ. ಆದರೆ ನಮಗೆ ಬೆಂಬಲ ನೀಡಿದ ಅಭಿಮಾನಿಗಳಿಗೆ ಧನ್ಯವಾದಗಳು. ಇನ್ಮುಂದೆ ಕೂಡ ನಮಗೆ ನಿಮ್ಮ ಪ್ರೀತಿ ನೀಡುವುದನ್ನು ಮುಂದುವರಿಸಿ’ ಎಂದು ಶಮಿತಾ ಶೆಟ್ಟಿ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.