ಕನ್ನಡಿಗರ ಮೇಲೆ ಸೋನು ನಿಗಂ ಸಿಟ್ಟು ಹೊಸದೇನಲ್ಲ, ಈ ಹಿಂದೆಯೂ ನಡೆದಿತ್ತು ಘಟನೆ
Sonu Nigam: ಗಾಯಕ ಸೋನು ನಿಗಂ ಕನ್ನಡಿಗರ ಬಗ್ಗೆ ನಿನ್ನೆ ಬೆಂಗಳೂರಿನ ಕಾಲೇಜು ಕಾರ್ಯಕ್ರಮದಲ್ಲಿ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿವೆ. ಕನ್ನಡ ಹಾಡು ಹಾಡುವಂತೆ ಕೇಳಿದ್ದಕ್ಕೆ, ‘ಕನ್ನಡ, ಕನ್ನಡ ಇದರಿಂದಲೇ ಪಹಲ್ಗಾಮ್ ದಾಳಿ ಆಗಿದೆ’ ಎಂದಿದ್ದಾರೆ. ಅಂದಹಾಗೆ ಕನ್ನಡಿಗರ ವಿರುದ್ಧ ಸೋನು ನಿಗಂ ಸಿಟ್ಟಾಗಿರುವುದು ಇದು ಮೊದಲೇನೂ ಅಲ್ಲ.

ಸೋನು ನಿಗಂ (Sonu Nigam), ಬೆಂಗಳೂರಿನ ಕಾಲೇಜೊಂದರಲ್ಲಿ ಆಡಿರುವ ಮಾತುಗಳು ಕನ್ನಡಿಗರಲ್ಲಿ ತೀವ್ರ ಆಕ್ರೋಶ ಹುಟ್ಟುಹಾಕಿದೆ. ಸೋನು ನಿಗಂ ಅವರ ಕನ್ನಡದ ಹಾಡುಗಳನ್ನು ವರ್ಷಗಳಿಂದ ಕೇಳಿಕೊಂಡು ಬಂದಿರುವ ಅವರ ಅಭಿಮಾನಿಗಳಾಗಿರುವ ಹಲವು ಕನ್ನಡಿಗರಿಗೆ ಸೋನು ನಿಗಂ ಹೀಗೊಂದು ಮಾತು ಆಡಿದ್ದಾರೆಂದು ನಂಬಲೇ ಆಗುತ್ತಿಲ್ಲ. ಕೆಲವರಂತೂ ವೈರಲ್ ಆಗಿರುವ ವಿಡಿಯೋ ಎಡಿಟೆಡ್ ಇರಬಹುದು ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ, ಸೋನು ನಿಗಂ ಹೀಗೆ ದರ್ಪ, ದಾರ್ಷ್ಯದ ಮಾತಾಡಿರುವುದು ಇದು ಮೊದಲೇನಲ್ಲ. ಈ ಹಿಂದೆ ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿಯೂ ಅವರು ಹೀಗೆಯೇ ಕನ್ನಡಿಗರ ಮೇಲೆ ಸಿಟ್ಟಾಗಿದ್ದರು.
ಈಗ ಸಂಸದರಾಗಿರುವ ಸುಧಾಕರ್ ಅವರು ಆರೋಗ್ಯ ಸಚಿವರಾಗಿದ್ದಾಗ 2023ರ ಜನವರಿ ತಿಂಗಳಲ್ಲಿ ಬಲು ಅದ್ಧೂರಿಯಾಗಿ ಚಿಕ್ಕಬಳ್ಳಾಪುರ ಉತ್ಸವ ಕಾರ್ಯಕ್ರಮ ಆಯೋಜಿಸಿದ್ದರು. ಒಂದು ವಾರಗಳ ಕಾಲ ನಡೆದಿದ್ದ ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಹಲವು ಸ್ಟಾರ್ ನಟ, ನಟಿಯರ ಜೊತೆಗೆ ಸಂಗೀತಗಾರರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಒಬ್ಬೊಬ್ಬರಿಂದ ಒಂದೊಂದು ದಿನ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದಕ್ಕೆ ಸೋನು ನಿಗಂ ಸಹ ಒಂದು ದಿನ ಪ್ರದರ್ಶನ ನೀಡಿದ್ದರು. ನಿನ್ನೆಯ ಬೆಂಗಳೂರಿನ ಕಾರ್ಯಕ್ರಮದಲ್ಲಿ ಸೋನು ನಿಗಂ ಆಡಿದ ಮಾತುಗಳನ್ನೇ ಅಂದು ಚಿಕ್ಕಬಳ್ಳಾಪುರ ಕಾರ್ಯಕ್ರಮದಲ್ಲಿಯೂ ಆಡಿದ್ದರು!
ಚಿಕ್ಕಬಳ್ಳಾಪುರದಲ್ಲಿ ಲೈವ್ ಶೋ ಪ್ರಾರಂಭ ಮಾಡಿದ ಸೋನು ನಿಗಂ ಮೊದಲಿಗೆ ಒಂದರ ಹಿಂದೊಂದು ಹಿಂದಿ ಹಾಡುಗಳನ್ನು ಹಾಡಿದರು. ‘ಒಂದು ಹೊಸ ಐಟಂ ತಂದಿದ್ದೇನೆ, ಇದೇ ಮೊದಲಿಗೆ ನಿಮ್ಮ ಮುಂದೆ ಪ್ರದರ್ಶಿಸುತ್ತಿದ್ದೇನೆ’ ಎಂದು ಹೇಳಿ ಒಂದು ಹಿಂದಿ ಹಾಡು ಹಾಡಿದರು. ಅದು ತುಸುವೂ ಚೆನ್ನಾಗಿರಲಿಲ್ಲ. ಸ್ವತಃ ಸೋನು ನಿಗಂ ಅವರಿಗೇ ಆ ಹಾಡು ಸರಿಯಾಗಿ ಹಾಡಲು ಆಗಲಿಲ್ಲ. ಆ ನಂತರವೂ ಸಹ ಹಿಂದಿ ಹಾಡುಗಳನ್ನೇ ಹಾಡುತ್ತಿದ್ದರು, ಜನಪ್ರಿಯ ಹಾಡುಗಳನ್ನೇ ಹಾಡಿದರು, ಚೆನ್ನಾಗಿಯೇ ಹಾಡುತ್ತಿದ್ದರು. ಭಾರಿ ಸಂಖ್ಯೆಯ ಜನ ಅಂದು ಇರಲಿಲ್ಲವಾದರೂ ಇದ್ದವರೆಲ್ಲ ಶಾಂತವಾಗಿ ಕೂತು ಹಾಡು ಕೇಳುತ್ತಿದ್ದರು.
ಇದನ್ನೂ ಓದಿ:ಸೋನು ನಿಗಮ್ ಕನ್ನಡ ವಿರೋಧಿ ಹೇಳಿಕೆಗೆ ತೀವ್ರ ವಿರೋಧ, ಯಾರು ಏನು ಹೇಳಿದರು?
ಆದರೆ ಅಂದು ಒಮ್ಮಿಂದೊಮ್ಮೆಲೆ ಹಾಡು ನಿಲ್ಲಿಸಿದ ಸೋನು ನಿಗಂ, ವೇದಿಕೆಯ ಎಡಬದಿ ತಿರುಗಿ ‘ಏಕೆ ಸುಮ್ಮನೆ ಕಿರುಚುತ್ತೀರಿ’ ಎಂದರು. ಕಾರ್ಯಕ್ರಮ ನೋಡುತ್ತಿದ್ದವರಿಗೆ ‘ಅರೇ ಇದೇನಾಯ್ತು?, ಹಾಡು ಯಾಕೆ ನಿಲ್ಲಿಸಿದರು’ ಎನಿಸಿತು. ಬಳಿಕ ತುಸು ಸಿಟ್ಟಿನಿಂದಲೇ ಮೈಕ್ನಲ್ಲಿ ಮಾತನಾಡಿದ ಸೋನು ನಿಗಂ, ‘ನನ್ನ ವೃತ್ತಿಜೀವನದಲ್ಲಿ ನಾನು ಬೇರೆ ಬೇರೆ ಭಾಷೆಗಳಲ್ಲಿ ಹಾಡಿದ್ದೇನೆ.ನಾನು ಹಾಡಿದ ಅತ್ಯುತ್ತಮ ಹಾಡುಗಳು ಕನ್ನಡದಲ್ಲಿವೆ. ನಾನು ಕರ್ನಾಟಕಕ್ಕೆ ಬಂದಾಗಲೆಲ್ಲಾ ತುಂಬಾ ಪ್ರೀತಿ, ಗೌರವದಿಂದ ಬರುತ್ತೇನೆ. ಪ್ರತಿ ಬಾರಿ ಯಾರಾದರೂ ಕನ್ನಡ ಎಂದು ಕೂಗಿದಾಗ ಅವರಿಗಾಗಿ ಕನ್ನಡ ಹಾಡನ್ನಾದರೂ ಹಾಡಿರುತ್ತೇನೆ. ನಾನು ವಿಶ್ವದ ಎಲ್ಲಿಯೇ ಕಾರ್ಯಕ್ರಮ ಮಾಡಲಿ, ಯಾರಾದರೂ ಒಬ್ಬರು ಕನ್ನಡ ಎಂದರೂ ಕೂಡ ನಾನು ಕನ್ನಡ ಹಾಡು ಹಾಡುತ್ತೇನೆ’ ಎಂದರು. ಕೂಡಲೇ ಜನ ಚಪ್ಪಾಳೆ ತಟ್ಟಿದರು. ಬಳಿಕ ಸಿಟ್ಟಿನಿಂದಲೇ ‘ಇನ್ನೊಮ್ಮೆ ಹೀಗೆ ಮಾಡಿದರೆ ಕಾರ್ಯಕ್ರಮ ನಿಲ್ಲಿಸುತ್ತೇನೆ’ ಎಂದು ಹೇಳಿ ಹಾಡು ಮುಂದುವರೆಸಿದರು.
ಸೋನು ನಿಗಮ್ ಕನ್ನಡ ವಿರೋಧಿ ಹೇಳಿಕೆ ವಿಡಿಯೋ
ಅಲ್ಲಿದ್ದ ಹಲವರಿಗೆ ಏನಾಯ್ತು? ಎಂಬುದು ಸಹ ಗೊತ್ತಾಗಲಿಲ್ಲ, ಯಾರೂ ಅಲ್ಲಿ ಕನ್ನಡ ಹಾಡು ಹಾಡುವಂತೆ ಕೂಗಿದ್ದು ಯಾರಿಗೂ ಕೇಳಿಸಿರಲಿಲ್ಲ. ಅದೂ ಸೋನು ನಿಗಂ ಹಾಡು ಹಾಡುವಾಗ, ಧ್ವನಿವರ್ಧಕಗಳ ಅಷ್ಟು ಜೋರು ಧನಿಯ ನಡುವೆ ಎಲ್ಲೋ ದೂರದಲ್ಲಿ ನಿಂತು ಕೂಗಿದ್ದು ಕೇಳುವುದಾದರೂ ಹೇಗೆ? ಒಟ್ಟಿನಲ್ಲಿ ಸೋನು ನಿಗಂ ಸಿಟ್ಟಾಗಿದ್ದಂತೂ ನಿಜ, ಬಳಿಕ ನಿನ್ನೆಯ ಬೆಂಗಳೂರು ಕಾರ್ಯಕ್ರಮದಲ್ಲಿ ಸೋನು ನಿಗಂ ಹೇಳಿದ್ದ ಯಥಾವತ್ತು ಅದೇ ಸಂಭಾಷಣೆಯನ್ನು ಅವರು ಚಿಕ್ಕಬಳ್ಳಾಪುರದಲ್ಲಿಯೂ ಹೇಳಿದ್ದರು.
ನಿನ್ನೆ ನಡೆದ ಘಟನೆ, ಈ ಹಿಂದೆ ಸೋನು ನಿಗಂ ಆಡಿದ ಮಾತುಗಳನ್ನು ಹೋಲಿಸಿ ನೋಡುವುದಾದರೆ ಸೋನು ನಿಗಂ ಅವರಿಗೆ ಮೊದಲಿನಿಂದಲೂ ಕನ್ನಡಿಗರ ಮೇಲೆ ವಿಶೇಷವಾಗಿ ಕನ್ನಡಿಗರಿಗೆ ಇರುವ ಭಾಷಾ ಪ್ರೇಮದ ಬಗ್ಗೆ ಅಸಮಾಧಾನ ಇತ್ತು ಎಂಬ ಅನುಮಾನ ಮೂಡುತ್ತದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:41 pm, Fri, 2 May 25




