ಶ್ರೀಲೀಲಾ ಬಾಲಿವುಡ್ ಪದಾರ್ಪಣೆಗೆ ವೇದಿಕೆ ಸಿದ್ಧ, ಸ್ಟಾರ್ ಪುತ್ರನಿಗೆ ನಾಯಕಿ
Sreeleela: ಕನ್ನಡತಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದ ಸ್ಟಾರ್ ನಟಿ, ದೊಡ್ಡ ದೊಡ್ಡ ಸ್ಟಾರ್ ನಟರೊಟ್ಟಿಗೆ ಶ್ರೀಲೀಲಾ ನಟಿಸಿದ್ದಾರೆ. ಈಗಲೂ ಕೈಯಲ್ಲಿ ಸುಮಾರು ಐದು ಸಿನಿಮಾಗಳಿವೆ. ಇದೀಗ ಶ್ರೀಲೀಲಾ ಬಾಲಿವುಡ್ಗೆ ಕಾಲಿಡುತ್ತಿದ್ದು, ಹಿಂದಿ ಚಿತ್ರರಂಗದ ಸ್ಟಾರ್ ಹೀರೋನ ಪುತ್ರನ ಮೊದಲ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಯಾರು ಆ ಸ್ಟಾರ್ ನಟನ ಪುತ್ರ? ಇಲ್ಲಿದೆ ವಿವರ...
ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದ ಬಲು ಬೇಡಿಕೆಯ ನಟಿ. ತೆಲುಗಿನಲ್ಲಿ ಒಂದರ ಹಿಂದೊಂದು ಭಾರಿ ಬಜೆಟ್ ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ಅದೆಷ್ಟು ಬ್ಯುಸಿಯಾಗಿದ್ದಾರೆಂದರೆ ಡೇಟ್ಸ್ ಸಮಸ್ಯೆಯಿಂದಾಗಿ ಕೆಲವು ದೊಡ್ಡ ನಟರ ಸಿನಿಮಾಗಳಿಗೆ ಶ್ರೀಲೀಲಾ ನೋ ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಭಾರಿ ಸಂಭಾವನೆ ಪಡೆದು ‘ಪುಷ್ಪ 2’ ಸಿನಿಮಾದ ಐಟಂ ಹಾಡಿನಲ್ಲಿಯೂ ಶ್ರೀಲೀಲಾ ನಟಿಸಿದ್ದರು. ‘ಪುಷ್ಪ 2’ ಐಟಂ ಹಾಡಿನಲ್ಲಿ ಕುಣಿಯಲು ದೊಡ್ಡ ದೊಡ್ಡ ನಟಿಯರೇ ರೆಡಿಯಾಗಿದ್ದರು. ಆದರೂ ಸಹ ಶ್ರೀಲೀಲಾ ಅವರನ್ನೇ ಆಯ್ಕೆ ಮಾಡಿಕೊಳ್ಳಲಾಯ್ತು ಎಂಬುದು ಅವರ ಜನಪ್ರಿಯತೆಗೆ ಸಾಕ್ಷಿ. ಇದೀಗ ಶ್ರೀಲೀಲಾ ಬಾಲಿವುಡ್ಗೆ ಪದಾರ್ಪಣೆ ಮಾಡಲು ರೆಡಿಯಾಗಿದ್ದು, ಸ್ಟಾರ್ ನಟನ ಮೊದಲ ಸಿನಿಮಾದಲ್ಲಿ ಶ್ರೀಲೀಲಾ ನಟಿಸಲಿದ್ದಾರೆ.
ಬಾಲಿವುಡ್ನ ಸ್ಟಾರ್ ನಟ ಸೈಫ್ ಅಲಿ ಖಾನ್ ಅವರ ಪುತ್ರ ಇಬ್ರಾಹಿಂ ಅಲಿ ಖಾನ್ ಬಾಲಿವುಡ್ ಪ್ರವೇಶಕ್ಕೆ ಸಜ್ಜಾಗಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ಅವರು ಈ ಬಗ್ಗೆ ತಯಾರಿ ನಡೆಸಿದ್ದು, ಇದೀಗ ಇಬ್ರಾಹಿಂ ಖಾನ್ ಕೊನೆಗೂ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಇಬ್ರಾಹಿಂ ಖಾನ್ ಎದುರು ಯುವ ಹಾಗೂ ಬಾಲಿವುಡ್ ಪ್ರೇಕ್ಷಕರ ಪಾಲಿಗೆ ಹೊಸ ಮುಖದ ಪರಿಚಯ ಮಾಡುವ ಉದ್ದೇಶದಿಂದಾಗಿ ಶ್ರೀಲೀಲಾ ಅವರನ್ನು ಸಿನಿಮಾದ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಇಬ್ರಾಹಿಂ ಖಾನ್ ಮತ್ತು ಶ್ರೀಲೀಲಾ ಇತ್ತೀಚೆಗೆ ಸಿನಿಮಾ ನಿರ್ಮಾಣ ಕಚೇರಿಯ ಹೊರಗೆ ಒಟ್ಟಿಗೆ ಕಾಣಿಸಿಕೊಂಡಿದ್ದು, ಪಾಪರಾಟ್ಜಿಗಳ ಕ್ಯಾಮೆರಾನಲ್ಲಿ ಸೆರೆಯಾಗಿದ್ದಾರೆ.
ಇದನ್ನೂ ಓದಿ:ಸಖತ್ ಫನ್ ವಿಡಿಯೋ ಹಂಚಿಕೊಂಡ ಶ್ರೀಲೀಲಾ
‘ಸ್ತ್ರೀ 2’ ಸೇರಿದಂತೆ ಕೆಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಬಾಲಿವುಡ್ಗೆ ನೀಡಿರುವ ಮ್ಯಾಡ್ಲಾಕ್ ನಿರ್ಮಾಣ ಸಂಸ್ಥೆಯ ಕಚೇರಿಯ ಹೊರಗೆ ಶ್ರೀಲೀಲಾ ಮತ್ತು ಇಬ್ರಾಹಿಂ ಖಾನ್ ಅವರು ಕಂಡು ಬಂದಿದ್ದಾರೆ. ಇಬ್ರಾಹಿಂ ಅವರ ಮೊದಲ ಸಿನಿಮಾಕ್ಕೆ ಮ್ಯಾಡ್ಲಾಕ್ ನಿರ್ಮಾಣ ಸಂಸ್ಥೆ ಬಂಡವಾಳ ಹೂಡುತ್ತಿದೆ ಎನ್ನಲಾಗುತ್ತಿದ್ದು, ಈ ಸಿನಿಮಾ ಒಂದು ಹಾಸ್ಯ ಮಿಶ್ರಿತ ಪ್ರೇಮಕಥೆ ಆಗಿರಲಿದೆಯಂತೆ. ಜೊತೆಗೆ ಸಿನಿಮಾದಲ್ಲಿ ಕೆಲ ಥ್ರಿಲ್ಲರ್ ಅಂಶವೂ ಇರಲಿದೆ ಎನ್ನಲಾಗುತ್ತಿದೆ. ಸಿನಿಮಾದ ಅಧಿಕೃತ ಘೋಷಣೆ ಕೆಲವೇ ದಿನಗಳಲ್ಲಿ ಆಗಲಿದೆ.
ಶ್ರೀಲೀಲಾ ಈ ಮೊದಲೇ ಬಾಲಿವುಡ್ ಸಿನಿಮಾ ಒಂದರಲ್ಲಿ ನಟಿಸಬೇಕಿತ್ತು. ವರುಣ್ ಧವನ್ ನಾಯಕನಾಗಿ ನಟಿಸಲಿದ್ದು ಸಿನಿಮಾಕ್ಕೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆ ಆಗಿದ್ದರು. ಆದರೆ ಡೇಟ್ಸ್ ಸಮಸ್ಯೆಯಿಂದಾಗಿ ಆ ಸಿನಿಮಾ ಬೇರೆ ನಟಿಯ ಪಾಲಾಯ್ತು. ಇದೀಗ ಶ್ರೀಲೀಲಾ, ರವಿತೇಜ ನಟನೆಯ ‘ಮಾಸ್ ಜಾತರ’, ನಿತಿನ್ ಜೊತೆ ‘ರಾಬಿನ್ ಹುಡ್’, ಶಿವಕಾರ್ತಿಕೇಯನ್ ನಟನೆಯ ಹೊಸ ತಮಿಳು ಸಿನಿಮಾ, ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ