ಭೇಷ್, ಭೇಷ್ ಎನ್ನುತ್ತಲೇ ದೂರ ತಳ್ಳಿದ ಬಾಲಿವುಡ್, ಸಿನಿಮಾದಿಂದ ಶ್ರೀಲೀಲಾ ಹೊರಕ್ಕೆ
Sreeleela: ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು ಹಾಗೂ ಹಿಂದಿ ಚಿತ್ರರಂಗಗಳಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗಷ್ಟೆ ಬಾಲಿವುಡ್ಗೆ ಪದಾರ್ಪಣೆ ಮಾಡಿದ ಶ್ರೀಲೀಲಾಗೆ ಅಲ್ಲಿ ಭರ್ಜರಿ ಅವಕಾಶಗಳು ದೊರಕುತ್ತಿವೆ ಎನ್ನಲಾಗಿತ್ತು, ಆದರೆ ಈಗ ಹರಿದಾಡುತ್ತಿರುವ ಸುದ್ದಿಯಂತೆ ಬಾಲಿವುಡ್ನ ಬಿಗ್ ಬಜೆಟ್ ಸಿನಿಮಾ ಒಂದರಿಂದ ನಟಿಯನ್ನು ಕೈಬಿಡಲಾಗಿದೆಯಂತೆ.

ಕನ್ನಡದ ನಟಿ ಶ್ರೀಲೀಲಾ (Sreeleela) ಈಗ ಮಿಂಚುತ್ತಿರುವುದು ತೆಲುಗು ಚಿತ್ರರಂಗದಲ್ಲಿ. ಇತ್ತೀಚೆಗಷ್ಟೆ ಬಾಲಿವುಡ್ಗೂ ಕಾಲಿಟ್ಟ ನಟಿಗೆ ಅವಕಾಶಗಳ ಮೇಲೆ ಅವಕಾಶಗಳು ಸಿಗುತ್ತಿರುವುದು ಗೊತ್ತಿರುವ ಸಂಗತಿಯೇ. ಆದರೆ ಇದೀಗ ಹಠಾತ್ತನೆ ಶ್ರೀಲೀಲಾ ಅವರನ್ನು ಸಿನಿಮಾ ಒಂದರಿಂದ ತೆಗೆದು ಹಾಕಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಬಾಲಿವುಡ್ ಸಿನಿಮಾಗಳಿಗಾಗಿ ತೆಲುಗು ಸಿನಿಮಾ ಅನ್ನು ಬೇಡ ಅಂದುಕೊಂಡ ನಟಿಗೆ ಈಗ ಬಾಲಿವುಡ್ ಸಿನಿಮಾ ಆಫರ್ ಸಹ ಕೈತಪ್ಪಿದ್ದು, ಇದು ಶ್ರೀಲೀಲಾ ಮತ್ತು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಅಸಲಿಗೆ ಶ್ರೀಲೀಲಾ, ಬಾಲಿವುಡ್ಗೆ ಕಾಲಿಡುತ್ತಿದ್ದಂತೆ ಅವರಿಗೆ ಮೂರು ಹೊಸ ಸಿನಿಮಾಗಳ ಆಫರ್ ದೊರೆತಿತ್ತು. ಮೂರೂ ಸಿನಿಮಾಗಳು ದೊಡ್ಡ ಬಜೆಟ್ನ, ದೊಡ್ಡ ನಿರ್ಮಾಣ ಸಂಸ್ಥೆಯ ಸಿನಿಮಾಗಳೇ ಆಗಿದ್ದವು. ಅವುಗಳಲ್ಲಿ ಎರಡು ಸಿನಿಮಾಗಳಿಗೆ ಕಾರ್ತಿಕ್ ಆರ್ಯನ್ ನಾಯಕರಾಗಿದ್ದರು. ಅನುರಾಗ್ ಬಸು ನಿರ್ದೇಶನದ ‘ಆಶಿಖಿ 3’ ಮತ್ತು ‘ಪತಿ-ಪತ್ನಿ ಔರ್ ಓ’ ಸರಣಿಯ ಹೊಸ ಸಿನಿಮಾಕ್ಕೆ ಶ್ರೀಲೀಲಾ ಆಯ್ಕೆ ಆಗಿದ್ದರು. ಎರಡೂ ಸಿನಿಮಾಗಳಿಗೆ ಕಾರ್ತಿಕ್ ಆರ್ಯನ್ ಅವರೇ ನಾಯಕ. ಆದರೆ ಇದೀಗ ಹೊರಬಿದ್ದಿರುವ ಸುದ್ದಿಯಂತೆ ಶ್ರೀಲೀಲಾ ಅವರನ್ನು ‘ಪತಿ-ಪತ್ನಿ ಔರ್ ಓ’ ಸಿನಿಮಾದಿಂದ ಕೈಬಿಡಲಾಗಿದೆಯಂತೆ.
ಶ್ರೀಲೀಲಾ ಅವರ ಬದಲಿಗೆ ‘ಪತಿ-ಪತ್ನಿ ಔರ್ ಓ’ ಸಿನಿಮಾದಲ್ಲಿ ರಾಶಾ ತಂಡಾನಿಯನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬ ಸುದ್ದಿ ಬಾಲಿವುಡ್ ಗಲ್ಲಿಗಳಲ್ಲಿ ಹರಿದಾಡುತ್ತಿದೆ. ಕಾರ್ತಿಕ್ ಆರ್ಯನ್ ಹಾಗೂ ಶ್ರೀಲೀಲಾ ಈಗಾಗಲೇ ‘ಆಶಿಖಿ 3’ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದು, ‘ಪತಿ ಪತ್ನಿ ಔರ್ ಓ’ ಸಿನಿಮಾಕ್ಕೆ ಕಾರ್ತಿಕ್ ಎದುರು ಹೊಸ ನಟಿಯನ್ನು ಹಾಕಿಕೊಳ್ಳುವ ಯೋಜನೆ ನಿರ್ಮಾಪಕರದ್ದಂತೆ. ಜೋಡಿಯನ್ನು ರಿಪೀಟ್ ಮಾಡುವುದು ಬೇಡ ಎಂಬ ಕಾರಣಕ್ಕೆ ಶ್ರೀಲೀಲಾರನ್ನು ಆ ಸಿನಿಮಾದಿಂದ ಹೊರಗಿಡಲಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಬಾಲಿವುಡ್ ನಟನೊಟ್ಟಿಗೆ ಪ್ರೀತಿಯಲ್ಲಿದ್ದ ಬಿದ್ದರೇ ನಟಿ ಶ್ರೀಲೀಲಾ
ಇದರ ಜೊತೆಗೆ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಂ ಅಲಿ ಖಾನ್ ನಟನೆಯ ಹೊಸ ಸಿನಿಮಾದಲ್ಲಿಯೂ ಶ್ರೀಲೀಲಾ ನಟಿಸುವ ಅವಕಾಶ ಪಡೆದಿದ್ದರು. ಆದರೆ ಈ ಸಿನಿಮಾದ ಯಾವುದೇ ಅಪ್ಡೇಟ್ ಹೊರಬಿದ್ದಿಲ್ಲ. ಇಬ್ರಾಹಿಂ ಖಾನ್ ಅವರ ಮೊದಲ ಸಿನಿಮಾ ಫ್ಲಾಪ್ ಆದ ಬೆನ್ನಲ್ಲೆ ಈ ಸಿನಿಮಾ ನಿಂತೇ ಹೋಯ್ತು ಎಂಬ ಸುದ್ದಿಗಳು ಸಹ ಹರಿದಾಡುತ್ತಿವೆ. ಆದರೆ ಕಾರ್ತಿಕ್ ಆರ್ಯನ್ ಜೊತೆ ನಟಿಸುತ್ತಿರುವ ‘ಆಶಿಖಿ 3’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಖ್ಯಾತ ನಿರ್ದೇಶಕ ಅನುರಾಗ್ ಬಸು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ಇದರ ಹೊರತಾಗಿ ಶ್ರೀಲೀಲಾ ತಮಿಳಿನಲ್ಲಿ ಶಿವಕಾರ್ತಿಕೇಯನ್ ಜೊತೆಗೆ ‘ಪರಾಶಕ್ತಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ರವಿತೇಜ ಜೊತೆಗೆ ‘ಮಾಸ್ ಜಾತರ’ ಹೆಸರಿನ ಸಿನಿಮಾದಲ್ಲಿ ಈಗಾಗಲೇ ನಟಿಸಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಜಾರಿಯಲ್ಲಿದೆ. ವಿಜಯ್ ದೇವರಕೊಂಡ ಜೊತೆಗೆ ‘ಕಿಂಗ್ಡಮ್’ ಸಿನಿಮಾನಲ್ಲಿ ಶ್ರೀಲೀಲಾ ನಟಿಸಬೇಕಿತ್ತು. ಆದರೆ ಆ ಸಿನಿಮಾದಿಂದಲೂ ಅವರನ್ನು ಕೈಬಿಡಲಾಯ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ