ನಟಿ ತನುಶ್ರೀ ದತ್ತ (Tanushree Dutta) ಅವರು ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಸಿನಿಮಾ ಮಾಡಿ ಎಷ್ಟು ಫೇಮಸ್ ಆದರೋ ಅದೇ ರೀತಿ ಮೀಟೂ ಪ್ರಕರಣದ ಕಾರಣದಿಂದಲೂ ಅಷ್ಟೇ ಸುದ್ದಿಯಾದರು. ಬಾಲಿವುಡ್ ನಟ ನಾನಾ ಪಾಟೇಕರ್ ಮೇಲೆ ಅವರು ನಾಲ್ಕು ವರ್ಷಗಳ ಹಿಂದೆ ಅನೇಕ ಆರೋಪಗಳನ್ನು ಮಾಡಿದ್ದರು. ಭಾರತದಲ್ಲಿ ಮೀಟೂ (MeToo) ಅಭಿಯಾನದ ಬಿರುಗಾಳಿ ಹೆಚ್ಚಾಗಲು ತನುಶ್ರೀ ದತ್ತ ಅವರೇ ಮುಖ್ಯ ಕಾರಣ. ಆದರೆ ತಮಗಾದ ಶೋಷಣೆಯ ಬಗ್ಗೆ ಬಾಯಿ ಬಿಟ್ಟ ನಂತರ ಅವರ ಮೇಲೆ ಕೊಲೆ ಪ್ರಯತ್ನಗಳು (Murder Attempt) ನಡೆದಿದ್ದವು. ಆ ವಿಚಾರವನ್ನು ತನುಶ್ರೀ ದತ್ತ ಈಗ ಬಹಿರಂಗಪಡಿಸಿದ್ದಾರೆ.
ತನುಶ್ರೀ ಅವರನ್ನು ಸಾಯಿಸಬೇಕು ಎಂಬ ಉದ್ದೇಶದಿಂದ ಅವರ ಕಾರಿನ ಬ್ರೇಕ್ ಫೇಲ್ ಮಾಡಿಸಲಾಗಿತ್ತು. ಕುಡಿಯುವ ನೀರಿನಲ್ಲಿ ವಿಷ ಹಾಕಿಸಲಾಗಿತ್ತು. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತನುಶ್ರೀ ಅವರು ಈ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮೇಲೆ ಹಲವು ಬಾರಿ ಕೊಲೆ ಪ್ರಯತ್ನ ನಡೆದಿತ್ತು ಎಂದು ಅವರು ಹೇಳಿದ್ದಾರೆ. ‘ಒಂದು ವೇಳೆ ನನ್ನ ಪ್ರಾಣಕ್ಕೆ ಏನಾದರೂ ಆದರೆ ನಟ ನಾನಾ ಪಾಟೇಕರ್, ಅವರ ಲೀಗಲ್ ಟೀಮ್ ಹಾಗೂ ಬಾಲಿವುಡ್ ಮಾಫಿಯಾದವರೇ ಕಾರಣ’ ಎಂದು ಈ ಹಿಂದೆ ತನುಶ್ರೀ ಹೇಳಿಕೆ ನೀಡಿದ್ದರು.
‘ಒಂದೆರಡು ಬಾರಿ ನನ್ನ ಕಾರಿನ ಬ್ರೇಕ್ ಫೇಲ್ ಮಾಡಿಸಿದರು. ಅದರಿಂದ ನನಗೆ ಒಮ್ಮೆ ಅಪಘಾತವಾಯಿತು. ನನ್ನ ಮೂಳೆ ಮುರಿಯಿತು. ಚೇತರಿಸಿಕೊಳ್ಳಲು ನನಗೆ ಹಲವು ತಿಂಗಳುಗಳೇ ಬೇಕಾದವು. ನಮ್ಮ ಮನೆಯಲ್ಲಿ ಓರ್ವ ಕೆಲಸದವಳು ಇದ್ದಳು. ಆಕೆಯನ್ನು ಯಾರೋ ನಮ್ಮ ಮನೆಗೆ ಬೇಕಂತಲೇ ಕಳಿಸಿದ್ದರು ಎನಿಸುತ್ತದೆ. ಕುಡಿಯುವ ನೀರಿನಲ್ಲಿ ಆಕೆ ಏನೋ ಬೆರೆಸುತ್ತಿದ್ದಳು ಎಂಬುದು ನನ್ನ ಅನುಮಾನ. ಕ್ರಮೇಣ ನನ್ನ ಆರೋಗ್ಯ ಹದಗೆಟ್ಟಿತು’ ಎಂದಿದ್ದಾರೆ ತನುಶ್ರೀ ದತ್ತ.
ಮೀಟೂ ವಿವಾದ ಭುಗಿಲೆದ್ದ ಬಳಿಕ ತನುಶ್ರೀ ಅವರು ಮತ್ತೆ ಬಾಲಿವುಡ್ಗೆ ಮರಳಬೇಕು ಎಂದು ತೀರ್ಮಾನಿಸಿದ್ದರು. ಅನೇಕ ಪ್ರಾಜೆಕ್ಟ್ಗಳಿಗೆ ಮಾತುಕತೆ ಕೂಡ ನಡೆದಿತ್ತು. ಆದರೆ ಮಾಫಿಯಾದ ಕಾರಣದಿಂದ ಆ ಎಲ್ಲ ಪ್ರಾಜೆಕ್ಟ್ಗಳು ಕೈ ತಪ್ಪಿಹೋಗುವಂತಾಯಿತು ಎಂದು ಅವರು ಹೇಳಿದ್ದಾರೆ. ಒಂದು ಕಾಲದಲ್ಲಿ ತನುಶ್ರೀ ಬಹುಬೇಡಿಕೆಯ ಹೀರೋಯಿನ್ ಆಗಿದ್ದರು.
ತನುಶ್ರೀ ಮೊದಲ ಬಾರಿ ನಟಿಸಿದ್ದು 2005ರಲ್ಲಿ ತೆರೆಕಂಡ ‘ಆಶಿಕ್ ಬನಾಯಾ ಆಪ್ನೆ’ ಸಿನಿಮಾದಲ್ಲಿ. ಆ ಚಿತ್ರದಲ್ಲಿ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ನಂತರ ಅವರಿಗೆ ತುಂಬ ಜನಪ್ರಿಯತೆ ಸಿಕ್ಕಿತು. 2010ರ ಬಳಿಕ ಅವರು ಯಾವುದೇ ಚಿತ್ರದಲ್ಲಿ ನಟಿಸಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:20 am, Fri, 23 September 22