ಅಮಿತಾಭ್​ ಬಚ್ಚನ್​ ಸಿನಿಮಾಗೆ ತಡೆಕೋರಿ ಅರ್ಜಿ ಸಲ್ಲಿಸಿದ ವ್ಯಕ್ತಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್​

| Updated By: ರಾಜೇಶ್ ದುಗ್ಗುಮನೆ

Updated on: Mar 07, 2022 | 1:51 PM

ಅಮಿತಾಭ್​ ಬಚ್ಚನ್​ ನಟನೆಯ ‘ಝಂಡ್​’ ಸಿನಿಮಾ ಮಾರ್ಚ್​ 4ರಂದು ರಿಲೀಸ್​ ಆಗಿದೆ. ಅಮಿತಾಭ್​ ಬಚ್ಚನ್​ ಈ ಚಿತ್ರದಲ್ಲಿ ವಿಜಯ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ತಡೆ ನೀಡಬೇಕು ಎಂದು ನಂದಿ ಚಿನ್ನಿ ಕುಮಾರ್ ಕೋರಿದ್ದರು.

ಅಮಿತಾಭ್​ ಬಚ್ಚನ್​ ಸಿನಿಮಾಗೆ ತಡೆಕೋರಿ ಅರ್ಜಿ ಸಲ್ಲಿಸಿದ ವ್ಯಕ್ತಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್​
ಅಮಿತಾಭ್​
Follow us on

ಬಯೋಪಿಕ್ (Biopic)​ ಹಾಗೂ ದೊಡ್ಡ ಬಜೆಟ್​ ಸಿನಿಮಾಗಳು ತೆರೆಗೆ ಬರೋದನ್ನೇ ಕೆಲವರು ಕಾಯುತ್ತಿರುತ್ತಾರೆ. ಚಿತ್ರತಂಡಕ್ಕೆ ತೊಂದರೆ ಕೊಡಲು ಅಥವಾ ನಿರ್ಮಾಪಕರಿಂದ ದುಡ್ಡು ಕೀಳಲು ಸಿನಿಮಾ ವಿರುದ್ಧ ಕೇಸ್​ ದಾಖಲು ಮಾಡುತ್ತಾರೆ. ಸಿನಿಮಾಗೆ ತಡೆ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತಾರೆ. ಈ ಮೂಲಕ ನಿರ್ಮಾಪಕರಿಗೆ, ಚಿತ್ರತಂಡಕ್ಕೆ ಕಿರಿಕಿರಿ ಉಂಟು ಮಾಡುತ್ತಾರೆ. ಇದೇ ರೀತಿ ಮಾಡಲು ಹೋದ ವ್ಯಕ್ತಿಗೆ ತೆಲಂಗಾಣ ಹೈಕೋರ್ಟ್ (Telangana High-court)​ ಸರಿಯಾದ ರೀತಿಯಲ್ಲಿ ಪಾಠ ಕಲಿಸಿದೆ. ಅರ್ಜಿದಾರರಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ದಂಡ ವಿಧಿಸುವ ಮೂಲಕ ಈ ರೀತಿ ತಪ್ಪು ಮಾಡಲು ಮುಂದಾಗುವವರಿಗೆ ಎಚ್ಚರಿಕೆ ನೀಡಿದೆ.

ಅಮಿತಾಭ್​ ಬಚ್ಚನ್​ ನಟನೆಯ ‘ಝಂಡ್​’ ಸಿನಿಮಾ ಮಾರ್ಚ್​ 4ರಂದು ರಿಲೀಸ್​ ಆಗಿದೆ. ವಿಜಯ್​ ಬರ್ಸೆ ಅವರ ಬಯೋಪಿಕ್​ ಇದಾಗಿದೆ. ವಿಜಯ್​ ಬರ್ಸೆ ಅವರು ‘ಸ್ಲಮ್ ಸಾಕರ್​’ ಹೆಸರಿನ ಎನ್​ಜಿಒ ಆರಂಭಿಸಿದ್ದರು. ಈ ಮೂಲಕ ಬಡ ಮಕ್ಕಳಿಗೆ ಫುಟ್​ಬಾಲ್​ ಹೇಳಿಕೊಡುವ ಕೆಲಸ ಮಾಡಿದ್ದರು. ಅಮಿತಾಭ್​ ಬಚ್ಚನ್​ ಈ ಚಿತ್ರದಲ್ಲಿ ವಿಜಯ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ತಡೆ ನೀಡಬೇಕು ಎಂದು ನಂದಿ ಚಿನ್ನಿ ಕುಮಾರ್ ಕೋರಿದ್ದರು.

‘ಫುಟ್​ಬಾಲರ್​ ಅಖಿಲೇಶ್​​ ಪೌಲ್​ ಅವರ ಜೀವನ ಆಧರಿಸಿ ‘ಝಂಡ್​’ ಸಿದ್ಧವಾಗಿದೆ. ನಾನು ಅಖಿಲೇಶ್ ಕುರಿತು ಸಿನಿಮಾ ಮಾಡೋಕೆ 2017-18ರಲ್ಲಿ ಹಕ್ಕನ್ನು ಪಡೆದಿದ್ದೆ. ಅಮಿತಾಭ್​ ಬಚ್ಚನ್ ನಟನೆಯ ‘ಝಂಡ್​’ ಚಿತ್ರ ಕೂಡ ಅದೇ ಕಥೆಯನ್ನು ಹೊಂದಿದೆ ಎಂಬುದು ಆ ಬಳಿಕ ಗೊತ್ತಾಯಿತು. ಈ ಚಿತ್ರಕ್ಕೆ ತಡೆನೀಡಬೇಕು’ ಎಂದು ನಂದಿ ತೆಲಂಗಾಣ ಹೈಕೋರ್ಟ್​ನಲ್ಲಿ ಕೋರಿದ್ದರು.

ಸುಳ್ಳು ಮಾಹಿತಿ ಇಟ್ಟುಕೊಂಡು ನಂದಿ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ, ಈ ಅರ್ಜಿಯನ್ನು ಹಿಂಪಡೆಯೋಕೆ ಅವರು 5 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಅಭಿನಂದ್ ಕುಮಾರ್ ಶಿವಾಲಿ ಅವರನ್ನು ಒಳಗೊಂಡ ಪೀಠ ಅಸಮಾಧಾನ ಹೊರಹಾಕಿದೆ.

ಈ ಅರ್ಜಿಯನ್ನು ವಜಾ ಮಾಡಿದೆ. ‘ಅರ್ಜಿದಾರ 30 ದಿನಗಳ ಒಳಗೆ 10 ಲಕ್ಷ ರೂಪಾಯಿ ಹಣವನ್ನು ಪ್ರಧಾನ ಮಂತ್ರಿ ಕೊವಿಡ್ ಪರಿಹಾರ ನಿಧಿಗೆ ನೀಡಬೇಕು. ಒಂದೊಮ್ಮೆ ಅರ್ಜಿದಾರ ಈ ಹಣವನ್ನು ನೀಡಲು ವಿಫಲನಾದರೆ  ಹೈದರಾಬಾದ್ ಕಲೆಕ್ಟರ್ ಈ ಹಣವನ್ನು ವಸೂಲಿ ಮಾಡಿ ಪ್ರಧಾನಮಂತ್ರಿ ಕೊವಿಡ್ ಪರಿಹಾರ ನಿಧಿಗೆ ನೀಡಬೇಕು’ ಎಂದು ಸೂಚನೆ ನೀಡಿದೆ. ‘ನನ್ನನ್ನು ಕೆಲವರು ದಾರಿ ತಪ್ಪಿಸಿದ್ದಾರೆ. ನಾನು ಯಾರಿಂದಲೂ ಹಣ ಪಡೆದಿಲ್ಲ. ಕೋರ್ಟ್​ ಆದೇಶವನ್ನು ನಾನು ಪ್ರಶ್ನಿಸುತ್ತೇನೆ’ ಎಂದು ನಂದಿ ಹೇಳಿದ್ದಾರೆ.

ಇದನ್ನೂ ಓದಿ: 79ರ ಪ್ರಾಯದ ಅಮಿತಾಭ್​ ಆರೋಗ್ಯದ ಬಗ್ಗೆ ಮೂಡಿದೆ ಆತಂಕ; ಒಂದೇ ಟ್ವೀಟ್​ನಿಂದ ಗಾಬರಿಗೊಳಿಸಿದ ಬಿಗ್​ ಬಿ

ರಾಧಿಕಾ ಪಂಡಿತ್​ಗೆ ಜನ್ಮದಿನದ ಸಂಭ್ರಮ; ವಿಶೇಷ ದಿನದಂದು ನಟಿ ಎದುರು ಹೊಸ ಬೇಡಿಕೆ ಇಟ್ಟ ಫ್ಯಾನ್ಸ್