ಸೆಟ್ಟೇರಲಿದೆ ‘ಸೈಯ್ಯಾರ 2’, ತೆಲುಗು ಸಿನಿಮಾ ರೀಮೇಕ್?
Saiyaara 2 movie: ಬಾಲಿವುಡ್ನಲ್ಲಿ ಸ್ಟಾರ್ ನಟರ ಸಿನಿಮಾಗಳೇ ಮಕಾಡೆ ಮಲಗುತ್ತಿರುವ ಸಮಯದಲ್ಲಿ ಹೊಸಬರ ‘ಸೈಯ್ಯಾರ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರಿ ದೊಡ್ಡ ಹಿಟ್ ಆಯ್ತು. ಯುವ ಜನರಿಗೆ ಸಿನಿಮಾ ಬಹಳ ಇಷ್ಟವಾಯ್ತು. ಅಂದಹಾಗೆ ‘ಸೈಯ್ಯಾರ 2’ ಸಿನಿಮಾ ನಿರ್ಮಾಣಗೊಳ್ಳುತ್ತಿದ್ದು, ಇದು ತೆಲುಗು ಸಿನಿಮಾದ ರೀಮೇಕ್ ಆಗಿರಲಿದೆಯಂತೆ.

ಬಾಲಿವುಡ್ನಲ್ಲಿ ಸ್ಟಾರ್ ನಟರ ಸಿನಿಮಾಗಳೇ ಬಾಕ್ಸ್ ಆಫೀಸ್ನಲ್ಲಿ ಕುಂಟುಗಾಲು ಹಾಕುತ್ತಿವೆ. ಸಲ್ಮಾನ್ ಖಾನ್, ಆಮಿರ್ ಖಾನ್ ಸಿನಿಮಾಗಳು ದೊಡ್ಡ ಯಶಸ್ಸು ಗಳಿಸಿ ವರ್ಷಗಳೇ ಆಗಿವೆ. ಇನ್ನು ಅಕ್ಷಯ್, ವರುಣ್ ಧವನ್, ಸಿದ್ಧಾರ್ಥ್ ಅವರ ಸಿನಿಮಾಗಳು ಬಂದು ಹೋಗಿದ್ದೆ ಗೊತ್ತಾಗುತ್ತಿಲ್ಲ. ಹೊಸಬರ ಸಿನಿಮಾಗಳನ್ನಂತೂ ಕೇಳುವವರೇ ಇಲ್ಲದಾಗಿದ್ದಾರೆ. ಇದೆಲ್ಲದರ ನಡುವೆ ಪವಾಡದಂತೆ ‘ಸೈಯ್ಯಾರ’ ಸಿನಿಮಾ ಭಾರಿ ದೊಡ್ಡ ಯಶಸ್ಸು ಗಳಿಸಿದೆ. ಯಾವುದೇ ಅಬ್ಬರದ ಪ್ರಚಾರ ಇಲ್ಲದ, ಹೊಸಬರ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮೋಡಿ ಮಾಡಿದೆ.
ಈಗಿನ ಕಾಲದ ಯುವಕರಿಗೆ ಇಷ್ಟವಾಗುಂಥಹಾ ಜೆನ್ಜಿ ಪ್ರೇಮಕತೆಯನ್ನು ಹೊಂದಿದ್ದ ಈ ಸಿನಿಮಾ ಕಾಲೇಜು-ಯುವಕ ಯುವತಿಯರನ್ನು ಸೆಳೆದಿದೆ. ಸಿನಿಮಾನಲ್ಲಿ ಪ್ರೀತಿ ಹಾಗೂ ಬ್ರೇಕಪ್ ಬಗ್ಗೆ ತೋರಿಸಲಾಗಿದೆ. ಇದೆಲ್ಲ ಈಗಿನ ಯುವ ಜನಾಂಗಕ್ಕೆ ಬಹಳ ಇಷ್ಟವಾಗಿದೆ. ಸಿನಿಮಾದಲ್ಲಿರುವ ಸೆಂಟಿಮೆಂಟ್ ದೃಶ್ಯಗಳನ್ನು ನೋಡಿ ಚಿತ್ರಮಂದಿರದಲ್ಲಿಯೇ ಕೆಲ ಯುವಕರು ಬಟ್ಟೆಗಳನ್ನು ಹರಿದುಕೊಂಡು ಅಳುತ್ತಿರುವ ದೃಶ್ಯಗಳು ಸಹ ವೈರಲ್ ಆಗಿದ್ದವು.
ಇದೀಗ ‘ಸೈಯ್ಯಾರ’ ಚಿತ್ರ ನಿರ್ಮಿಸಿದ್ದ ತಂಡವೇ, ‘ಸೈಯ್ಯಾರ 2’ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದು, ಈ ಬಾರಿ ತೆಲುಗು ಸಿನಿಮಾದ ರೀಮೇಕ್ ಅನ್ನು ತೆರೆಗೆ ತರುವ ಯೋಜನೆ ಚಿತ್ರತಂಡಕ್ಕೆ ಇದೆ. ತೆಲುಗಿನಲ್ಲಿ ಸೂಪರ್ ಹಿಟ್ ಆಗಿದ್ದ ‘ಬೇಬಿ’ ಸಿನಿಮಾ ಅನ್ನು ‘ಸೈಯ್ಯಾರ 2’ ಸಿನಿಮಾ ಆಗಿ ರೀಮೇಕ್ ಮಾಡಲಾಗುತ್ತಿದೆ. ‘ಸೈಯ್ಯಾರ’ ಮಾದರಿಯಲ್ಲಿಯೇ ‘ಬೇಬಿ’ ಸಿನಿಮಾ ಸಹ ಪ್ರೀತಿ-ಮೋಸದ ಕತೆಯನ್ನು ಒಳಗೊಂಡಿದೆ.
ಇದನ್ನೂ ಓದಿ:‘ಸೈಯಾರಾ’ ಅಬ್ಬರಕ್ಕೆ ಹೆದರಿದ ಸ್ಟಾರ್ ಹೀರೋಗಳು; ಮತ್ತೊಂದು ಸಿನಿಮಾ ಮುಂದಕ್ಕೆ
‘ಬೇಬಿ’ ಸಿನಿಮಾ ಬಿಡುಗಡೆ ಆದಾಗಲೂ ಸಹ, ‘ಸೈಯ್ಯಾರ’ ಸಿನಿಮಾ ಪ್ರದರ್ಶನದ ವೇಳೆ ಮಾಡಿದಂತೆ, ‘ಬೇಬಿ’ ಸಿನಿಮಾ ನೋಡುತ್ತಿದ್ದವರು ಚಿತ್ರಮಂದಿರಗಳಲ್ಲಿ ಜೋರಾಗಿ ಕಣ್ಣೀರು ಹಾಕುವುದು, ನಾಯಕಿಯ ದೃಶ್ಯ ಬಂದಾಗ ಪರದೆಗೆ ಚಪ್ಪಲಿ ಎಸೆಯುವುದು ಎಲ್ಲವನ್ನೂ ಮಾಡಿದ್ದರು. ‘ಸೈಯ್ಯಾರ’ ಸಿನಿಮಾ ನೋಡಿ ಇಷ್ಟಪಟ್ಟವರಿಗೆ ‘ಬೇಬಿ’ ಸಿನಿಮಾ ಸಹ ಗ್ಯಾರೆಂಟಿ ಇಷ್ಟವಾಗುತ್ತದೆ ಎಂಬ ಕಾರಣಕ್ಕೆ ಇದೀಗ ‘ಬೇಬಿ’ ಸಿನಿಮಾ ಅನ್ನು ‘ಸೈಯ್ಯಾರ 2’ ಆಗಿ ರೀಮೇಕ್ ಮಾಡಲು ಮುಂದಾಗಲಾಗಿದೆ.
ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಹಾಗೂ ನಾಯಕಿಯಾಗಿ ವೈಷ್ಣವಿ ಚೈತನ್ಯ ನಟಿಸಿದ್ದ ‘ಬೇಬಿ’ ಸಿನಿಮಾ ಅನ್ನು ಸಾಯಿ ರಾಜೇಶ್ ನಿರ್ದೇಶನ ಮಾಡಿದ್ದಾರೆ. ಇನ್ನು ‘ಸೈಯ್ಯಾರ’ ಸಿನಿಮಾನಲ್ಲಿ ಅಹಾನ್ ಪಾಂಡೆ ನಾಯಕ. ಅನೀತಾ ಪಡ್ಡಾ ನಾಯಕಿ. ಸಿನಿಮಾ ನಿರ್ದೇಶನ ಮಾಡಿರುವುದು ಮೋಹಿತ್ ಸೂರಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:39 pm, Sun, 7 September 25




