ತೆಲುಗಿನ ಸಣ್ಣ ಸಿನಿಮಾಗಳ ಮೇಲೆ ಬಿತ್ತು ಬಾಲಿವುಡ್ ಕಣ್ಣು
Bollywood: ದಶಕಳಿಂದಲೂ ಬಾಲಿವುಡ್ನವರು ದಕ್ಷಿಣದ ಸಿನಿಮಾಗಳನ್ನು ರೀಮೇಕ್ ಮಾಡುತ್ತಾ ಬಂದಿದ್ದಾರೆ. ಈಗ ಪ್ಯಾನ್ ಇಂಡಿಯಾ ಕಾಲದಲ್ಲೂ ಹಿಂದಿಯವರು ರೀಮೇಕ್ ಚಾಳಿ ಬಿಟ್ಟಿಲ್ಲ. ಇದೀಗ ತೆಲುಗಿನ ಮೂರು ಸಣ್ಣ ಸಿನಿಮಾಗಳನ್ನು ಒಂದರ ಹಿಂದೊಂದರಂತೆ ರೀಮೇಕ್ ಮಾಡಲು ಬಾಲಿವುಡ್ ಮುಂದಾಗಿದೆ. ಯಾವುವು ಆ ಸಿನಿಮಾಗಳು? ಇಲ್ಲಿದೆ ಮಾಹಿತಿ...

ಬಾಲಿವುಡ್ನ (Bollywood) ಹಲವು ಕಲ್ಟ್ ಕ್ಲಾಸಿಕ್ ಸಿನಿಮಾಗಳು ಎನಿಸಿಕೊಂಡಿರುವ ಸಿನಿಮಾಗಳು ದಕ್ಷಿಣ ಭಾರತದ ಸಿನಿಮಾಗಳ ರೀಮೇಕ್ ಆಗಿವೆ. ದಕ್ಷಿಣದವರ ಸಿನಿಮಾಗಳನ್ನು ಅದ್ಧೂರಿಯಾಗಿ ರೀಮೇಕ್ ಮಾಡಿ ಹಲವು ಹಿಟ್ಗಳನ್ನು ಖಾತೆಗೆ ಹಾಕಿಕೊಂಡಿದೆ ಬಾಲಿವುಡ್. ಕಲ್ಟ್ ಕ್ಲಾಸಿಕ್ ಎಂದು ಕರೆಸಿಕೊಳ್ಳುವ ‘ಹೇರಾ ಪೇರಿ’, ‘ಭೂಲ್ ಭುಲಯ್ಯ’, ‘ತೇರೆ ನಾಮ್’, ‘ಪಹೇಲಿ’, ‘ಸ್ವದೇಸ್’ ಇನ್ನೂ ಹಲವು ಸಿನಿಮಾಗಳು ದಕ್ಷಿಣದಿಂದ ಎರವಲು ಪಡೆದ ಸಿನಿಮಾಗಳೇ. ಪ್ಯಾನ್ ಇಂಡಿಯಾ ಸಂಸ್ಕೃತಿ ಬಂದ ಬಳಿಕ ರೀಮೇಕ್ ಕಡಿಮೆ ಆಗಿದೆ. ಆದರೆ ಬಾಲಿವುಡ್ ಈಗಲೂ ಸಹ ರೀಮೇಕ್ ಚಾಳಿಯಿಂದ ಹೊರಬಂದಿಲ್ಲ. ಇತ್ತೀಚೆಗಷ್ಟೆ ತಮಿಳಿನ ‘ಲವ್ ಟುಡೆ’ ಸಿನಿಮಾ ರೀಮೇಕ್ ಮಾಡಿ ಸೋಲು ಕಂಡಿರುವ ಬಾಲಿವುಡ್ ಮಂದಿ ಈಗ ಬರೋಬ್ಬರಿ ಮೂರು ತೆಲುಗು ಸಿನಿಮಾಗಳ ಮೇಲೆ ಕಣ್ಣು ಹಾಕಿದ್ದಾರೆ.
ಸಣ್ಣ ಬಜೆಟ್ನ ಸಿನಿಮಾಗಳು, ಅಥವಾ ಕೇವಲ ಒಂದು ಭಾಷೆಯಲ್ಲಿ ಬಿಡುಗಡೆ ಆಗಿ ಹಿಟ್ ಆದ ಸಿನಿಮಾಗಳನ್ನು ಹೆಕ್ಕಿ-ಹೆಕ್ಕಿ ಆಯ್ದುಕೊಳ್ಳುತ್ತಿರುವ ಬಾಲಿವುಡ್, ಆ ಸಿನಿಮಾಗಳಿಗೆ ಗ್ಲಾಮರ್ ಸೇರಿಸಿ ‘ಬಾಲಿವುಡ್ ಮಾದರಿ’ಯಲ್ಲಿ ಪ್ರಸ್ತುತಪಡಿಸುತ್ತಿದೆ. ಇದೀಗ ತೆಲುಗಿನ ಹಿಟ್ ಸಿನಿಮಾಗಳಾದ ‘ಬೇಬಿ’, ‘ಸರಿಪೋದಾ ಶನಿವಾರಂ’ ಮತ್ತು ‘ಉಪ್ಪೆನ’ ಸಿನಿಮಾಗಳನ್ನು ಹಿಂದಿಗೆ ರೀಮೇಕ್ ಮಾಡಲಾಗುತ್ತಿದೆ.
ಇದನ್ನೂ ಓದಿ:‘ಉಪೇಂದ್ರ ಇಲ್ಲ ಅಂದ್ರೆ ನಾನಿಲ್ಲ’; ಅವಾರ್ಡ್ ಪಡೆದು ಗುರುವ ನೆನೆದ ಸಾಧು ಕೋಕಿಲ
ನಾನಿ ನಟಿಸಿದ್ದ ‘ಸರಿಪೋದಾ ಶನಿವಾರಂ’ ಸಿನಿಮಾ, ಭಿನ್ನ ಕತೆ ಜಬರ್ದಸ್ತ್ ಆಕ್ಷನ್ ಇಂದಾಗಿ ಗಮನ ಸೆಳೆದಿತ್ತು. ತೆಲುಗು ಭಾಷೆಯಲ್ಲಿ ಮಾತ್ರವೇ ಬಿಡುಗಡೆ ಆಗಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ಈ ಸಿನಿಮಾ ಹಿಂದಿಗೆ ರೀಮೇಕ್ ಆಗುತ್ತಿದ್ದು ಕಾರ್ತಿಕ್ ಆರ್ಯನ್ ನಟಿಸುತ್ತಿದ್ದಾರೆ. ಈ ಹಿಂದೆ ತೆಲುಗಿನ ‘ಅಲಾ ವೈಕುಂಟಪುರಂಲೋ’ ಸಿನಿಮಾದ ಹಿಂದಿ ರೀಮೇಕ್ನಲ್ಲಿ ಕಾರ್ತಿಕ್ ಆರ್ಯನ್ ನಟಿಸಿದ್ದರು. ಈಗ ‘ಸರಿಪೋದಾ ಶನಿವಾರಂ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.
ಇನ್ನು ತೆಲುಗಿನ ‘ಬೇಬಿ’ ಸಿನಿಮಾ ತ್ರಿಕೋನ ಪ್ರೇಮಕತೆಯ ಸಿನಿಮಾ. ಒಬ್ಬ ಯುವತಿ ಇಬ್ಬರು ಯುವಕರನ್ನು ಪ್ರೀತಿಸುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಣ್ಣ ಪಟ್ಟಣದಲ್ಲಿ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಆದರೆ ಈ ಕತೆಯನ್ನು ಬಾಲಿವುಡ್ನ ಸ್ಟಾಂಡರ್ಸ್ಸ್ ಗೆ ತಕ್ಕಂತೆ ಮಾರ್ಪಾಡು ಮಾಡಿ ನಿರ್ಮಾಣ ಮಾಡಲಾಗುತ್ತದೆ ಎನ್ನಲಾಗಿದೆ. ಇನ್ನು ‘ಉಪ್ಪೆನ’ ಸಹ ಒಂದೊಳ್ಳೆ ಪ್ರೇಮಕತಾ ಸಿನಿಮಾ ಆಗಿದ್ದು ಆ ಸಿನಿಮಾವನ್ನು ಸಹ ಹಿಂದಿಗೆ ರೀಮೇಕ್ ಮಾಡಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ