‘ಕತ್ರಿನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಸ್ವೀಟ್​ ಕೊಡಪ್ಪ’; ಮಗನ ಕಾಲೆಳೆದ ವಿಕ್ಕಿ ತಂದೆ-ತಾಯಿ

ಕ್ರತಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ವದಂತಿ ಕೇಳಿ ವಿಕ್ಕಿಯ ಪೋಷಕರು ತಮ್ಮ ಮಗನನ್ನು ನೇರವಾಗಿ ಪ್ರಶ್ನಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿಕ್ಕಿ ಸಹೋದರ ಸನ್ನಿ ಕೌಶಲ್ ಈ ವಿಚಾರ ಬಾಯಿಬಿಟ್ಟಿದ್ದಾರೆ.

‘ಕತ್ರಿನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಸ್ವೀಟ್​ ಕೊಡಪ್ಪ’; ಮಗನ ಕಾಲೆಳೆದ ವಿಕ್ಕಿ ತಂದೆ-ತಾಯಿ
ವಿಕ್ಕಿ ಕೌಶಲ್, ಕತ್ರಿನಾ ಕೈಫ್

ಬಣ್ಣದ ಲೋಕದಲ್ಲಿ ನಟ-ನಟಿಯರ ಬಗ್ಗೆ ಗಾಸಿಪ್​ ಹಬ್ಬುವುದು ಹೊಸದೇನೂ ಅಲ್ಲ. ಆದರೆ ಇಂಥ ಗಾಸಿಪ್​ಗಳಿಂದಾಗಿ ಕೆಲವೊಮ್ಮೆ ಅವರ ಕುಟುಂಬದವರಿಗೆ ಚಿಂತೆ ಆಗುತ್ತದೆ. ಚಿತ್ರರಂಗದಲ್ಲಿ ಮಕ್ಕಳ ಇಮೇಜ್​ಗೆ ಧಕ್ಕೆ ಆಗುತ್ತದೆ ಎಂದು ಕಲಾವಿದರ ಪೋಷಕರು ತಲೆ ಕೆಡಿಸಿಕೊಳ್ಳುತ್ತಾರೆ. ಆದರೆ ಬಾಲಿವುಡ್​ ನಟ ವಿಕ್ಕಿ ಕೌಶಲ್​ ಅವರ ತಂದೆ-ತಾಯಿ ಈ ಸಮಸ್ಯೆಯನ್ನು ಸ್ವಲ್ಪ ಡಿಫರೆಂಟ್​ ಆಗಿ ಹ್ಯಾಂಡಲ್​ ಮಾಡಿದ್ದಾರೆ. ಮಗನ ಬಗ್ಗೆ ಕೇಳಿಬಂದ ದೊಡ್ಡ ಗಾಸಿಪ್​​ಗೆ ಅವರು ತಮಾಷೆಯಿಂದಲೇ ಪ್ರತಿಕ್ರಿಯಿಸಿದ್ದಾರೆ. ನಟಿ ಕತ್ರಿನಾ ಕೈಫ್​ ಜೊತೆ ವಿಕ್ಕಿ ಕೌಶಲ್​ ಎಂಗೇಜ್​ಮೆಂಟ್​ ಮಾಡಿಕೊಂಡರು ಎಂಬ ಗಾಸಿಪ್​ ಇತ್ತೀಚೆಗೆ ಬಲವಾಗಿ ಕೇಳಿಬಂದಿತ್ತು.

2019ರಿಂದ ಈಚೆಗೆ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಗಾಳಿಸುದ್ದಿ ಕೇಳಿಬರುತ್ತಿದೆ. ಈ ಬಗ್ಗೆ ಅವರಿಬ್ಬರು ಯಾವುದೇ ಬಹಿರಂಗ ಹೇಳಿಕೆಗಳನ್ನು ನೀಡಿಲ್ಲ. ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎಂಬುದು ಗಾಸಿಪ್​ ಮಂದಿಯ ವಾದ. ಎಂಗೇಜ್​ಮೆಂಟ್​ ಮಾಡಿಕೊಳ್ಳುವ ಮಟ್ಟಕ್ಕೆ ಅವರ ಪ್ರೇಮ್​ ಕಹಾನಿ ಮುಂದುವರಿದಿದೆ ಎಂಬ ಗಾಸಿಪ್​ ಇತ್ತೀಚೆಗೆ ಹಬ್ಬಿತ್ತು. ಅದು ವಿಕ್ಕಿ ಕೌಶಲ್​ ಮನೆಯವರ ಕಿವಿಗೆ ಬಿದ್ದಾಗ ಅವರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಅವರ ಸಹೋದರ ಸನ್ನಿ ಕೌಶಲ್​ ವಿವರಿಸಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸನ್ನಿ ಕೌಶಲ್ ಈ ವಿಚಾರ ಬಾಯಿಬಿಟ್ಟಿದ್ದಾರೆ. ‘ಅಂದು ವಿಕ್ಕಿ ಜಿಮ್​ಗೆ ಹೋಗಿದ್ದ. ಆತ ಮನೆಗೆ ಬರುವುದರೊಳಗೆ ಕತ್ರಿನಾ ಕೈಫ್​ ಜೊತೆಗಿನ ಎಂಗೇಜ್​ಮೆಂಟ್​ ವದಂತಿ ಅಪ್ಪ-ಅಮ್ಮನ ಕಿವಿಗೆ ಬಿದ್ದಿತ್ತು. ಅವನು ಜಿಮ್​ ಮುಗಿಸಿ ಬಂದ ತಕ್ಷಣ ಅವರು ಆ ಬಗ್ಗೆ ವಿಚಾರಿಸಿದರು. ನಿಶ್ಚಿತಾರ್ಥ ಮಾಡಿಕೊಂಡಿದ್ದೀಯಂತೆ, ನಮಗೆಲ್ಲ ಸ್ವೀಟ್​ ಕೊಡಪ್ಪ ಅಂತ ಕೇಳಿದರು’ ಎಂದು ಆ ಘಟನೆಯನ್ನು ಹೇಳಿಕೊಂಡು ನಕ್ಕಿದ್ದಾರೆ ವಿಕ್ಕಿ ಕೌಶಲ್​ ತಮ್ಮ ಸನ್ನಿ ಕೌಶಲ್​.

ತಮ್ಮ ಎಂಗೇಜ್​ಮೆಂಟ್​ ವದಂತಿಯನ್ನು ಮನೆಯವರು ಹಗುರವಾಗಿ ಪರಿಗಣಿಸಿದ್ದಕ್ಕೆ ವಿಕ್ಕಿಗೂ ಸಮಾಧಾನ ಆಗಿರಬೇಕು. ಅವರು ಕೂಡ ಅಷ್ಟೇ ತಮಾಷೆಯಾಗಿ ಉತ್ತರ ನೀಡಿದರಂತೆ. ‘ಇದು ಕಾಲ್ಪನಿಕ ನಿಶ್ಚಿತಾರ್ಥ ಆದ್ದರಿಂದ ನಿಮಗೂ ಕಾಲ್ಪನಿಕ ಸ್ವೀಟ್​ ನೀಡುತ್ತೇನೆ’ ಅಂತ ವಿಕ್ಕಿ ಉತ್ತರಿಸಿದ್ದರು ಎಂದು ಸನ್ನಿ ವಿವರಿಸಿದ್ದಾರೆ. ಗಾಸಿಪ್ ಅದೇನೇ ಇರಲಿ ವಿಕ್ಕಿ-ಕತ್ರಿನಾ ಜೋಡಿಯನ್ನು ಅವರ ಅಭಿಮಾನಿಗಳು ಸಖತ್​ ಇಷ್ಟಪಡುತ್ತಿದ್ದಾರೆ. ಆದಷ್ಟು ಬೇಗ ಅವರಿಬ್ಬರು ಮದುವೆ ಆಗಲಿ ಎಂದು ಹಾರೈಸುತ್ತಿದ್ದಾರೆ.

ಈ ಮೊದಲು ರಣಬೀರ್​ ಕಪೂರ್​ ಜೊತೆ ಕತ್ರಿನಾ ಕೈಫ್​ ಡೇಟಿಂಗ್​ ಮಾಡುತ್ತಿದ್ದರು. ಸಲ್ಮಾನ್​ ಖಾನ್​ ಜೊತೆಗೂ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಸದ್ಯ ಸಲ್ಲು ಜೊತೆ ಅವರು ‘ಟೈಗರ್​ 3’ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಇತ್ತ, ವಿಕ್ಕಿ ಕೌಶಲ್​ ಕೂಡ ಹಲವು ಆಫರ್​ಗಳನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ:

ಮಾಡೆಲಿಂಗ್ ಮಾಡುತ್ತಿದ್ದ ದಿನಗಳಲ್ಲಿ ದೀಪಿಕಾ ಹಾಗೂ ಕತ್ರಿನಾ ಹೇಗಿದ್ದರು? ಅಪರೂಪದ ಚಿತ್ರ ನೋಡಿ

ವಿಕ್ಕಿ ಕೌಶಲ್​- ಕತ್ರಿನಾ ಸಂಬಂಧದ ಬಗ್ಗೆ ಬಾಯ್ಬಿಟ್ಟ ಕಪೂರ್​ ಕುಟುಂಬದ ಕುಡಿ; ಶೀಘ್ರವೇ ಮದುವೆ?

Click on your DTH Provider to Add TV9 Kannada