12th ಫೇಲ್ ನಾಯಕನಿಗೆ ಮತ್ತೊಂದು ದೊಡ್ಡ ಅವಕಾಶ
Vikrant Massey: ‘12th ಫೇಲ್’ ಸಿನಿಮಾ ಮೂಲಕ ಸಖತ್ ಗಮನ ಸೆಳೆದಿರುವ ನಟ ವಿಕ್ರಾಂತ್ ಮೆಸ್ಸಿಗೆ ಇದೀಗ ಭಾರತದ ಜನಪ್ರಿಯ ನಿರ್ದೇಶಕ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡುವ ಆಫರ್ ಅರಸಿ ಬಂದಿದೆ.
ಬಾಲಿವುಡ್ನಿಂದ (Bollywood) ಕೇವಲ ತಲೆ-ಬುಡವಿಲ್ಲದ ಮಾಸ್ ಆಕ್ಷನ್ ಸಿನಿಮಾಗಳು, ಅಥವಾ ಕಾರ್ಪೊರೇಟ್, ಗ್ಲಾಮರ್ ಕಲ್ಚರ್ ಪ್ರತಿನಿಧಿಸುವ ಸಿನಿಮಾಗಳು ಮಾತ್ರವೇ ಬರುತ್ತಿವೆ ಎಂಬ ದೂರು ಬಹಳ ವರ್ಷಗಳಿಂದಲೂ ಇತ್ತು. ಬಾಲಿವುಡ್, ಸಾಮಾನ್ಯ ಪ್ರೇಕ್ಷಕನ ಬದುಕು ಪ್ರತಿಬಿಂಬಿಸುವ ಸಿನಿಮಾ ಮಾಡುವುದಿಲ್ಲವೆಂಬ ದೊಡ್ಡ ಆರೋಪವಿತ್ತು, ಅದು ನಿಜವೂ ಆಗಿತ್ತು. ಆದರೆ ಇತ್ತೀಚೆಗೆ ಬಿಡುಗಡೆ ಆದ ‘12th ಫೇಲ್’ ಸಿನಿಮಾ ಆರೋಪಗಳಿಗೆ ಉತ್ತರದಂತಿತ್ತು. ಸಾಮಾನ್ಯ ವ್ಯಕ್ತಿಯೊಬ್ಬನ ಅಸಾಮಾನ್ಯ ಕತೆಯನ್ನು ಅದ್ಭುತವಾದ ನಿರೂಪಣೆಯೊಟ್ಟಿಗೆ ವಿದು ವಿನೋದ್ ಚೋಪ್ರಾ ತೆರೆಗೆ ತಂದಿದ್ದರು. ಸಿನಿಮಾದ ನಾಯಕ ವಿಕ್ರಾಂತ್ ಮಾಸ್ಸಿ ನಟನೆಯಂತೂ ನೋಡಿದವರ ಹೃದಯ ತಟ್ಟಿತ್ತು. ಈ ಅದ್ಭುತ ನಟನಿಗೆ ಮತ್ತೊಂದು ಅವಕಾಶ ಒದಗಿ ಬಂದಿದೆ.
‘ಮಿರ್ಜಾಪುರ್’ ವೆಬ್ ಸರಣಿಯಲ್ಲಿ ನಟಿಸಿ ಗಮನ ಸೆಳೆದಿದ್ದ ವಿಕ್ರಾಂತ್ ಮಾಸ್ಸಿ, ‘12th ಫೇಲ್’ ಸಿನಿಮಾ ಮೂಲಕ ದೊಡ್ಡ ಅವಕಾಶ ಪಡೆದುಕೊಂಡರು. ಆ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರು. ವಿಕ್ರಾಂತ್ ಮಾಸ್ಸಿಗೆ ಈಗ ಹಲವು ದೊಡ್ಡ ಅವಕಾಶಗಳು ಅರಸಿ ಬರುತ್ತಿವೆ. ಇದೀಗ ಭಾರತದ ಅತ್ಯಂತ ಯಶಸ್ವಿ ಹಾಗೂ ಪ್ರತಿಭಾನ್ವಿತ ನಿರ್ದೇಶಕರ ಸಿನಿಮಾದಲ್ಲಿ ನಟಿಸುವ ಅವಕಾಶ ಒದಗಿ ಬಂದಿದೆ.‘
ಇದನ್ನೂ ಓದಿ:‘ಬಾಕ್ಸ್ ಆಫೀಸ್ ಕ್ಲ್ಯಾಶ್ ತಪ್ಪಿಸಲು ಸಾಧ್ಯವೇ ಇಲ್ಲ’; ವಿವರಿಸಿದ ರಾಜ್ಕುಮಾರ್ ಹಿರಾನಿ
ಭಾರತೀಯ ಚಿತ್ರರಂಗದ ಸೋಲೇ ಇಲ್ಲದ ನಿರ್ದೇಶಕ ಎನಿಸಿಕೊಂಡಿರುವವರು ರಾಜ್ಕುಮಾರ್ ಹಿರಾನಿ. ಸ್ವತಃ ರಾಜಮೌಳಿ ಸಹ, ತಾವು ರಾಜ್ಕುಮಾರ್ ಹಿರಾನಿಯ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಶಾರುಖ್ ಖಾನ್ ಜೊತೆಗೆ ‘ಡಂಕಿ’ ಹೆಸರಿನ ಸಿನಿಮಾ ಮಾಡಿದ್ದರು ಹಿರಾನಿ. ಆ ಸಿನಿಮಾ ಸೂಪರ್ ಹಿಟ್ ಆಗಿದೆ. ಇದೀಗ ಹೊಸ ಪ್ರಾಜೆಕ್ಟ್ ಒಂದನ್ನು ಹಿರಾನಿ ಪ್ರಾರಂಭ ಮಾಡುತ್ತಿದ್ದು, ವಿಕ್ರಾಂತ್ ಮೆಸ್ಸಿ ಆ ಸಿನಿಮಾದ ನಾಯಕ ನಟನಾಗಿ ಆಯ್ಕೆ ಆಗಿದ್ದಾರೆ.
ವಿಶೇಷವೆಂದರೆ ಹಿರಾನಿ, ಸಿನಿಮಾ ಮಾಡುತ್ತಿಲ್ಲ ಬದಲಿಗೆ ವೆಬ್ ಸರಣಿಯೊಂದನ್ನು ನಿರ್ದೇಶನ ಮಾಡುವವರಿದ್ದಾರೆ. ಈ ವೆಬ್ ಸರಣಿಯಲ್ಲಿ ನಾಯಕನಾಗಿ ರಣ್ಬೀರ್ ಕಪೂರ್ ನಟಿಸಲಿದ್ದು, ಅದೇ ಸಿನಿಮಾದ ಮತ್ತೊಂದು ಪ್ರಮುಖ ಪಾತ್ರದಲ್ಲಿ ವಿಕ್ರಾಂತ್ ಮೆಸ್ಸಿ ನಟಿಸಲಿದ್ದಾರೆ. ಈ ವೆಬ್ ಸರಣಿ ಸೈಬರ್ ಕ್ರೈಂ ಮೇಲೆ ಆಧರಿತವಾಗಿದೆ. ಶೀಘ್ರವೇ ವೆಬ್ ಸರಣಿಯ ಚಿತ್ರೀಕರಣ ಆರಂಭವಾಗಲಿದೆ. ವಿಕ್ರಾಂತ್ ಮಾಸ್ಸಿಗೆ ಯಶ್ರಾಜ್ ಫಿಲಮ್ಸ್ನಿಂದಲೂ ಆಫರ್ ಬಂದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ