‘ಸೆಟ್ನಲ್ಲಿ ಚಿತ್ರ ವಿಚಿತ್ರ ಘಟನೆ ನಡೆದವು, ಆ ಸಿನಿಮಾದಲ್ಲಿ ಕೆಲಸ ಮಾಡಿದವರೆಲ್ಲ ದೂರಾದರು‘
Tumbbad movie: ‘ತುಂಬಾಡ್’ ಸಿನಿಮಾ ಮರಾಠಿಯ ಕಲ್ಟ್ ಕ್ಲಾಸಿಕ್ ಸಿನಿಮಾ. ಇತ್ತೀಚೆಗಷ್ಟೆ ಮರು ಬಿಡುಗಡೆ ಆದ ಈ ಹಾರರ್ ಸಿನಿಮಾ ಗಳಿಕೆಯಲ್ಲಿ ದಾಖಲೆ ಬರೆಯಿತು. ಸಿನಿಮಾಕ್ಕಾಗಿ ಕೆಲಸ ಮಾಡಿದ ತಂತ್ರಜ್ಞೆ, ನಟಿಯೊಬ್ಬರು ಮಾತನಾಡಿ ಸಿನಿಮಾ ಚಿತ್ರೀಕರಣ ನಡೆಯುವಾಗ ಸೆಟ್ನಲ್ಲಿ ನಡೆಯುತ್ತಿದ್ದ ವಿಚಿತ್ರ ಘಟನೆಗಳ ಬಗ್ಗೆ ಮಾತನಾಡಿದ್ದಾರೆ.

ಸಿನಿಮಾ (Cinema) ಶೂಟಿಂಗ್ ಮಾಡುವಾಗ ಯಾರದ್ದೋ ಮೈ ಮೇಲೆ ದೇವರು ಬಂತು, ಹಾರರ್ ಸಿನಿಮಾ ಶೂಟ್ ಮಾಡುವಾಗ ಯಾರಿಗೋ ದೆವ್ವ ಕಾಣಿಸಿತು ಇಂಥಹಾ ಕತೆಗಳು ಮೊದಲೆಲ್ಲ ಬಹಳ ಕೇಳಲು ಸಿಗುತ್ತಿತ್ತು. ಕೆಲ ವರ್ಷಗಳ ಹಿಂದೆ ಬಿಡುಗಡೆ ಆಗಿ ಕಲ್ಟ್ ಕ್ಲಾಸಿಕ್ ಎನಿಸಿಕೊಂಡ ಹಾಗೂ ಇತ್ತೀಚೆಗೆ ಮರು ಬಿಡುಗಡೆ ಆದಾಗ ದೊಡ್ಡ ಹಿಟ್ ಆದ ‘ತುಂಬಾಡ್’ ಸಿನಿಮಾ ಶೂಟಿಂಗ್ ಸಮಯದಲ್ಲಿ ಸಹ ಇಂಥಹಾ ಹಲವು ಘಟನೆಗಳು ನಡೆದಿದ್ದವಂತೆ. ವರ್ಷಗಳ ಕಾಲ ಆ ಸಿನಿಮಾಕ್ಕಾಗಿ ಕೆಲಸ ಮಾಡಿದ ತಂತ್ರಜ್ಞೆಯೊಬ್ಬರು ‘ತುಂಬಾಡ್’ ಸಿನಿಮಾ ಶೂಟಿಂಗ್ ಸಮಯದಲ್ಲಿ ನಡೆದ ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ.
ನಟಿ, ತಂತ್ರಜ್ಞೆ ಎರಡೂ ಆಗಿರುವ ಶ್ರುತಿ ಬ್ಯಾನರ್ಜಿ ‘ತುಂಬಾಡ್’ ಸಿನಿಮಾ ಪ್ರಾರಂಭ ಆದಾಗಿನಿಂದ ಕೊನೆಯಾಗುವವರೆಗೂ ಸಿನಿಮಾ ತಂಡದಲ್ಲಿದ್ದರು. ಅವರೇ ಹೇಳಿಕೊಂಡಿರುವಂತೆ ಅವರ ಜೀವನದ 10 ವರ್ಷವನ್ನು ಅವರು ‘ತುಂಬಾಡ್’ ಸಿನಿಮಾಕ್ಕಾಗಿ ನೀಡಿದ್ದಾರಂತೆ. ಅವರು ಮದುವೆಯಾಗಿದ್ದು ಶೂಟಿಂಗ್ ಸಮಯದಲ್ಲೇ. ಶೂಟಿಂಗ್ ಮುಗಿಯುವ ಮುಂಚೆಯೇ ಅವರ ವಿಚ್ಛೇದನವೂ ಆಗಿ ಹೋಯ್ತಂತೆ.
ಸಂದರ್ಶನದಲ್ಲಿ ಅವರು ಹೇಳಿರುವಂತೆ, ಸಿನಿಮಾ ಸೆಟ್ನಲ್ಲಿ ಎನರ್ಜಿಯೇ ಸರಯಿರಲಿಲ್ಲವಂತೆ. ‘ಸಂಪೂರ್ಣ ನೆಗೆಟಿವ್ ಎನರ್ಜಿ ಇತ್ತು. ಹಲವು ಆತ್ಮೀಯ ಗೆಳೆಯರು ಸೇರಿಕೊಂಡು ಆ ಸಿನಿಮಾ ಮಾಡುತ್ತಿದ್ದರು. ಆದರೆ ಆ ಸಿನಿಮಾಕ್ಕೆ ಕೆಲಸ ಮಾಡಿದ ಎಲ್ಲರೂ ಪರಸ್ಪರ ಜಗಳ ಆಡಿಕೊಂಡರು. ಒಬ್ಬರಿಗೊಬ್ಬರು ಆತ್ಮೀಯರಾಗಿದ್ದವರು ಸಹ ಸಿನಿಮಾ ಮುಗಿಯುವಷ್ಟರಲ್ಲಿ ದೂರಾಗಿಬಿಟ್ಟರು’ ಎಂದಿದ್ದಾರೆ ಶ್ರುತಿ ಬ್ಯಾನರ್ಜಿ.
ಇದನ್ನೂ ಓದಿ:ಮರು ಬಿಡುಗಡೆಯಲ್ಲಿ ಖುಲಾಯಿಸಿದ ಅದೃಷ್ಟ, ‘ತುಂಬಾಡ್’ ಭರ್ಜರಿ ಕಲೆಕ್ಷನ್
ಸಿನಿಮಾಕ್ಕೆ ಕೆಲಸ ಮಾಡುತ್ತಿದ್ದ ವ್ಯಕ್ತಿಗಳ ನಡವಳಿಕಯೇ ಬಹಳ ಭಿನ್ನವಾಗಿ ಇರುತ್ತಿತ್ತು. ಕೋಪ, ಅಸಹನೆ, ಸಿಟ್ಟು, ಈರ್ಶೆ, ಹಗೆತನ, ಮೋಸ ಎಲ್ಲವೂ ಕೆಲಸ ಮಾಡುವ ಎಲ್ಲರಲ್ಲೂ ತುಂಬಿತ್ತು. ಸಿನಿಮಾದಲ್ಲಿ ನಾವು ಏನು ಹೇಳಲು ಯತ್ನಿಸುತ್ತಿದ್ದೆವೊ ಅದು ಅಲ್ಲಿ ಕೆಲಸ ಮಾಡುವವರಲ್ಲಿಯೂ ತುಂಬಿತ್ತು. ಒಟ್ಟಾರೆ ಆ ಸಿನಿಮಾ ಸೆಟ್ನಲ್ಲಿ ಸಂಪೂರ್ಣವಾಗಿ ನೆಗೆಟಿವ್ ಎನರ್ಜಿ ತುಂಬಿತ್ತು’ ಎಂದಿದ್ದಾರೆ.
’ತುಂಬಾಡ್’ ಸಿನಿಮಾ 2018 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಮೊದಲು ಬಿಡುಗಡೆ ಆದಾಗ ಅಷ್ಟೇನೂ ಸದ್ದು ಮಾಡಲಿಲ್ಲ ಆದರೆ ಅದಾದ ಬಳಿಕ ಸಿನಿಮಾಕ್ಕೆ ಕಲ್ಟ್ ಅಭಿಮಾನಿ ವರ್ಗ ಬೆಳೆಯಿತು. ಆ ನಂತರ ಅಮೆಜಾನ್ ಪ್ರೈಂನಲ್ಲಿ ಸಿನಿಮಾ ದೊಡ್ಡ ಹಿಟ್ ಆಯ್ತು. ಇತ್ತೀಚೆಗಷ್ಟೆ ಸಿನಿಮಾ ಮರು ಬಿಡುಗಡೆ ಆಗಿ ಭಾರಿ ದೊಡ್ಡ ಕಲೆಕ್ಷನ್ ಮಾಡಿತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ