
ಹೃದಯಾಘಾತದಿಂದ ನಿಧನರಾದ ಹಿರಿಯ ನಟ ನಾನಾ ಪಾಟೇಕರ್ ಅವರ ಅಂತಿಮ ಸಂಸ್ಕಾರವು ಪುಣೆಯ ಹೊರವಲಯದ ಡೋಂಜೆ ಗ್ರಾಮದಲ್ಲಿರುವ ಅವರ ಫಾರ್ಮ್‌ಹೌಸ್‌ನಲ್ಲಿ ರಾತ್ರಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ನಾನಾಚಿ ವಾಡಿ ಎಂದು ಕರೆಯಲ್ಪಡುವ ಫಾರ್ಮ್‌ಹೌಸ್‌ನಲ್ಲಿ ರಾತ್ರಿ 11:30 ರ ಸುಮಾರಿಗೆ ಅವರ ಪಾರ್ಥಿವ ಶರೀರಕ್ಕೆ ಅಂತ್ಯಸಂಸ್ಕಾರ ಮಾಡಲಾಯಿತು. ಹಿಂದೂ ಸಂಪ್ರದಾಯದಲ್ಲಿ ಸೂರ್ಯಾಸ್ತದ ನಂತರ ಅಂತ್ಯಕ್ರಿಯೆ ಮಾಡುವುದು ಅಪರೂಪವಾದರೂ, ತಡವಾಗಿ ಸಂಸ್ಕಾರ ನೆರವೇರಿಸಲು ಕಾರಣವನ್ನು ನಟನ ಮಗ ಮಲ್ಹಾರ್ ಪಾಟೇಕರ್ ಸ್ಪಷ್ಟಪಡಿಸಿದ್ದಾರೆ.
ಗೋವಾದಿಂದ ಪಾರ್ಥಿವ ಶರೀರವನ್ನು ಪುಣೆಗೆ ತರುವುದು ತಡವಾಗಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ನಾನಾ ಪಾಟೇಕರ್ ಅವರು ಗುರುವಾರ ಬೆಳಗಿನ ಜಾವವೇ ಕೊನೆಯುಸಿರೆಳೆದಿದ್ದರು. ಸುದೀರ್ಘ ಸಮಯ ಕಳೆದಿದ್ದರಿಂದ ಆ ದಿನವೇ ಅಂತಿಮ ಸಂಸ್ಕಾರ ಪೂರ್ಣಗೊಳಿಸುವುದು ಅಗತ್ಯವಾಗಿತ್ತು. ಹೀಗಾಗಿ ಕುಟುಂಬಸ್ಥರು ರಾತ್ರಿಯಾದರೂ ಕಾರ್ಯ ನೆರವೇರಿಸಲು ತೀರ್ಮಾನಿಸಿದರು’ ಎಂದು ಮಲ್ಹಾರ್ ತಿಳಿಸಿದ್ದಾರೆ.
ಅಂತಿಮ ಸಂಸ್ಕಾರಕ್ಕೂ ಮುನ್ನ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪುಣೆ ವಿಮಾನ ನಿಲ್ದಾಣದಲ್ಲಿ ನಟನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ನಂತರ ರಸ್ತೆ ಮಾರ್ಗವಾಗಿ ಪಾರ್ಥಿವ ಶರೀರವನ್ನು ಫಾರ್ಮ್‌ಹೌಸ್‌ಗೆ ತರಲಾಯಿತು. ಮಹಿಳಾ ಪೊಲೀಸ್ ಸಿಬ್ಬಂದಿಯಿಂದ 21 ಗನ್ ಸೆಲ್ಯೂಟ್ ಗೌರವ ಹಾಗೂ ತ್ರಿವರ್ಣ ಧ್ವಜ ಹೊದಿಸಿ, ಮಿಲಿಟರಿ ಬ್ಯಾಂಡ್‌ನೊಂದಿಗೆ ಅಂತಿಮ ಯಾತ್ರೆ ಸಾಗಿತು.
ಈ ವೇಳೆ ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಸುನೇತ್ರಾ ಪವಾರ್ ಸೇರಿದಂತೆ ಹಲವಾರು ರಾಜಕೀಯ ನಾಯಕರು ಹಾಗೂ ನಟ ಜಾಕಿ ಶ್ರಾಫ್ ಮುಂತಾದ ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು. ನೆಚ್ಚಿನ ನಟನ ಅಂತಿಮ ದರ್ಶನಕ್ಕಾಗಿ ಸಾವಿರಾರು ಅಭಿಮಾನಿಗಳು ಮಧ್ಯಾಹ್ನದಿಂದಲೇ ಕಾಯುತ್ತಿದ್ದರು. ‘ನಾನಾ ಪಾಟೇಕರ್ ಅಮರ ರಹೇ’ ಎಂಬ ಘೋಷಣೆಗಳು ಆವರಣದಲ್ಲೆಲ್ಲಾ ಮೊಳಗಿದವು.
ಇದನ್ನೂ ಓದಿ: ‘ನಾನಾ ಪಾಟೇಕರ್ ಅವರದ್ದು ಅಸ್ವಾಭಾವಿಕ ಸಾವು’; ಪ್ರಕರಣ ದಾಖಲಿಸಿಕೊಂಡ ಪೊಲೀಸ್
ಮೂರು ಬಾರಿಯ ರಾಷ್ಟ್ರಪ್ರಶಸ್ತಿ ವಿಜೇತರಾದ ನಾನಾ ಪಾಟೇಕರ್ ತಮ್ಮ ಅದ್ಭುತ ಅಭಿನಯದಿಂದ ದೇಶಾದ್ಯಂತ ಜನಪ್ರಿಯರಾಗಿದ್ದರು. ಕೇವಲ ನಟನೆಯಷ್ಟೇ ಅಲ್ಲದೆ, ರೈತರು ಹಾಗೂ ಗ್ರಾಮೀಣ ಪ್ರದೇಶದ ಜನರ ಏಳಿಗೆಗಾಗಿ ‘ನಾಮ್ ಫೌಂಡೇಶನ್’ ಮೂಲಕ ದೊಡ್ಡ ಮಟ್ಟದ ಸಾಮಾಜಿಕ ಸೇವೆ ಸಲ್ಲಿಸಿದ್ದರು. ಅವರ ಅಗಲಿಕೆಯಿಂದ ಭಾರತೀಯ ಚಿತ್ರರಂಗ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.