ಮಗಳ ಮುಖ ತೋರಿಸಿ ಎಂದು ಬೇಡಿಕೆ ಇಟ್ಟ ಫ್ಯಾನ್ಸ್; ದೀಪಿಕಾ, ರಣವೀರ್ ನಿರ್ಧಾರ ಏನು?
ಮಗುವಿನ ಆರೈಕೆಯಲ್ಲಿ ತೊಡಗಿಕೊಂಡಿರುವ ನಟಿ ದೀಪಿಕಾ ಪಡುಕೋಣೆ ಅವರು ಸದ್ಯಕ್ಕೆ ಸಿನಿಮಾದ ಕೆಲಸಗಳನ್ನು ಬದಿಗಿಟ್ಟಿದ್ದಾರೆ. ಮಗುವಿಗಾಗಿ ಅವರು ಇನ್ನೂ ಅನೇಕ ತಿಂಗಳ ಕಾಲ ಸಮಯ ಮೀಸಲಿಡಲಿದ್ದಾರೆ. ಅವರ ಪತಿ ರಣವೀರ್ ಸಿಂಗ್ ಕೂಡ ಬ್ರೇಕ್ ಪಡೆದುಕೊಂಡಿದ್ದಾರೆ. ಈ ಕ್ಯೂಟ್ ದಂಪತಿಯ ಮಗುವನ್ನು ನೋಡಬೇಕು ಎಂಬುದು ಅಭಿಮಾನಿಗಳ ಆಸೆ.
ಬಾಲಿವುಡ್ ಸೆಲೆಬ್ರಿಟಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಇತ್ತೀಚೆಗಷ್ಟೇ ಅವರು ತಂದೆ-ತಾಯಿ ಆಗಿದ್ದಾರೆ. ಸೆಪ್ಟೆಂಬರ್ 8ರಂದು ದೀಪಿಕಾ ಪಡುಕೋಣೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿದ್ದ ದೀಪಿಕಾ ಪಡುಕೋಣೆ ಅವರನ್ನು ನೋಡಲು ಕೆಲವು ಆಪ್ತ ಸೆಲೆಬ್ರಿಟಿಗಳು ಆಗಮಿಸಿದ್ದರು. ಇಂದು (ಸೆಪ್ಟೆಂಬರ್ 15) ದೀಪಿಕಾ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಈ ನಡುವೆ ಅಭಿಮಾನಿಗಳು ಒಂದು ಬೇಡಿಕೆ ಇಟ್ಟಿದ್ದಾರೆ.
ಸದ್ಯಕ್ಕಂತೂ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಮಗಳ ಮುಖುವನ್ನು ತೋರಿಸಿಲ್ಲ. ಆದರೆ ಅಭಿಮಾನಿಗಳು ಈ ವಿಚಾರದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮುದ್ದು ಮಗಳ ಫೋಟೋ ತೋರಿಸಿ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ಕೌತುಕ ಮೂಡಿದೆ.
ಮಕ್ಕಳ ಮುಖ ತೋರಿಸುವ ಬಗ್ಗೆ ಬಾಲಿವುಡ್ ಮಂದಿಗೆ ಬೇರೆ ಬೇರೆ ರೀತಿಯ ಅಭಿಪ್ರಾಯ ಇದೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಯ್ಲಿ ದಂಪತಿ ತಮ್ಮ ಮಗಳನ್ನು ಮಾಧ್ಯಮಗಳ ಎದುರು ಕರೆತಂದಿಲ್ಲ. ಮಗಳ ಫೋಟೋವನ್ನು ತೆಗೆಯಬೇಡಿ ಎಂದು ಪಾಪರಾಜಿಗಳಿಗೆ ಅವರು ಸೂಚನೆ ನೀಡಿದ್ದಾರೆ. ಅದನ್ನು ಪಾಪರಾಜಿಗಳು ಪಾಲಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಇದೇ ಸೂತ್ರ ಅನುಸರಿಸುತ್ತಾರೆ ಎಂದು ಕೆಲವರು ಊಹಿಸಿದ್ದಾರೆ.
ಇದನ್ನೂ ಓದಿ: ದೀಪಿಕಾ ಪಡುಕೋಣೆ ಮಗುವಿಗಾಗಿ ದುಬೈನಲ್ಲಿ ಶಾಪಿಂಗ್ ಮಾಡಿ ಟ್ರೋಲ್ ಆದ ರಾಖಿ ಸಾವಂತ್
ಇನ್ನು, ರಣಬೀರ್ ಕಪೂರ್-ಆಲಿಯಾ ಭಟ್ ಅವರ ನಿರ್ಧಾರ ಬೇರೆ ರೀತಿ ಇದೆ. ಈಗಾಗಲೇ ಅವರು ತಮ್ಮ ಮಗಳನ್ನು ಪಾಪರಾಜಿಗಳ ಎದುರು ಕರೆತಂದಿದ್ದಾರೆ. ಮೊದಲ ಬಾರಿಗೆ ಮಗಳನ್ನು ಜಗತ್ತಿಗೆ ತೋರಿಸುವಾಗ ಪಾಪರಾಜಿಗಳ ಬಳಿ ರಣಬೀರ್ ಕಪೂರ್ ಅವರು ಒಂದು ಮನವಿ ಮಾಡಿದ್ದರು. ‘ದಯವಿಟ್ಟು ಗಲಾಟೆ ಮಾಡಬೇಡಿ’ ಎಂಬುದಷ್ಟೇ ಅವರ ಮನವಿ ಆಗಿತ್ತು. ಇನ್ನು, ಕರೀನಾ ಕಪೂರ್ ಖಾನ್ ಕೂಡ ತಮ್ಮ ಮಕ್ಕಳನ್ನು ಮಾಧ್ಯಮಗಳ ಕ್ಯಾಮೆರಾ ಕಣ್ಣಿನಿಂದ ದೂರ ಇಟ್ಟಿಲ್ಲ. ದೀಪಿಕಾ ಪಡುಕೋಣೆ ಸಹ ಹೀಗೆ ಮಾಡುವ ಸಾಧ್ಯತೆ ಇದೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.