ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ: ಯಶ್ ಸಿನಿಮಾದ ತೆರೆಹಿಂದೆ 10 ಸಾವಿರಕ್ಕೂ ಹೆಚ್ಚು ತಂತ್ರಜ್ಞರು

‘ರಾಮಾಯಣ’ ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ಐಮ್ಯಾಕ್ಸ್ ಚಿತ್ರಮಂದಿರಗಳಲ್ಲೂ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಬೃಹತ್ ತಾಂತ್ರಿಕ ತಂಡದ ಕಾರಣದಿಂದ ಈ ಸಿನಿಮಾ ಸುದ್ದಿ ಆಗುತ್ತಿದೆ. ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ ಮುಂತಾದವರು ನಟಿಸಿರುವ ಈ ಸಿನಿಮಾದ ತೆರೆಹಿಂದೆ 10 ಸಾವಿರ ಮಂದಿ ಕೆಲಸ ಮಾಡುತ್ತಿದ್ದಾರೆ.

ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ: ಯಶ್ ಸಿನಿಮಾದ ತೆರೆಹಿಂದೆ 10 ಸಾವಿರಕ್ಕೂ ಹೆಚ್ಚು ತಂತ್ರಜ್ಞರು
Ramayana Movie Shooting

Updated on: May 19, 2026 | 2:22 PM

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಚಿತ್ರವಾಗಿ ‘ರಾಮಾಯಣ’ (Ramayana) ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾದಲ್ಲಿ ನಟ ಯಶ್ (Yash) ಅವರು ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಅಭಿನಯಿಸುತ್ತಿದ್ದಾರೆ. ಬೃಹತ್ ಬಜೆಟ್‌ನಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ನಿರ್ಮಾಪಕ ನಮಿತ್ ಮಲ್ಹೋತ್ರಾ, ನಿರ್ದೇಶಕ ನಿತೇಶ್ ತಿವಾರಿ ಅವರು ‘ರಾಮಾಯಣ’ ಸಿನಿಮಾವನ್ನು ಭಾರಿ ದೊಡ್ಡ ಮಟ್ಟದಲ್ಲಿ ಸಿದ್ಧಪಡಿಸುತ್ತಿದ್ದಾರೆ. ಅತಿ ಹೆಚ್ಚು ತಂತ್ರಜ್ಞರು ಕೆಲಸ ಮಾಡಿದ ಭಾರತೀಯ ಸಿನಿಮಾ ಎಂಬ ಖ್ಯಾತಿಗೆ ಈ ಸಿನಿಮಾ ಪಾತ್ರವಾಗುತ್ತಿದೆ.

ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ, ಈ ಒಂದು ಸಿನಿಮಾಕ್ಕಾಗಿ ವಿಶ್ವದಾದ್ಯಂತ ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು ತಂತ್ರಜ್ಞರನ್ನು ಬಳಸಿಕೊಳ್ಳಲಾಗುತ್ತಿದೆ. ಈ ಮೂಲಕ ಭಾರತೀಯ ಚಲನಚಿತ್ರ ಇತಿಹಾಸದಲ್ಲೇ ಅತ್ಯಂತ ದೊಡ್ಡ ತಾಂತ್ರಿಕ ತಂಡವನ್ನು ಹೊಂದಿದ ಮೊದಲ ಸಿನಿಮಾ ಇದಾಗಿದೆ. ಯಶ್ ಅವರು ಈ ಸಿನಿಮಾದಲ್ಲಿ ನಟಿಸುವುದು ಮಾತ್ರವಲ್ಲದೇ ನಿರ್ಮಾಣದಲ್ಲೂ ಪಾಲುದಾರಿಕೆ ಹೊಂದಿದ್ದಾರೆ.

‘ಪ್ರೈಮ್ ಫೋಕಸ್ ಸ್ಟುಡಿಯೋಸ್’, ‘ಡಿಎನ್‌ಇಜಿ’ ಮತ್ತು ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್’ ಸಂಸ್ಥೆಗಳು ಜಂಟಿಯಾಗಿ ‘ರಾಮಾಯಣ’ ಸಿನಿಮಾವನ್ನು ನಿರ್ಮಿಸುತ್ತಿವೆ. ಭಾರತದ ಸಾಂಪ್ರದಾಯಿಕ ಕಥಾ ಶೈಲಿಗೆ ಜಾಗತಿಕ ಮಟ್ಟದ ಅದ್ಭುತ ತಂತ್ರಜ್ಞಾನದ ಸ್ಪರ್ಶ ನೀಡಿ, ಈ ಚಿತ್ರವನ್ನು ಎರಡು ಭಾಗಗಳ ದೃಶ್ಯ ವೈಭವವಾಗಿ ಬೆಳ್ಳಿತೆರೆಗೆ ತರಲು ಸಿದ್ಧತೆ ನಡೆಸಲಾಗುತ್ತಿದೆ.

ಈ ಬೃಹತ್ ತಂಡದಲ್ಲಿ ವಿಶ್ವದ ಅತ್ಯುತ್ತಮ ಪ್ರೊಡಕ್ಷನ್ ಡಿಸೈನರ್‌ಗಳು, ವಿಷುವಲ್ ಎಫೆಕ್ಟ್ಸ್ (VFX) ಪರಿಣಿತರು, ಸಾಹಸ ನಿರ್ದೇಶಕರು, ವಸ್ತ್ರ ವಿನ್ಯಾಸಕರು ಸೇರಿದಂತೆ ಹಲವು ಪ್ರಮುಖ ತಾಂತ್ರಿಕ ವಿಭಾಗಗಳ ಜಾಗತಿಕ ತಜ್ಞರು ಹಗಲಿರುಳು ಶ್ರಮಿಸುತ್ತಿದ್ದಾರೆ. ರಾಮಾಯಣದ ಭವ್ಯ ಜಗತ್ತನ್ನು ಮರುಸೃಷ್ಟಿಸಲು ಬೃಹತ್ ಸೆಟ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಇದು ಕೇವಲ ಒಂದು ಸಾಧಾರಣ ಚಿತ್ರವಾಗಿರದೆ ಚಿತ್ರಮಂದಿರಗಳಲ್ಲಿ ಒಂದು ಮೈಲಿಗಲ್ಲು ಎನಿಸುವಂತಹ ಅನುಭವ ನೀಡಲಿದೆ ಎಂದು ಚಿತ್ರತಂಡ ಹೇಳಿದೆ.

ಇದನ್ನೂ ಓದಿ: ‘ರಾಮಾಯಣ’ ಸಿನಿಮಾ ಅವಧಿ 6 ಗಂಟೆ; ಚಿತ್ರತಂಡದ ಎದುರಿಗೆ ಇದೆ ದೊಡ್ಡ ಸವಾಲು

ಈ ಚಿತ್ರದ ಮತ್ತೊಂದು ದೊಡ್ಡ ವಿಶೇಷತೆಯೆಂದರೆ, ಜಾಗತಿಕವಾಗಿ ಅತ್ಯಂತ ಪ್ರಸಿದ್ಧ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ದೃಶ್ಯ ವೈಭವದ ಸಂಸ್ಥೆಯಾದ ‘DNEG’ ಜೊತೆಗಿನ ಸಹಭಾಗಿತ್ವ. ಈ ಹಿಂದೆ ಹಲವು ಅಂತಾರಾಷ್ಟ್ರೀಯ ಬ್ಲಾಕ್‌ಬಸ್ಟರ್ ಸಿನಿಮಾಗಳಿಗೆ ಕೆಲಸ ಮಾಡಿರುವ ಈ ಸಂಸ್ಥೆಯು, ರಾಮಾಯಣದ ಕಥೆಯನ್ನು ಇಂದಿನ ಆಧುನಿಕ ಪ್ರೇಕ್ಷಕರಿಗೆ ಕಣ್ಣಿಗೆ ಕಟ್ಟುವಂತೆ ಅದ್ಭುತ ವಿಷುವಲ್ ಎಫೆಕ್ಟ್ಸ್ ಮೂಲಕ ಪ್ರಸ್ತುತಪಡಿಸಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us