AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’ ಸಿನಿಮಾ ಅವಧಿ 6 ಗಂಟೆ; ಚಿತ್ರತಂಡದ ಎದುರಿಗೆ ಇದೆ ದೊಡ್ಡ ಸವಾಲು

ಟೀಸರ್ ಬಿಡುಗಡೆ ನಂತರ ‘ರಾಮಾಯಣ’ ಸಿನಿಮಾ ಬಗ್ಗೆ ಪ್ರೇಕ್ಷಕರಿಂದ ಬಗೆಬಗೆಯ ಅಭಿಪ್ರಾಯ ಕೇಳಿಬರಲು ಶುರುವಾಗಿದೆ. ಈಗ ಈ ಸಿನಿಮಾದ ಅವಧಿ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ಎರಡು ಭಾಗಗಳಲ್ಲಿ ಬರಲಿರುವ ಈ ಚಿತ್ರದ ಅವಧಿ ಸುಮಾರು 6 ಗಂಟೆಗಳು ಎನ್ನಲಾಗಿದೆ. ಆ ಕುರಿತು ಇಲ್ಲಿದೆ ವಿವರ..

‘ರಾಮಾಯಣ’ ಸಿನಿಮಾ ಅವಧಿ 6 ಗಂಟೆ; ಚಿತ್ರತಂಡದ ಎದುರಿಗೆ ಇದೆ ದೊಡ್ಡ ಸವಾಲು
Ramayana
ಮದನ್​ ಕುಮಾರ್​
|

Updated on: Apr 05, 2026 | 12:08 PM

Share

ಸಿನಿಮಾದ ಅವಧಿ ಎಷ್ಟೇ ದೀರ್ಘವಾಗಿದ್ದರೂ, ಕಥೆ ಪ್ರೇಕ್ಷಕರನ್ನು ಹಿಡಿದಿಡುವಂತಿದ್ದರೆ ಅದು ಯಶಸ್ವಿಯಾಗುತ್ತದೆ ಎಂಬುದನ್ನು ‘ಧುರಂಧರ್’ ಸಿನಿಮಾ ಸಾಬೀತುಪಡಿಸಿದೆ. ಈ ಚಿತ್ರದ ಎರಡು ಭಾಗಗಳ ಒಟ್ಟು ಅವಧಿ 7 ಗಂಟೆಗಳಿಗೂ ಹೆಚ್ಚು. ಆದರೂ ರೋಚಕ ನಿರೂಪಣೆಯಿಂದಾಗಿ ಪ್ರೇಕ್ಷಕರು ಈ ಸಿನಿಮಾವನ್ನು ಸಂಭ್ರಮಿಸಿದರು. ಇದೀಗ ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ (Ramayana) ಕೂಡ ಇದೇ ದಾರಿಯಲ್ಲಿ ಸಾಗಲು ಸಿದ್ಧವಾಗುತ್ತಿದೆ. ಎರಡು ಭಾಗಗಳಲ್ಲಿ ಬರುತ್ತಿರುವ ಈ ಸಿನಿಮಾದ ಅವಧಿ 6 ಗಂಟೆ ಇರಲಿದೆ.

ನಿರ್ದೇಶಕ ನಿತೇಶ್ ತಿವಾರಿ ಅವರ ಈ ಮಹತ್ವಾಕಾಂಕ್ಷೆಯ ‘ರಾಮಾಯಣ’ ಸಿನಿಮಾ ಒಟ್ಟು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಈ ಎರಡು ಭಾಗಗಳ ಒಟ್ಟು ಅವಧಿ ಸುಮಾರು 6 ಗಂಟೆಗಳಿರಲಿದೆ. ಅಂದರೆ ಪ್ರತಿ ಭಾಗವು ಸರಿಸುಮಾರು 3 ಗಂಟೆಗಳ ಕಾಲ ಪ್ರೇಕ್ಷಕರನ್ನು ಕುರ್ಚಿಯ ತುದಿಯಲ್ಲಿ ಕೂರಿಸಬೇಕಿದೆ. ಇದು ‘ಧುರಂಧರ್’ ಚಿತ್ರಕ್ಕಿಂತಲೂ ಕಡಿಮೆ ಅವಧಿ ಆಗಿದ್ದರೂ ಕೂಡ ಚಿತ್ರತಂಡಕ್ಕೆ ಸವಾಲಾಗಲಿದೆ.

‘ಧುರಂಧರ್’ ಕಥೆ ಏನು ಎಂಬುದು ಪ್ರೇಕ್ಷಕರಿಗೆ ತಿಳಿದಿರಲಿಲ್ಲ. ಹಾಗಾಗಿ ಜನರು ಅಷ್ಟು ದೀರ್ಘ ಅವಧಿಯ ಸಿನಿಮಾವನ್ನು ಗಮನವಿಟ್ಟು ನೋಡಿದರು. ಆದರೆ ‘ರಾಮಾಯಣ’ ಚಿತ್ರದ ವಿಚಾರದಲ್ಲಿ ಹಾಗೆ ಆಗುವುದು ಕಷ್ಟ. ಯಾಕೆಂದರೆ, ರಾಮಾಯಣದ ಕಥೆ ಏನು ಎಂಬುದು ಎಲ್ಲರಿಗೂ ತಿಳಿದಿದೆ. ಈಗಾಗಲೇ ಎಲ್ಲರಿಗೂ ಗೊತ್ತಿರುವ ಕಥೆಯನ್ನು, ಮತ್ತೆ ಆಸಕ್ತಿಕರವಾಗಿ ಸುದೀರ್ಘವಾಗಿ ನಿರೂಪಿಸುವುದು ನಿರ್ದೇಶಕರಿಗೆ ಇರುವ ದೊಡ್ಡ ಸವಾಲು.

‘ರಾಮಾಯಣ’ ಸಿನಿಮಾ ಟೀಸರ್:

ಇತ್ತೀಚಿನ ವರ್ಷಗಳಲ್ಲಿ ರಾಮಾಯಣವನ್ನು ತೆರೆಯ ಮೇಲೆ ತರುವ ಪ್ರಯತ್ನಗಳು ಸಂಪೂರ್ಣ ಯಶಸ್ವಿಯಾಗಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಪ್ರಭಾಸ್ ಅಭಿನಯದ ‘ಆದಿಪುರುಷ್’. ಕಳಪೆ ವಿಎಫ್‌ಎಕ್ಸ್ ಮತ್ತು ನೀರಸ ನಿರೂಪಣೆಯಿಂದಾಗಿ ಆ ಸಿನಿಮಾ ಪ್ರೇಕ್ಷಕರ ಅಸಮಾಧಾನಕ್ಕೆ ಗುರಿಯಾಗಿತ್ತು. ಹಾಗಾಗಿ, ನಿತೇಶ್ ತಿವಾರಿ ಅವರು ದೃಶ್ಯ ವೈಭವದ ಜೊತೆಗೆ ಭಾವನಾತ್ಮಕ ಕಥೆಗೂ ಅಷ್ಟೇ ಪ್ರಾಮುಖ್ಯತೆ ನೀಡಬೇಕಿದೆ.

ಇದನ್ನೂ ಓದಿ: ‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ದ್ವಿಪಾತ್ರ: ಶ್ರೀರಾಮನ ಜೊತೆಗೆ ಪರಶುರಾಮನ ದರ್ಶನ

ಸಿನಿಮಾವನ್ನು ಎರಡು ಭಾಗಗಳಲ್ಲಿ ಮಾಡುವುದು ಕೂಡ ದೊಡ್ಡ ಚಾಲೆಂಜ್. ಮೊದಲ ಭಾಗ ಮತ್ತು ಎರಡನೇ ಭಾಗದ ಬಿಡುಗಡೆಯ ನಡುವೆ ದೀರ್ಘ ಕಾಲದ ಗ್ಯಾಪ್ ಇರುತ್ತದೆ. ಮೊದಲ ಭಾಗವು ಎಷ್ಟು ರೋಚಕವಾಗಿ ಕೊನೆಗೊಳ್ಳಬೇಕು ಎಂದರೆ, ಪ್ರೇಕ್ಷಕರು ಎರಡನೇ ಭಾಗಕ್ಕಾಗಿ ಕಾತರದಿಂದ ಕಾಯುವಂತಾಗಬೇಕು. ಒಂದು ವೇಳೆ ಮೊದಲ ಭಾಗ ನಿರೀಕ್ಷಿತ ಮಟ್ಟ ತಲುಪದಿದ್ದರೆ, ಅದು ಎರಡನೇ ಭಾಗದ ಮೇಲೆ ನೇರ ಪರಿಣಾಮ ಬೀರುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us