‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ದ್ವಿಪಾತ್ರ: ಶ್ರೀರಾಮನ ಜೊತೆಗೆ ಪರಶುರಾಮನ ದರ್ಶನ
ನಟ ರಣಬೀರ್ ಕಪೂರ್ ಅಭಿಮಾನಿಗಳು ‘ರಾಮಾಯಣ’ ಸಿನಿಮಾದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರು ದ್ವಿಪಾತ್ರ ಮಾಡಿದ್ದಾರೆ ಎಂಬುದು ಖಚಿತವಾಗಿದೆ. ರಾಮನಾಗಿ ಮತ್ತು ಪರಶುರಾಮನಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾಮಾಯಣ ಸಿನಿಮಾ ರಿಲೀಸ್ ಆಗಲಿದೆ.

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ (Ramayana) ಚಿತ್ರದ ಬಗ್ಗೆ ದಿನಕ್ಕೊಂದು ಕುತೂಹಲಕಾರಿ ವಿಚಾರಗಳು ಹೊರಬರುತ್ತಿವೆ. ಇತ್ತೀಚೆಗಷ್ಟೇ ಅಮೆರಿಕದಲ್ಲಿ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಭಾರಿ ಸಂಚಲನ ಮೂಡಿಸಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ರಣಬೀರ್ ಕಪೂರ್ (Ranbir Kapoor), ಈ ಸಿನಿಮಾದಲ್ಲಿ ತಾವು ಕೇವಲ ಶ್ರೀರಾಮನ ಪಾತ್ರ ಮಾತ್ರವಲ್ಲದೇ ಪರಶುರಾಮನ ಪಾತ್ರವನ್ನೂ ನಿರ್ವಹಿಸುತ್ತಿರುವುದಾಗಿ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಅವರು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಶ್ರೀರಾಮ ಮತ್ತು ಪರಶುರಾಮ ಇಬ್ಬರೂ ಭಗವಾನ್ ವಿಷ್ಣುವಿನ ಅವತಾರಗಳು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಇದೀಗ ರಣಬೀರ್ ಈ ಇಬ್ಬರೂ ದೈವಿಕ ಪುರುಷರ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಈ ಕುರಿತು ಮಾತನಾಡಿದ ರಣಬೀರ್, ‘ಭಗವಾನ್ ವಿಷ್ಣುವಿನ ಅವತಾರಗಳಲ್ಲಿ ಶ್ರೀರಾಮನಿಗಿಂತ ಮೊದಲು ಪರಶುರಾಮರು ಭೂಮಿಗೆ ಬಂದಿದ್ದರು. ಒಬ್ಬ ನಟನಾಗಿ ಈ ಇಬ್ಬರೂ ಮಹಾನ್ ವ್ಯಕ್ತಿಗಳ ಪಾತ್ರವನ್ನು ನಿರ್ವಹಿಸಲು ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ ಮತ್ತು ಇದು ಸೃಜನಾತ್ಮಕವಾಗಿ ನನಗೆ ತುಂಬಾನೇ ತೃಪ್ತಿ ನೀಡಿದೆ’ ಎಂದು ಹೇಳಿದ್ದಾರೆ.
ಕೇವಲ ದೈಹಿಕ ಬದಲಾವಣೆಯಷ್ಟೇ ಅಲ್ಲದೇ, ಪಾತ್ರದ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಆಳವನ್ನು ಅರ್ಥಮಾಡಿಕೊಳ್ಳಲು ರಣಬೀರ್ ಸಾಕಷ್ಟು ಶ್ರಮವಹಿಸಿದ್ದಾರೆ. ‘ಪಾತ್ರದ ಬಾಡಿ ಲಾಂಗ್ವೇಜ್‌ಗಿಂತ ಹೆಚ್ಚಾಗಿ, ಅವರ ಉದ್ದೇಶಗಳು ಮತ್ತು ಆಧ್ಯಾತ್ಮಿಕ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಈ ಸಿನಿಮಾದ ಚಿತ್ರೀಕರಣ ಆರಂಭವಾಗುವ ಒಂದು ವರ್ಷದ ಮೊದಲೇ ನಾನು ಈ ಬಗ್ಗೆ ಅಧ್ಯಯನ ನಡೆಸಿದ್ದೇನೆ. ಅವರಿಬ್ಬರೂ ಏನನ್ನು ಪ್ರತಿನಿಧಿಸುತ್ತಾರೆ ಮತ್ತು ಅವರ ಜೀವನದ ಉದ್ದೇಶಗಳೇನು ಎಂಬುದನ್ನು ಅರಿಯಲು ಪ್ರಯತ್ನಿಸಿದ್ದೇನೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
Ranbir Officially Confirms He is Playing Bhagwan Parshuram!#Ramayana pic.twitter.com/n2WxVroeP0
— RK🐰 (@rksbunny) April 3, 2026
ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಈ ಚಿತ್ರವನ್ನು ಅತ್ಯಂತ ಅದ್ದೂರಿಯಾಗಿ ಮತ್ತು ಅಂತಾರಾಷ್ಟ್ರೀಯ ಮಟ್ಟದ ತಂತ್ರಜ್ಞಾನ ಬಳಸಿ ನಿರ್ಮಿಸುತ್ತಿದ್ದಾರೆ. ಇದು ಕೇವಲ ಭಾರತಕ್ಕೆ ಸೀಮಿತವಾಗದೇ ಜಾಗತಿಕ ಪ್ರೇಕ್ಷಕರನ್ನು ತಲುಪುವ ಗುರಿ ಹೊಂದಿದೆ. ಪರಶುರಾಮನ ಪಾತ್ರವು ಚಿತ್ರದಲ್ಲಿ ಅತಿಥಿ ಪಾತ್ರದಂತೆ ಕಾಣಿಸಿಕೊಂಡರೂ, ಕಥೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ದಾಖಲೆ ಬರೆಯುತ್ತಾ ‘ರಾಮಾಯಣ’? ಬರೋಬ್ಬರಿ 1000 ಕೋಟಿ ರೂಪಾಯಿಗೆ ಒಟಿಟಿ ಬೇಡಿಕೆ
ಒಟ್ಟಿನಲ್ಲಿ, ಶ್ರೀರಾಮನ ಸೌಮ್ಯತೆ ಮತ್ತು ಪರಶುರಾಮನ ಉಗ್ರತೆಯನ್ನು ರಣಬೀರ್ ಕಪೂರ್ ಬೆಳ್ಳಿತೆರೆಯ ಮೇಲೆ ಹೇಗೆ ಪ್ರಸ್ತುತಪಡಿಸಲಿದ್ದಾರೆ ಎಂಬ ಕುತೂಹಲ ಈಗ ಗಗನಕ್ಕೇರಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ‘ರಾಮಾಯಣ: ಪಾರ್ಟ್ 1’ ಸಿನಿಮಾ ಬಿಡುಗಡೆ ಆಗಲಿದೆ. ಯಶ್ ಅವರು ರಾವಣನ ಪಾತ್ರ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
