Breaking ಮಾನವ ಕಳ್ಳಸಾಗಾಣಿಕೆ ಪ್ರಕರಣ: ಪಂಜಾಬಿ ಗಾಯಕ ದಲೇರ್ ಮೆಹಂದಿಗೆ 2 ವರ್ಷ ಜೈಲು ಶಿಕ್ಷೆ
Daler Mehendi 2003ರ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ದಲೇರ್ ಮೆಹಂದಿಗೆ 2 ವರ್ಷಗಳ ಕಾಲ ಜೈಲು ಶಿಕ್ಷೆ

ಪಂಜಾಬಿ ಗಾಯಕ ದಲೇರ್ ಮೆಹಂದಿಗೆ (Daler Mehendi) ಪಟಿಯಾಲ ನ್ಯಾಯಾಲಯ (Patiala court) ಗುರುವಾರ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಮಾನವ ಕಳ್ಳಸಾಗಾಣಿಕೆ ಪ್ರಕರಣದಲ್ಲಿ (human trafficking case) ದಲೇರ್ ಮೆಹಂದಿ ದೋಷಿ ಎಂದು ಸಾಬೀತಾಗಿದ್ದು, ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. 2003ರಲ್ಲಿ ದಲೇರ್ ಮೆಹಂದಿ ಮತ್ತು ಆತನ ಸಹೋದರ ಶಂಷೇರ್ ಸಿಂಗ್ ವಿರುದ್ಧ ಒಟ್ಟು 31 ಪ್ರಕರಣಗಳು ದಾಖಲಾಗಿತ್ತು.ನ್ಯಾಯಾಲಯದಲ್ಲಿ ಹಾಜರಾಗಿದ್ದ ಮೆಹಂದಿಯನ್ನು ಅಲ್ಲಿಂದಲೇ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ದಲೇರ್ ಮೆಹಂದಿ ಮತ್ತು ಆತನ ಸಹೋದರ ಶಂಷೇರ್ ಸಿಂಗ್ ತಮ್ಮ ತಂಡದ ಜನರು ಎಂದು ಹೇಳಿ ಅಕ್ರಮವಾಗಿ ಜನರನ್ನು ವಿದೇಶಕ್ಕೆ ಕರೆದೊಯ್ಯುತ್ತಿದ್ದರು. ಇದಕ್ಕಾಗಿ ಅವರು ಭಾರೀ ಹಣವನ್ನೂ ಪಡೆಯುತ್ತಿದ್ದರು. 2018ರಲ್ಲಿ ಜ್ಯುಡಿಷಿಯಲ್ ಮೆಜಿಸ್ಟ್ರೇಟ್ ಫಸ್ಟ್ ಕ್ಲಾಸ್ ಕೋರ್ಟ್ ಇವರಿಬ್ಬರನ್ನು ದೋಷಿ ಎಂದು ಹೇಳಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದಾದ ನಂತರ ಜಾಮೀನು ಪಡೆದು ಹೊರಬಂದ ಇವರು ಸೆಷನ್ಸ್ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಗುರುವಾರ ಅಡಿಷನಲ್ ಸೆಷನ್ಸ್ ನ್ಯಾಯಮೂರ್ತಿ ಎಚ್ಎಸ್ ಗ್ರೆವಾಲ್ ಜಾಮೀನು ಅರ್ಜಿಯನ್ನು ತಳ್ಳಿದ್ದು ಮೆಹಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
2003ರಲ್ಲಿ ಸರ್ದಾರ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಪ್ರಕಾರ ಮೆಹಂದಿ ಸಹೋದರರು 1998 ಮತ್ತು 1999ರಲ್ಲಿ ಎರಡು ತಂಡವನ್ನು ವಿದೇಶಕ್ಕೆ ಕರೆದುಕೊಂಡು ಹೋಗಿದ್ದು, ಅದರಲ್ಲಿ 10 ಮಂದಿಯನ್ನು ಅಮೆರಿಕದಲ್ಲಿ ಅಕ್ರಮವಾಗಿ ಬಿಟ್ಟು ಬಂದಿದ್ದಾರೆ.ಈ ಎಫ್ಐಆರ್ ದಾಖಲಾದ ನಂತರ ಇಬ್ಬರು ಸಹೋದರರ ಮೇಲೆ 35ಕ್ಕಿಂತಲೂ ಹೆಚ್ಚು ದೂರುಗಳು ದಾಖಲಾಗಿತ್ತು.
ಮೂರು ವರ್ಷಗಳ ನಂತರ ಸ್ಥಳೀಯ ಪೊಲೀಸರು ಸ್ಥಳೀಯ ನ್ಯಾಯಾಲಯದಲ್ಲಿ ದಲೇರ್ ಮೆಹಂದಿ ನಿರ್ದೋಷಿ ಎಂದು ಅರ್ಜಿ ಸಲ್ಲಿಸಿದ್ದರು. ಆದರೆ ದಲೇರ್ ವಿರುದ್ದ ಸಾಕಷ್ಟು ಸಾಕ್ಷ್ಯಗಳಿವೆ, ಅವರನ್ನು ಬಿಡುಗಡೆ ಮಾಡಲು ಆಗಲ್ಲ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಬೇಕು ಎಂದು ಆದೇಶಿಸಿತ್ತು.
Published On - 5:15 pm, Thu, 14 July 22