ಕಿರುತೆರೆಯ ಕ್ಯೂಟ್ ಕಪಲ್ ಎನಿಸಿಕೊಂಡಿರುವ ನಟ ಚಂದನ್ ಕುಮಾರ್ ಮತ್ತು ನಟಿ ಕವಿತಾ ಗೌಡ ಹಸೆಮಣೆ ಏರಲು ಸಜ್ಜಾಗುತ್ತಿದ್ದಾರೆ. ಶೀಘ್ರದಲ್ಲೇ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂಬುದು ಖಚಿತ ಆಗಿದೆ. ಹಾಗಂತ ಈ ಜೋಡಿಯ ಪ್ರೇಮ್ ಕಹಾನಿ ಶುರುವಾಗಿದ್ದು ನಿನ್ನೆ-ಮೊನ್ನೆ ಅಲ್ಲ. ಈ ಹಿಂದೆ ಅನೇಕ ಬಾರಿ ಈ ಜೋಡಿಯ ಬಗ್ಗೆ ಅನುಮಾನ ಮೂಡಿತ್ತು.
ಕಿರುತೆರೆ ಪ್ರೇಕ್ಷಕರ ವಲಯದಲ್ಲಿ ಸಖತ್ ಜನಪ್ರಿಯವಾಗಿದ್ದ ‘ಲಕ್ಷ್ಮೀ ಬಾರಮ್ಮ’ ಸೀರಿಯಲ್ನಲ್ಲಿ ಚಂದನ್ ಕುಮಾರ್ ಮತ್ತು ಕವಿತಾ ಜೋಡಿಯಾಗಿ ನಟಿಸಿದ್ದರು. ಆಗಿನಿಂದಲೇ ಅವರಿಬ್ಬರ ನಡುವೆ ಸ್ನೇಹ ಚಿಗುರಿತ್ತು. ನಂತರದ ದಿನಗಳಲ್ಲಿ ಅವರಿಬ್ಬರ ಆಪ್ತತೆ ಹೆಚ್ಚಾಯಿತು. ಆದರೆ ಎಂದೂ ಕೂಡ ಅವರು ತಮ್ಮ ಪ್ರೀತಿ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಹಾಗಿದ್ದರೂ ನೆಟ್ಟಿಗರಿಗೆ ಗುಮಾನಿ ಶುರುವಾಗಿತ್ತು.
ಕವಿತಾ ಮತ್ತು ಚಂದನ್ ಕುಮಾರ್ ನೇರವಾಗಿ ಏನನ್ನೂ ಹೇಳಿಕೊಳ್ಳುತ್ತಿರಲಿಲ್ಲ. ಹಾಗಿದ್ದರೂ ಕೂಡ ಅವರ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅನೇಕ ಸಾಕ್ಷಿಗಳು ಸಿಗಲು ಆರಂಭಿಸಿದವು. ಇಬ್ಬರೂ ಜೊತೆಯಾಗಿ ಸುತ್ತಾಡುತ್ತಿದ್ದರು. ಅದನ್ನು ಅವರು ಮುಚ್ಚಿಡುತ್ತಿರಲಿಲ್ಲ ಕೂಡ. ಆ ಕ್ಷಣದ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದರು. ‘ಒಳ್ಳೆಯ ಜೋಡಿ.. ಬೇಗ ಮದುವೆ ಆಗಿ’ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದರೂ ಸಹ, ಈ ಪ್ರೇಮಪಕ್ಷಿಗಳು ಪ್ರತಿಕ್ರಿಯೆ ನೀಡುತ್ತಿರಲಿಲ್ಲ.
ಕಳೆದ ವರ್ಷ ಲಾಕ್ಡೌನ್ ಸಮಯದಲ್ಲಿ ಕವಿತಾ ಗೌಡ ಜನ್ಮದಿನವನ್ನು (ಜು.26) ಸಿಂಪಲ್ ಆಗಿ ಅವರ ಮನೆಯಲ್ಲೇ ಆಚರಿಸಲಾಗಿತ್ತು. ಲಾಕ್ಡೌನ್ ನಿಯಮಗಳು ಇದ್ದಿದ್ದರಿಂದ ಕೆಲವೇ ಕೆಲವು ಆಪ್ತರು ಮಾತ್ರ ಅದರಲ್ಲಿ ಭಾಗಿ ಆಗಿದ್ದರು. ಈ ವೇಳೆ ಚಂದನ್ ಅವರು ಕವಿತಾಗೆ ಒಂದು ಸರ್ಪ್ರೈಸ್ ನೀಡಿದ್ದರು. ಬರ್ತ್ಡೇ ಆಚರಿಸುವ ವೇಳೆ ಕಿಂಚಿತ್ತೂ ಸುಳಿವು ನೀಡದೆ, ಮಧ್ಯರಾತ್ರಿ ಕವಿತಾ ಮನೆಗೆ ಚಂದನ್ ಎಂಟ್ರಿ ನೀಡಿದ್ದರು! ಅವರ ಪ್ರೀತಿಗೆ ಕರಗಿದ ಕವಿತಾ ಮುಖದಲ್ಲಿ ನಗು ಅರಳಿತ್ತು. ಆ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಲಾಕ್ಡೌನ್ ಸಡಿಲಿಕೆ ಆದನಂತರ ಸ್ನೇಹಿತರ ಜೊತೆಗೂಡಿ ಅನೇಕ ಪ್ರವಾಸಿ ಸ್ಥಳಗಳಿಗೆ ಕವಿತಾ-ಚಂದನ್ ಭೇಟಿ ನೀಡಿದ್ದರು. ಆ ಸಂದರ್ಭದ ಅನೇಕ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಎಲ್ಲ ಫೋಟೋದಲ್ಲಿಯೂ ಕವಿತಾ ಮತ್ತು ಚಂದನ್ ಆಪ್ತತೆಯನ್ನು ನೆಟ್ಟಿಗರು ಸುಲಭವಾಗಿ ಗುರುತಿಸಬಹುದಾಗಿತ್ತು. ಇತ್ತೀಚೆಗೆ ಚಂದನ್ ಅವರು ಫುಡ್ ಬ್ಯುಸಿನೆಸ್ ಆರಂಭಿಸಿದರು. ಆಗಲೂ ಸಹ ಕವಿತಾ ಅವರು ಚಂದನ್ ಜೊತೆ ನಿಂತು ಬೆಂಬಲ ನೀಡಿದರು. ಚಂದನ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕವಿತಾ ಅವರ ಹಲವಾರು ಫೋಟೋಗಳು ರಾರಾಜಿಸುತ್ತಿವೆ.
ಇದನ್ನೂ ಓದಿ: ಏಪ್ರಿಲ್ 1ಕ್ಕೆ ಹಸೆಮಣೆ ಏರಲಿದ್ದಾರೆ ಚಂದನ್-ಕವಿತಾ ಲವ್ ಬರ್ಡ್ಸ್! ಕಡೆಗೂ ಅಧಿಕೃತವಾಯಿತು ಇಬ್ಬರ ಪ್ರೀತಿ
Published On - 1:20 pm, Wed, 31 March 21