ತೆಲುಗು ಚಿತ್ರರಂಗದ ಮೇಲೆ ಮತ್ತೆ ಬೇಸರ ಹೊರಹಾಕಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ
ತೆಲುಗು ಚಿತ್ರರಂಗದ ಮೇಲೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ಈ ಹಿಂದೆಯೂ ಸಹ ಸಿನಿಮಾಗಳಿಗೆ ತೆರಿಗೆ ವಿನಾಯಿತಿ, ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ಕೋರುವ ವಿಚಾರವಾಗಿಯೂ ರೇವಂತ್ ರೆಡ್ಡಿ ಅಸಮಾಧಾನ ಹೊರಹಾಕಿದ್ದರು.
ಬಾಲಿವುಡ್ ಬಳಿಕ ಬಜೆಟ್ ಗಾತ್ರದಲ್ಲಿ ಅತಿ ದೊಡ್ಡ ಚಿತ್ರವೆಂದರೆ ಅದು ತೆಲುಗು ಚಿತ್ರರಂಗ. ಬಾಲಿವುಡ್ಗಿಂತಲೂ ಹೆಚ್ಚಿನ ಹಣವನ್ನು ಟಾಲಿವುಡ್ ಗುಡ್ಡೆ ಹಾಕುತ್ತಿದೆ. ಆದರೆ ಎರಡು ತೆಲುಗು ರಾಜ್ಯಗಳಾದಾಗಿನಿಂದ ತೆಲುಗು ಚಿತ್ರರಂಗ ಕೆಲವು ಪೀಕಲಾಟಗಳಿಗೆ ಸಹ ಸಿಲುಕಿಕೊಂಡಿದೆ. ಎರಡು ರಾಜ್ಯಗಳ ಸರ್ಕಾರಗಳನ್ನು ಸರಿದೂಗಿಸಿಕೊಂಡು ಹೋಗುವ ‘ಸಮಸ್ಯೆ’ ತೆಲುಗು ಚಿತ್ರರಂಗಕ್ಕೆ ಎದುರಾಗಿದೆ. ಇದೀಗ ತೆಲುಗು ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿಯಾದ ‘ನಂದಿ’ ಅವಾರ್ಡ್ಸ್ ಕುರಿತು ಸಮಸ್ಯೆ ಭುಗಿಲೆದ್ದಿದೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಬಹಿರಂಗವಾಗಿಯೇ ತೆಲುಗು ಚಿತ್ರರಂಗದ ಪ್ರಮುಖರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಂದಿ ಅವಾರ್ಡ್ಸ್ ತೆಲುಗಿನ ಅತ್ಯಂತ ಪ್ರಮುಖ ಸಿನಿಮಾ ಪ್ರಶಸ್ತಿ. ಹಲವು ವರ್ಷಗಳಿಂದಲೂ ಈ ಪ್ರಶಸ್ತಿಯನ್ನು ಕೊಡಲಾಗುತ್ತಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ನಂದಿ ಅವಾರ್ಡ್ಸ್ಗೆ ಬ್ರೇಕ್ ಬಿದ್ದಿದೆ. ಇದೀಗ ಆಂಧ್ರದಲ್ಲಿ ಸರ್ಕಾರ ಬದಲಾದ ಬೆನ್ನಲ್ಲೆ ಮತ್ತೆ ನಂದಿ ಅವಾರ್ಡ್ಸ್ ಪ್ರಶಸ್ತಿಯ ಬಗ್ಗೆ ಚರ್ಚೆ ಎದ್ದಿದೆ. ಆದರೆ ಇದೇ ಚರ್ಚೆ ಈಗ ತೆಲುಗು ಚಿತ್ರರಂಗವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಚಿತ್ರರಂಗದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲು ಕಾರಣವಾಗಿದೆ.
ನಂದಿ ಅವಾರ್ಡ್ಸ್ ಅನ್ನು ಗದ್ದರ್ ಅವಾರ್ಡ್ಸ್ ಎಂದು ಮರುನಾಮಕರಣ ಮಾಡಿ ಪ್ರಶಸ್ತಿ ವಿತರಿಸುವ ಪ್ರಸ್ತಾವನೆಯನ್ನು ಸಿಎಂ ರೇವಂತ್ ರೆಡ್ಡಿ ಸಲ್ಲಿಸಿದ್ದರು. ಗದ್ದರ್ ತೆಲುಗು ರಾಜ್ಯಗಳ ದಲಿತ ಹೋರಾಟಗಾರ, ದಲಿತ ಜನಪದ ರಾಯಭಾರಿ, ಸ್ವತಃ ಸಿನಿಮಾ ನಟರೂ ಆಗಿದ್ದಾರೆ. ಬಂಡಾಯ ಚಳವಳಿ ಕುರಿತ ಸಿನಿಮಾಗಳು, ಫ್ಯಾಸಿಸಂ ವಿರುದ್ಧ ಹೋರಾಟಗಳನ್ನು ಕತಾವಸ್ತುಗಳನ್ನಾಗಿ ಇಟ್ಟುಕೊಂಡು ಸಿನಿಮಾ ಮಾಡಿದ್ದರು ಗದರ್. ಇತ್ತೀಚೆಗಷ್ಟೆ ಗದರ್ ನಿಧನ ಹೊಂದಿದ್ದು ಅವರ ಸ್ಮರಣಾರ್ಥ ನಂದಿ ಅವಾರ್ಡ್ಸ್ಗೆ ಗದರ್ ಅವಾರ್ಡ್ಸ್ ಎಂದು ಹೆಸರು ಬದಲಾಯಿಸಲು ಸಿಎಂ ರೇವಂತ್ ರೆಡ್ಡಿ ಮುಂದಾಗಿದ್ದರು.
ಇದನ್ನೂ ಓದಿ:ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಕ್ಷಮೆ ಕೋರಿದ ನಟ ಸಿದ್ಧಾರ್ಥ್, ಕಾರಣ?
ನಂದಿ ಅವಾರ್ಡ್ಸ್ ಅನ್ನು ಗದರ್ ಅವಾರ್ಡ್ಸ್ ಎಂದು ಬದಲಿಗೆ ಗದರ್ ಹೆಸರಿನಲ್ಲಿಯೇ ಸಿನಿಮಾ ಪ್ರಶಸ್ತಿಗಳನ್ನು ನೀಡುವ ಪ್ರಸ್ತಾವನೆಗೆ ತೆಲುಗು ಚಿತ್ರರಂಗದಿಂದ ಸಲಹೆಗಳನ್ನು ಸಹ ಕೇಳಿದ್ದರು. ಆದರೆ ಇತ್ತೀಚೆಗೆ ರೇವಂತ್ ರೆಡ್ಡಿ ಹೇಳಿರುವಂತೆ ತೆಲುಗು ಚಿತ್ರರಂಗದ ಯಾರೂ ಸಹ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ. ಇದು ತಮಗೆ ಬೇಸರ ಮೂಡಿಸಿದೆ ಎಂದು ಸಹ ರೇವಂತ್ ರೆಡ್ಡಿ ಹೇಳಿದ್ದಾರೆ.
ರೇವಂತ್ ರೆಡ್ಡಿ ಹೇಳಿಕೆಯ ನಂತರ ಮಾತನಾಡಿರುವ ಮೆಗಾಸ್ಟಾರ್ ಚಿರಂಜೀವಿ, ರೇವಂತ್ ರೆಡ್ಡಿಯವರ ಹೇಳಿಕೆಯನ್ನು ಸ್ವಾಗತಿದ್ದು, ಗದರ್ ಅಂಥಹಾ ಮಹನೀಯರ ಹೆಸರಿನಲ್ಲಿ ಸಿನಿಮಾ ಮಂದಿಗೆ ಪ್ರಶಸ್ತಿ ನೀಡುವುದು ಗೌರವದಾಯಕ, ಇದಕ್ಕೆ ನನ್ನ ಬೆಂಬಲ ಇದೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ