ಹೊಂಬಾಳೆಯ ಮೊದಲ ತಮಿಳು ಸಿನಿಮಾ ‘ರಘು ತಾತ’ ಟ್ರೈಲರ್ ಬಿಡುಗಡೆ
ಕನ್ನಡ, ತೆಲುಗು, ಮಲಯಾಳಂಗಳಲ್ಲಿ ಸಿನಿಮಾ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲಮ್ಸ್ ತಮಿಳಿನಲ್ಲಿ ನಿರ್ಮಾಣ ಮಾಡಿರುವ ಹೊಸ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಜೊತೆಗೆ ಸಿನಿಮಾ ಬಿಡುಗಡೆ ದಿನಾಂಕ ಸಹ ಘೋಷಣೆ ಮಾಡಲಾಗಿದೆ.
ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಈಗಾಗಲೇ ತನ್ನ ಬಾಹುಗಳನ್ನು ನೆರೆ ರಾಜ್ಯಗಳ ಚಿತ್ರರಂಗಗಳಿಗೂ ಪಸರಿಸಿ ಆಗಿದೆ. ತೆಲುಗು, ಮಲಯಾಳಂನಲ್ಲಿಯೂ ಹೊಂಬಾಳೆ ಈಗಾಗಲೇ ಸಿನಿಮಾ ನಿರ್ಮಾಣ ಮಾಡಿದೆ. ತಮಿಳಿನಲ್ಲಿ ಸಹ ಹೊಂಬಾಳೆ ಸಿನಿಮಾ ಒಂದನ್ನು ನಿರ್ಮಾಣ ಮಾಡಿದ್ದು, ಸಿನಿಮಾದ ಟ್ರೈಲರ್ ಇಂದು (ಜುಲೈ 31) ಬಿಡುಗಡೆ ಆಗಿದ್ದು ಸಿನಿಮಾದ ಬಿಡುಗಡೆ ದಿನಾಂಕವನ್ನು ಸಹ ಘೋಷಣೆ ಮಾಡಲಾಗಿದೆ. ಸಿನಿಮಾದ ಹೆಸರು ‘ರಘುತಾತ’ ಈ ಸಿನಿಮಾ ಹಿಂದಿ ಹೇರಿಕೆ ವಿರೋಧದ ಚಳವಳಿಯ ಕುರಿತಾದ ಸಿನಿಮಾ ಆಗಿದೆ.
‘ಕೆಜಿಎಫ್’, ‘ಸಲಾರ್’, ‘ಕಾಂತಾರ’ ಅಂಥಹಾ ಭಾರಿ ಬಜೆಟ್ನ ಆಕ್ಷನ್ ಥ್ರಿಲ್ಲರ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ‘ರಘುತಾತ’ ಅಂಥಹಾ ಮಹಿಳಾ ಪ್ರಧಾನ ಸಿನಿಮಾ ನಿರ್ಮಾಣ ಮಾಡಿದೆ. ಹೊಂಬಾಳೆ ಪಾಲಿಗೆ ಇದು ಮೊದಲ ಮಹಿಳಾ ಪ್ರಧಾನ ಸಿನಿಮಾ ಆಗಿದೆ. ಸಿನಿಮಾದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿದ್ದು, ಸಿನಿಮಾದ ಕತೆ ತಮಿಳುನಾಡಿನ ಸಣ್ಣ ಹಳ್ಳಿಯೊಂದರಲ್ಲಿ ನಡೆಯುತ್ತದೆ. ಸಿನಿಮಾದ ಕತೆ ಹಿಂದಿ ಹೇರಿಕೆ ಕುರಿತಾದದ್ದಾಗಿದೆ. ಇಂದಿರಾ ಗಾಂಧಿ ಕಾಲದಲ್ಲಿ ನಡೆವ ಕತೆಯನ್ನು ಸಿನಿಮಾದಲ್ಲಿ ಹೇಳಲಾಗಿದೆ.
ಇಂದು ಬಿಡುಗಡೆ ಆಗಿರುವ ಟ್ರೈಲರ್ನಲ್ಲಿ ತಿಳಿದು ಬರುತ್ತಿರುವಂತೆ ನಾಯಕಿ ಕೀರ್ತಿ ಸುರೇಶ್, ಶಾಲಾ ಶಿಕ್ಷಕಿಯಾಗಿದ್ದು, ಹಿಂದಿ ಹೇರಿಕೆ ವಿರುದ್ಧ ಪ್ರತಿಭಟಿಸುವ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಟ್ರೈಲರ್ ನೋಡಿದರೆ ಅಲ್ಲಲ್ಲಿ ಕನ್ನಡದ ‘ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕಾಸರಗೋಡು’ ನೆನಪಿಗೆ ಬರುತ್ತದೆ. ಕೀರ್ತಿ ಸುರೇಶ್, ಡಿ ಗ್ಲಾಮರಸ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಲೊಕೇಶನ್ ಹಾಗೂ ಇತರೆ ಪಾತ್ರಗಳ ನಟನೆಯೂ ಟ್ರೈಲರ್ನಲ್ಲಿ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ:10 ವರ್ಷ ಪೂರೈಸಿದ ಹೊಂಬಾಳೆ, ಶುರುವಾಗಿದ್ದು ಯಾರಿಂದ?
‘ರಘುತಾತ’ ಸಿನಿಮಾವನ್ನು ಸುಮನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಸೀನ್ ರೊಲ್ಡಾನ್. ವಿಜಯ್ ಕಿರಗಂದೂರು ನಿರ್ಮಾಣ ಮಾಡಿರುವ ಈ ಸಿನಿಮಾ ಆಗಸ್ಟ್ 15 ರಂದು ಬಿಡುಗಡೆ ಆಗಲಿದೆ. ಅದೇ ದಿನ ಕೆಲವು ದೊಡ್ಡ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ವಿಶೇಷವಾಗಿ ತಮಿಳಿನಲ್ಲಿ ಚಿಯಾನ್ ವಿಕ್ರಂ ನಟಿಸಿ, ಪಾ ರಂಜಿತ್ ನಿರ್ದೇಶನ ಮಾಡಿರುವ ‘ತಂಗಲಾನ್’ ಸಿನಿಮಾ ಬಿಡುಗಡೆ ಆಗುತ್ತಿದೆ. ತೆಲುಗಿನಲ್ಲಿ ರಾಮ್ ಪೋತಿನೇನಿ ನಟಿಸಿ, ಪುರಿ ಜಗನ್ನಾಥ್ ನಿರ್ದೇಶಿಸಿರುವ ‘ಡಬಲ್ ಇಸ್ಮಾರ್ಟ್’, ರವಿತೇಜ ನಟಿಸಿರುವ ‘ಮಿಸ್ಟರ್ ಬಚ್ಚನ್’ ಸಿನಿಮಾಗಳು ತೆರೆಗೆ ಬರಲಿವೆ. ಇವುಗಳ ನಡುವೆ ಮಹಿಳಾ ಪ್ರಧಾನ ಸಿನಿಮಾ ‘ರಘು ತಾತ’ ನಿಲ್ಲಬಲ್ಲುದೇ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ