Coffee Nadu Chandu: ರಾಜಕೀಯಕ್ಕೆ ಸೇರಿ ಅಂತ ಬಿಟ್ಟಿ ಸಲಹೆ ಕೊಟ್ಟವರಿಗೆ ಖಡಕ್ ತಿರುಗೇಟು ನೀಡಿದ ಕಾಫಿ ನಾಡು ಚಂದು
Coffee Nadu Chandu Viral Video: ಸೋಶಿಯಲ್ ಮೀಡಿಯಾದಲ್ಲಿ ಚಂದು ಅವರಿಗೆ ಸಖತ್ ಜನಪ್ರಿಯತೆ ಸಿಕ್ಕಿದೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು ಫಾಲೋ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಕಾಫಿ ನಾಡು ಚಂದು (Coffee Nadu Chandu) ಜನಪ್ರಿಯತೆ ದಿನೇದಿನೇ ಹೆಚ್ಚುತ್ತಿದೆ. ಹಲವಾರು ಕಡೆಗಳಲ್ಲಿ ಅವರನ್ನು ಕರೆದು ಸನ್ಮಾನ ಮಾಡಲಾಗುತ್ತಿದೆ. ಅವರ ವಿಡಿಯೋಗಳಿಗೆ (Coffee Nadu Chandu Video) ಸಿಕ್ಕಾಪಟ್ಟೆ ಲೈಕ್ಸ್ ಸಿಗುತ್ತಿದೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರೀತಿಯ ಕಿರುತೆರೆ ಕಾರ್ಯಕ್ರಮಗಳ ವೇದಿಕೆಯಲ್ಲೂ ಕಾಫಿ ನಾಡು ಚಂದು ಮಿಂಚಿದ್ದಾರೆ. ಇಷ್ಟೆಲ್ಲ ಮಾಡಿರುವ ಅವರಿಗೆ ಕೆಲವರು ಬಿಟ್ಟಿ ಸಲಹೆ ನೀಡಿದ್ದು ಕೂಡ ಇದೆ. ‘ನೀವು ರಾಯಕೀಯಕ್ಕೆ (Politics) ಸೇರಬಹುದಲ್ಲ’ ಎಂದು ಒಂದಷ್ಟು ಮಂದಿ ಹೇಳಿದ್ದಾರಂತೆ. ಅಂಥವರಿಗೆ ಚಂದು ಖಡಕ್ ತಿರುಗೇಟು ನೀಡಿದ್ದಾರೆ. ಅದು ಕೂಡ ತಮ್ಮದೇ ಶೈಲಿಯಲ್ಲಿ. ಈ ಕುರಿತು ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
‘ನೀವು ರಾಜಕೀಯಕ್ಕೆ ನಿಂತುಕೊಳ್ಳಬಹುದಿತ್ತಲ್ಲ ಅಂತ ಯಾರೋ ಒಬ್ಬರು ಹೇಳಿದ್ರು. ನನಗೆ ಅದರಲ್ಲಿ ಇಂಟರೆಸ್ಟ್ ಇಲ್ಲ. ಯಾಕೆಂದರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಇದಾವೆ. ಓಹೋ ಚಂದು ಕಾಂಗ್ರೆಸ್ಗೆ ನಿಂತುಕೊಂಡು, ಬಿಜೆಪಿಗೆ ನಿಂತುಕೊಂಡ ಅಂತ ಜನರು ಹೇಳೋದು ಬೇಡ. ನನಗೆ ಈಗ ಇರುವ ಲೈಫ್ ಚೆನ್ನಾಗಿದೆ. ರಾಜಕೀಯದ ಬಗ್ಗೆ ಮಾತಾಡೋಕೆ ನಾನು ರಾಜಕಾರಣಿ ಅಲ್ಲ. ದೇವಸ್ಥಾನದ ಬಗ್ಗೆ ಮಾತಾಡೋಕೆ ಪೂಜಾರಿನೂ ಅಲ್ಲ. ಪಾಠ ಮಾಡೋಕೆ ನಾನು ಮೇಷ್ಟ್ರು ಅಲ್ಲ. ನಾನು ಪುನೀತಣ್ಣ, ಶಿವಣ್ಣ ಅವರ ಅಭಿಮಾನಿ’ ಎಂದು ಚಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.
ಚಿಕ್ಕಮಗಳೂರಿನಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುವವರು ಚಂದು. ತಮ್ಮ ಆತ್ಮೀಯರಿಗೆ ತಮ್ಮದೇ ಶೈಲಿಯಲ್ಲಿ ಬರ್ತ್ಡೇ ವಿಶ್ ಮಾಡುವ ಮೂಲಕ ಅವರು ಫೇಮಸ್ ಆದರು. ಅವರ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆದ ಬಳಿಕ ರಾಜ್ಯಾದ್ಯಂತ ಮನೆಮಾತಾದರು. ಅನೇಕ ಕಡೆಗಳಲ್ಲಿ ಅವರು ಸಂದರ್ಶನ ನೀಡಿದ್ದಾರೆ. ಒಂದಷ್ಟು ಜನಪರ ಕಾರ್ಯಗಳನ್ನು ಮಾಡುತ್ತಲೂ ಅವರು ಶೈನ್ ಆಗುತ್ತಿದ್ದಾರೆ.
View this post on Instagram
ಸೋಶಿಯಲ್ ಮೀಡಿಯಾದಲ್ಲಿ ಚಂದು ಅವರಿಗೆ ಸಖತ್ ಜನಪ್ರಿಯತೆ ಸಿಕ್ಕಿದೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು ಫಾಲೋ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಆರಂಭದಲ್ಲಿ ಕೆಲವೇ ಕೆಲವು ಫಾಲೋವರ್ಸ್ ಇದ್ದರು. ಈಗ ಅವರನ್ನು ಬರೋಬ್ಬರಿ 4 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ ಎಂಬುದು ವಿಶೇಷ.
ಶಿವರಾಜ್ಕುಮಾರ್ ಅವರನ್ನು ನೋಡಬೇಕು ಎಂಬುದು ಕಾಫಿ ನಾಡು ಚಂದು ಅವರ ಮಹಾನ್ ಆಸೆ ಆಗಿತ್ತು. ಜೀ ಕನ್ನಡದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋ ಮೂಲಕ ಅವರ ಆಸೆ ಇತ್ತೀಚೆಗೆ ಈಡೇರಿತು. ಆ ವಿಡಿಯೋಗಳು ಕೂಡ ಸಖತ್ ವೈರಲ್ ಆಗಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:53 pm, Sun, 4 September 22