ಜೂ ಎನ್​ಟಿಆರ್ ಅಭಿಮಾನಿಗಳ ಹುಚ್ಚಾಟ, ಬುದ್ಧಿ ಹೇಳಿ ಎಂದ ನೆಟ್ಟಿಗರು

Jr NTR Fans: ಜೂ ಎನ್​ಟಿಆರ್ ಅಭಿಮಾನಿಗಳ ಅತಿರೇಕದ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ನಿಮ್ಮ ಅಭಿಮಾನಿಗಳಿಗೆ ಬುದ್ಧಿಹೇಳಿ ಎಂದು ನೆಟ್ಟಿಗರು ಜೂ ಎನ್​ಟಿಆರ್​ ಅನ್ನು ಒತ್ತಾಯಿಸಿದ್ದಾರೆ.

ಜೂ ಎನ್​ಟಿಆರ್ ಅಭಿಮಾನಿಗಳ ಹುಚ್ಚಾಟ, ಬುದ್ಧಿ ಹೇಳಿ ಎಂದ ನೆಟ್ಟಿಗರು
ಜೂ ಎನ್​ಟಿಆರ್

Updated on: May 21, 2023 | 10:39 PM

ಉಳಿಕೆ ಚಿತ್ರರಂಗಗಳಿಗೆ (Movie Industry) ಹೋಲಿಸಿದರೆ ತೆಲುಗು ಚಿತ್ರರಂಗದಲ್ಲಿ (Tollywood) ಅಭಿಮಾನಿಗಳ ಅಬ್ಬರ ತುಸು ಹೆಚ್ಚು. ಅದನ್ನು ಅಭಿಮಾನ ಎನ್ನುವುದಕ್ಕಿಂತಲೂ ಹುಚ್ಚು ಅಭಿಮಾನ ಎನ್ನಬಹುದು. ಸ್ವತಃ ಅವರೂ ಸಹ ಅಭಿಮಾನವನ್ನು ‘ವೀರಾಭಿಮಾನ’ ಎಂದೇ ಕರೆಯುವುದು. ನೆಟ್ಟಿನ ನಟರಿಗಾಗಿ ಕಿಲೋಮೀಟರ್ ಗಟ್ಟಲೆ ಪಾದಯಾತ್ರೆ ಮಾಡುವುದು, ಇತರೆ ನಟರ ಅಭಿಮಾನಿಗಳೊಟ್ಟಿಗೆ ಕೈ-ಕೈ ಮಿಲಾಯಿಸುವುದು, ಕೊಲೆಗಳೂ ಆಗಿದ್ದಿದೆ. ಹುಚ್ಚಾಟ ಮೆರೆದ ಅಭಿಮಾನಿಗಳು ಜೈಲು ಸೇರಿದ್ದೂ ಇದೆ. ಹಾಗಿದ್ದರೂ ಅಭಿಮಾನಿಗಳು ತಮ್ಮ ದುರ್ವರ್ತನೆ, ಹುಚ್ಚಾಟ ನಿಲ್ಲಿಸಿಲ್ಲ. ಇದೀಗ ಜೂ ಎನ್​ಟಿಆರ್ ಅಭಿಮಾನಿಗಳು ಮಾಡಿರುವ ಕೃತ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದ್ದು ನಿಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಿ ಎಂದು ನೆಟ್ಟಿಗರು ಜೂ ಎನ್​ಟಿಆರ್ (Jr NTR) ಅನ್ನು ಒತ್ತಾಯಿಸಿದ್ದಾರೆ.

ಮೇ 20 ಜೂ ಎನ್​ಟಿಆರ್ ಹುಟ್ಟುಹಬ್ಬ. ಅದೇ ಸಂದರ್ಭದಲ್ಲಿ ಜೂ ಎನ್​ಟಿಆರ್​ರ ಮುಂದಿನ ಸಿನಿಮಾ ದೇವರ ಸಿನಿಮಾದ ಟೈಟಲ್ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಮಚಲಿಪಟ್ಟಣದಲ್ಲಿ ಜೂ ಎನ್​ಟಿಆರ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿರುವುದನ್ನು ಸಂಭ್ರಮಿಸಿದ್ದಾರೆ. ಕೇವಲ ಸಂಭ್ರಮಿಸಿದ್ದರೆ ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ ಆದರೆ ಇವರ ಸಂಭ್ರಮ ತುಸು ಎಲ್ಲೆ ಮೀರಿದೆ.

ದೇವರ ಸಿನಿಮಾದ ಪೋಸ್ಟರ್​ ಅನ್ನು ದೊಡ್ಡದಾಗಿ ಪ್ರಿಂಟ್ ಹಾಕಿಸಿ ಅದರ ಮುಂದೆ ಮೇಕೆಯೊಂದನ್ನು ಬಹಿರಂಗವಾಗಿ ಕಡಿದು ಅದರ ರಕ್ತದಿಂದ ದೇವರ ಸಿನಿಮಾದ ಪೋಸ್ಟರ್​ಗೆ ಅಭಿಷೇಕ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹಲವರು ಈ ಬಹಿರಂಗ ಹಿಂಸೆಯನ್ನು ಖಂಡಿಸಿದ್ದಾರೆ. ಮಾಂಸಕ್ಕಾಗಿ ಪ್ರಾಣಿಗಳನ್ನು ಕಡಿಯುವುದು ಸರಿ, ಆದರೆ ಪೋಸ್ಟರ್​ಗೆ ರಕ್ತದ ಅಭಿಷೇಕ ಮಾಡಲು ಅದೂ ಬಹಿರಂಗವಾಗಿ ಹೀಗೆ ಹಿಂಸೆ ಮೆರೆದಿರುವುದು ಸರಿಯಲ್ಲ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಜೂ ಎನ್​ಟಿಆರ್​ಗೆ ಟ್ವಿಟರ್​ನಲ್ಲಿ ಟ್ಯಾಗ್ ಮಾಡಿ ನಿಮ್ಮ ಅಭಿಮಾನಿಗಳಗೆ ತುಸು ಬುದ್ಧಿಹೇಳಿ ಎಂದು ಒತ್ತಾಯಿಸಿದ್ದಾರೆ. ಇನ್ನು ಕೆಲವರು ಇವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ನನ್ನ ಸಿನಿಮಾ ಟೈಟಲ್ ಕದ್ದಿದ್ದಾರೆ: ಜೂ ಎನ್​ಟಿಆರ್ ಹೊಸ ಸಿನಿಮಾ ವಿರುದ್ಧ ಬಂಡ್ಲ ಗಣೇಶ್ ಆಕ್ರೋಶ

ಸ್ವತಃ ಜೂ ಎನ್​ಟಿಆರ್ ಅವರೇ ಕೆಲವು ಕಾರ್ಯಕ್ರಮಗಳಲ್ಲಿ, ಸಂದರ್ಶನಗಳಲ್ಲಿ ತಮ್ಮ ಕಟೌಟ್​ಗೆ ಹಾಲಿನ ಅಭಿಷೇಕವನ್ನು ಸಹ ಮಾಡಬೇಡಿ ಎಂದು ಮನವಿ ಮಾಡಿದ್ದಿದೆ. ಆದರೆ ಅಭಿಮಾನಿಗಳು ಅವರ ಮಾತು ಕೇಳುತ್ತಿಲ್ಲ. ಒಂದು ಸಂದರ್ಶನದಲ್ಲಿ ತಮ್ಮ ಅಭಿಮಾನಿಗಳ ಬಗ್ಗೆ ಮಾತನಾಡಿದ್ದ ಜೂ ಎನ್​ಟಿಆರ್, ನನ್ನ ಅಭಿಮಾನಿಗಳು ನನಗೇ ಒಂದಾದ ಮೇಲೊಂದು ಶಾಕ್ ಕೊಡುತ್ತಲೇ ಇರುತ್ತಾರೆ. ಒಂದಕ್ಕಿಂತಲೂ ಒಂದು ಕ್ರೇಜಿ ಸಂಗತಿಗಳನ್ನು ಅವರು ಮಾಡುತ್ತಲೇ ಬಂದಿದ್ದಾರೆ ಎಂದಿದ್ದರು. ಕೆಲ ವರ್ಷದ ಹಿಂದೆ ಕರ್ನಾಟಕದ ಕೋಲಾರದಲ್ಲಿ ಜೂ ಎನ್​ಟಿಆರ್ ಅಭಿಮಾನಿ ಹತ್ಯೆ ಮಾಡಿದ್ದ.

ಜೂ ಎನ್​ಟಿಆರ್ ಪ್ರಸ್ತುತ ದೇವರ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಕೊರಟಾಲ ಶಿವ ಈ ಸಿನಿಮಾದ ನಿರ್ದೇಶಕರಾಗಿದ್ದು ನಾಯಕಿ ಬಾಲಿವುಡ್​ನ ಜಾನ್ಹವಿ ಕಪೂರ್. ಸಿನಿಮಾಕ್ಕೆ ವಿಲನ್ ಬಾಲಿವುಡ್​ನ ಸೈಫ್ ಅಲಿ ಖಾನ್ ಮತ್ತು ಶ್ರೀಕಾಂತ್. ಸಿನಿಮಾ ಮುಂದಿನ ವರ್ಷ ಏಪ್ರಿಲ್​ನಲ್ಲಿ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:15 pm, Sun, 21 May 23

Loading...
Unable to load recommendations.
Follow Us