ಮೋದಿ ಕಾಲು ತೊಳೆದು ನೀರು ಕುಡಿಯುತ್ತೇನೆ: ಪ್ರಧಾನಿಯನ್ನು ವಿಷ್ಣು ಅವತಾರ ಎಂದ ನಟ ಸುದೇಶ್ ಬೇರಿ
ಪ್ರಧಾನಿ ಮೋದಿ ಅವರನ್ನು ಟೀಕಿಸಿದ ‘ಕಾಕ್ರೋಜ್ ಜನತಾ ಪಕ್ಷ’ದ ವಿರುದ್ಧ ನಟ ಸುದೇಶ್ ಬೇರಿ ಕಿಡಿಕಾರಿದ್ದಾರೆ. ಪಕ್ಷದ ಹೆಸರನ್ನು ಲೇವಡಿ ಮಾಡುತ್ತಾ, ‘ವಿಚಿತ್ರ ಜೀವಿಗಳ ಹೆಸರಿನಲ್ಲಿ ಪಕ್ಷ ಕಟ್ಟುವ ಬದಲು ಕತ್ತೆಕಿರುಬ ಪಕ್ಷ ಎಂದು ಹೆಸರು ಇಟ್ಟುಕೊಳ್ಳಬಾರದಿತ್ತೇ?’ ಎಂದು ವ್ಯಂಗ್ಯವಾಡಿದ್ದಾರೆ. ಮೋದಿಯವರನ್ನು ಬೇರಿ ಅವರು ದೇವರಿಗೆ ಹೋಲಿಸಿದ್ದಾರೆ.

‘ಬಾರ್ಡರ್’ ಸಿನಿಮಾ ಖ್ಯಾತಿಯ ಬಾಲಿವುಡ್ ನಟ ಸುದೇಶ್ ಬೇರಿ (Sudesh Berry) ಅವರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ನೀಡಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ಮೋದಿ (Narendra Modi) ಅವರನ್ನು ‘ಭಗವಾನ್ ವಿಷ್ಣುವಿನ ಅವತಾರ’ ಎಂದು ಬಣ್ಣಿಸಿರುವ ಅವರು, ಅವಕಾಶ ಸಿಕ್ಕರೆ ಅವರ ಪಾದಗಳನ್ನು ತೊಳೆದು ಆ ನೀರನ್ನು ಕುಡಿಯುವುದಾಗಿ ತಿಳಿಸಿದ್ದಾರೆ. ‘ಅಕಂಪನಿ ಅಕ್ಕಿ’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಸುದೇಶ್ ಬೆರಿ, ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಹಾಗೂ ಇತರ ಸಂಘಟನೆಗಳ ವಿರುದ್ಧ ಹರಿದಾಯ್ದಿದ್ದಾರೆ.
ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಸುದೇಶ್ ಬೇರಿ, ತಮಗೆ ಇಂತಹ ಸಂಘಟನೆಗಳ ಪರಿಚಯವಿಲ್ಲ ಎಂದಿದ್ದಾರೆ. ‘ನನಗೆ ಇಂತಹ ಯಾವುದೇ ಪಕ್ಷಗಳ ಅರಿವಿಲ್ಲ. ಇಂತಹ ಜನರು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಬದಲು ಹಿನ್ನಡೆಗೆ ತಳ್ಳುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ. ಧರಣಿ ನಡೆಸುವ ಬದಲು ಸಮಾಜಮುಖಿ ಕೆಲಸಗಳನ್ನು ಮಾಡುವಂತೆ ಯುವಜನರಿಗೆ ಅವರು ಸಲಹೆ ನೀಡಿದ್ದಾರೆ.
I want to wash Modiji’s feet and drink the water.
– Sudesh Berry pic.twitter.com/YOduCZlObO
— Dr Nimo Yadav 2.0 (@DrNimoYadav) July 30, 2026
‘ಪ್ರತಿಭಟನೆ ಮಾಡುವುದು ಸಾಧನೆ ಅಲ್ಲ’ ಎಂದ ನಟ
‘ಪ್ರತಿಭಟನೆ ನಡೆಸುವುದು ಬಿಟ್ಟು ಸಮಾಜ ಸೇವೆ ಮಾಡುವ ಉದ್ದೇಶವಿದ್ದರೆ ಮಕ್ಕಳಿಗೆ ಉದ್ಯಾನವನಗಳನ್ನು ನಿರ್ಮಿಸಿ, ಹಿರಿಯ ನಾಗರಿಕರಿಗೆ ವೃದ್ಧಾಶ್ರಮಗಳನ್ನು ಕಟ್ಟಿ ಹಾಗೂ ಬಡವರಿಗೆ ವೈದ್ಯಕೀಯ ಚಿಕಿತ್ಸೆ ನೀಡಿ. ಸುಮ್ಮನೆ ಜಂತರ್ ಮಂತರ್‌ನಲ್ಲಿ ಕುಳಿತು ಪ್ರತಿಭಟನೆ ಮಾಡುವುದರಿಂದ ಏನೂ ಸಾಧನೆಯಾಗುವುದಿಲ್ಲ’ ಎಂದಿದ್ದಾರೆ ಸುದೇಶ್ ಬೇರಿ.
‘ಮೋದಿ ಜಿ ವಿಷ್ಣುವಿನ ಅವತಾರ’
ಪ್ರಧಾನಿ ಮೋದಿ ಪರ ವಹಿಸಿ ಮಾತನಾಡಿದ ಸುದೇಶ್ ಬೇರಿ ಅವರು, ‘ನರೇಂದ್ರ ಮೋದಿ ಅವರು ಏನು ತಪ್ಪು ಮಾಡಿದ್ದಾರೆ? ಅವರು ಚಹಾ ಮಾರಾಟ ಮಾಡುತ್ತಿದ್ದರು ಎಂದು ಕೆಲವರು ಹೇಳುತ್ತಾರೆ. ಚಹಾ ಮಾರಾಟ ಮಾಡುತ್ತಲೇ ಅವರು ಇಡೀ ಪ್ರಪಂಚವನ್ನು ಸುತ್ತಿದ್ದಾರೆ. ಈಗ ನನಗೆ ಮೋದಿ ಜಿ ಅವರ ಪಾದಗಳನ್ನು ತೊಳೆದು ಆ ನೀರನ್ನು ಕುಡಿಯುವ ಆಸೆಯಿದೆ. ಯಾರಾದರೂ ಅವರೊಂದಿಗೆ ಭೇಟಿಗೆ ವ್ಯವಸ್ಥೆ ಮಾಡಿದರೆ ಸಾಕು. ನಾನು ಅವರನ್ನು ಎಂದೂ ವೈಯಕ್ತಿಕವಾಗಿ ಭೇಟಿಯಾಗಿಲ್ಲ. ನಾವು ದೇವರನ್ನು ಕಣ್ಣಾರೆ ನೋಡದಿದ್ದರೂ ಪೂಜಿಸುತ್ತೇವೆ. ಅದೇ ರೀತಿ ನಾನು ಮೋದಿ ಜಿ ಅವರನ್ನು ಗೌರವಿಸುತ್ತೇನೆ’ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಹೋರಾಟಕ್ಕೆ ನಟಿ ಜ್ಯೋತಿಕಾ ಬೆಂಬಲ: ಟ್ರೋಲ್ ಮಾಡಿದವರಿಗೆ ತಿರುಗೇಟು
‘ಈಗಾಗಲೇ ರಾಮರಾಜ್ಯ ಬಂದದೆ’
‘ಇದು ರಾಜಕೀಯ ಅಥವಾ ಪಕ್ಷಕ್ಕೆ ಸೀಮಿತವಾದ ಅಭಿಮಾನವಲ್ಲ. ಒಬ್ಬ ಮಾನವೀಯ ಮೌಲ್ಯವುಳ್ಳ ವ್ಯಕ್ತಿಯಾಗಿ ನಾನು ಅವರನ್ನು ಪ್ರೀತಿಸುತ್ತೇನೆ. ಭಾರತದಲ್ಲಿ ಈಗಾಗಲೇ ರಾಮರಾಜ್ಯ ಬಂದಿದೆ. ಇದನ್ನು ಅನುಭವಿಸಬೇಕೇ ಹೊರತು ವಿವರಿಸಲು ಸಾಧ್ಯವಿಲ್ಲ’ ಎಂದು ಸುದೇಶ್ ಬೇರಿ ಹೇಳಿದ್ದಾರೆ. ಇದರ ಜೊತೆಗೆ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಡಳಿತ ವೈಖರಿಯನ್ನೂ ಸುದೇಶ್ ಬೇರಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




