ವಿದ್ಯಾರ್ಥಿಗಳ ಹೋರಾಟಕ್ಕೆ ನಟಿ ಜ್ಯೋತಿಕಾ ಬೆಂಬಲ: ಟ್ರೋಲ್ ಮಾಡಿದವರಿಗೆ ತಿರುಗೇಟು
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ವಿರೋಧಿಸಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸುವಲ್ಲಿ ನಟಿ ಜ್ಯೋತಿಕಾ ಅವರು ಹಿಂದೇಟು ಹಾಕಿಲ್ಲ. ಆದರೆ ನಟಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಟ್ರೋಲ್ ಮಾಡಿದ್ದಾರೆ. ಅಂಥವರಿಗೆ ಜ್ಯೋತಿಕಾ ಅವರು ಖಡಕ್ ಉತ್ತರ ಕೊಟ್ಟಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಮುಖ್ಯಾಂಶಗಳು
- ವಿದ್ಯಾರ್ಥಿ ಪ್ರತಿಭಟನೆಯನ್ನು ಬೆಂಬಲಿಸಿ, ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದ ನಟಿ ಜ್ಯೋತಿಕಾ.
- ‘ನಿಮ್ಮದು ಹಿಟ್ ಸಿನಿಮಾ ಇಲ್ಲ’ ಎಂದು ಟ್ರೋಲ್ ಮಾಡಿದವರಿಗೆ ಸೂಕ್ತ ದಾಖಲೆಗಳೊಂದಿಗೆ ಖಡಕ್ ತಿರುಗೇಟು.
- ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ಹಾಗೂ ಸರ್ಕಾರದ ಬಲಪ್ರಯೋಗವನ್ನು ತೀವ್ರವಾಗಿ ಪ್ರಶ್ನಿಸಿದ ಖ್ಯಾತ ನಟಿ.
ದೇಶಾದ್ಯಂತ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯನ್ನು (Student Protest) ಬೆಂಬಲಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಧ್ವನಿ ಎತ್ತಿದ್ದ ನಟಿ ಜ್ಯೋತಿಕಾ ಅವರನ್ನು ಕೆಲವರು ಟ್ರೋಲ್ ಮಾಡಿದ್ದಾರೆ. ತಮ್ಮನ್ನು ಟ್ರೋಲ್ ಮಾಡಲು ಯತ್ನಿಸಿದವರಿಗೆ ಜ್ಯೋತಿಕಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಖಾರವಾಗಿ ತಿರುಗೇಟು ನೀಡಿದ್ದಾರೆ. ಶನಿವಾರ (ಜುಲೈ 24) ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದ ಜ್ಯೋತಿಕಾ ಅವರನ್ನು ಕೆಲವರು ಟ್ರೋಲ್ ಮಾಡಿದ್ದರು. ಬಂದಿರುವ ಕಮೆಂಟ್ಗಳಿಗೆ ಜ್ಯೋತಿಕಾ ಉತ್ತರ ನೀಡಿದ್ದಾರೆ.
‘ಧರ್ಮೇಂದ್ರ ಪ್ರಧಾನ್ ಅವರೇ ನಿಮ್ಮ ಹುದ್ದೆಗೆ ರಾಜೀನಾಮೆ ನೀಡಿ. ನಾನು ವಿದ್ಯಾರ್ಥಿಗಳು ಮತ್ತು ಈ ದೇಶದ ಭವಿಷ್ಯದ ಪರವಾಗಿ ನಿಲ್ಲುತ್ತೇನೆ. ಜವಾಬ್ದಾರಿಯುತ ವ್ಯವಸ್ಥೆ, ಪ್ರಜಾಪ್ರಭುತ್ವ ಮತ್ತು ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಧ್ವನಿ ಎತ್ತುತ್ತೇನೆ’ ಎಂದು ಜ್ಯೋತಿಕಾ ಪೋಸ್ಟ್ ಮಾಡಿದ್ದರು. ಇದಲ್ಲದೇ, ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್‌ಚುಕ್, ಅಭಿಜಿತ್ ದೀಪ್ಕೆ ಹಾಗೂ ಸೌರವ್ ದಾಸ್ ಅವರನ್ನು ಉಲ್ಲೇಖಿಸಿ, ‘ಒಬ್ಬ ತಾಯಿಯಾಗಿ ನಮ್ಮ ಮಕ್ಕಳನ್ನು ನಿಮ್ಮಂತೆ ಧೈರ್ಯವಂತರಾಗಿ ಬೆಳೆಸಲು ಬಯಸುತ್ತೇವೆ. ಜೆನ್ ಜೀ ಯುವಪಡೆಗೆ ನನ್ನ ಧನ್ಯವಾದಗಳು. ನೀವೆಲ್ಲರೂ ಸೇರಿ ನಾವು ಎಂದರೆ ಭಾರತ ಎಂದು ನಿರೂಪಿಸಿದ್ದೀರಿ’ ಎಂದು ಶ್ಲಾಘಿಸಿದ್ದರು.
ಟ್ರೋಲಿಗರಿಗೆ ನಟಿಯ ಖಡಕ್ ಉತ್ತರ
ಜ್ಯೋತಿಕಾ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಕೆಲ ನೆಟ್ಟಿಗರು ಅವರನ್ನು ಟ್ರೋಲ್ ಮಾಡಲು ಯತ್ನಿಸಿದರು. ‘ಟೂಲ್‌ಕಿಟ್ ಸಕ್ರಿಯಗೊಂಡಿದೆ, ಪ್ರಮುಖ ವಿಷಯ ಬಿಟ್ಟು ರಾಜಕೀಯ ಬೆಂಬಲಕ್ಕೆ ಸೆಲೆಬ್ರಿಟಿಗಳು ಬಂದಿದ್ದಾರೆ’ ಎಂಬ ಕಾಮೆಂಟ್‌ಗೆ ಉತ್ತರಿಸಿದ ನಟಿ, ‘ಓಹೋ! ಟೂಲ್‌ಕಿಟ್.. ಫ್ಯಾನ್ಸಿ ಶಬ್ದ. ನಾನು ವಿದ್ಯಾರ್ಥಿಗಳನ್ನು ಬೆಂಬಲಿಸಿ ಬರೆದಿದ್ದೇನೆ ಎಂದುಕೊಂಡಿದ್ದೆ, ಒಮ್ಮೆ ಚೆಕ್ ಮಾಡುತ್ತೇನೆ’ ಎಂದು ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ನೀಡಿದ ಬಾಲಿವುಡ್ ಸೆಲೆಬ್ರಿಟಿಗಳಿವರು
ಇನ್ನೊಬ್ಬ ನೆಟ್ಟಿಗ ‘ನಿಮಗೆ ಯಾವುದೇ ಹಿಟ್ ಸಿನಿಮಾಗಳಿಲ್ಲ’ ಎಂದು ಕಾಮೆಂಟ್ ಮಾಡಿದಾಗ, ತಮ್ಮ ಇತ್ತೀಚಿನ ಚಿತ್ರಗಳನ್ನು ಉಲ್ಲೇಖಿಸಿ, ‘ದಯವಿಟ್ಟು ಅಮೆಜಾನ್‌ನಲ್ಲಿ ಸಿಸ್ಟಮ್, ಬ್ಲಾಕ್‌ಬಸ್ಟರ್ ಶೈತಾನ್, ಡಬ್ಬಾ ಕಾರ್ಟೆಲ್, ಮಲಯಾಳಂನ ಕಾತಲ್ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಶ್ರೀಕಾಂತ್ ಸಿನಿಮಾಗಳನ್ನು ನೋಡಿ. ಟೈಮ್ ಪಾಸ್ ಮಾಡುವ ಮೊದಲು ಸತ್ಯಾಂಶ ತಿಳಿದುಕೊಳ್ಳಿ. ಒಂದೂ ಫ್ಲಾಪ್ ಇಲ್ಲ’ ಎಂದು ಪ್ರತ್ಯುತ್ತರ ನೀಡಿದ್ದಾರೆ.
ಲಾಠಿಚಾರ್ಜ್ ಕುರಿತು ನಟಿ ಪ್ರಶ್ನೆ:
‘ಪ್ರತಿಭಟನೆಯ ಹೆಸರಿನಲ್ಲಿ ಸರ್ಕಾರಿ ಆಸ್ತಿ ಹಾನಿ ಮಾಡಬಾರದು’ ಎಂದು ಬುದ್ಧಿವಾದ ಹೇಳಿದ ನೆಟ್ಟಿಗರೊಬ್ಬರಿಗೆ ಉತ್ತರಿಸಿದ ಜ್ಯೋತಿಕಾ, ‘ಹಾಗಾದರೆ ಸರ್ಕಾರ ವಿದ್ಯಾರ್ಥಿಗಳ ತಲೆ ಮತ್ತು ದೇಹಕ್ಕೆ ಹಾನಿ ಮಾಡುತ್ತಿರುವುದರ ಬಗ್ಗೆ ಏನು ಹೇಳುತ್ತೀರಿ?’ ಎಂದು ವಿದ್ಯಾರ್ಥಿಗಳ ಮೇಲಿನ ಬಲಪ್ರಯೋಗ ಹಾಗೂ ಲಾಠಿಚಾರ್ಜ್ ಅನ್ನು ಪ್ರಶ್ನಿಸಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ನಟಿ ಮತ್ತು ಅವರ ಕುಟುಂಬದ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದಾಗ, ‘ದೇವರು ಯಾವಾಗಲೂ ನನ್ನೊಂದಿಗಿದ್ದಾನೆ. ನಿಮ್ಮ ಕಾಳಜಿಗೆ ಧನ್ಯವಾದಗಳು’ ಎಂದು ಜ್ಯೋತಿಕಾ ವಿನಮ್ರವಾಗಿ ಉತ್ತರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




