
‘ಸೂಪರ್ ಸ್ಟಾರ್’ ರಜನಿಕಾಂತ್ (Rajinikanth) ಅವರ ಸಿನಿಮಾಗಳ ಬಗ್ಗೆ ಅಭಿಮಾನಿಗಳಿಗೆ ಸಖತ್ ಕ್ರೇಜ್ ಇದೆ. ‘ಜೈಲರ್’ ಸಿನಿಮಾ ಸೂಪರ್ ಹಿಟ್ ಆಗಿದ್ದೇ ಆ ಮಾತಿಗೆ ಸಾಕ್ಷಿ. ಈಗ ರಜನಿಕಾಂತ್ ಅವರು ‘ಕೂಲಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಇದೇ ಸಿನಿಮಾದಲ್ಲಿ ಹಲವು ಸ್ಟಾರ್ ನಟರು ಕೂಡ ಅಭಿನಯಿಸಿದ್ದಾರೆ. ಲೋಕೇಶ್ ಕನಗರಾಜ್ ಅವರು ನಿರ್ದೇಶನ ಮಾಡಿರುವ ‘ಕೂಲಿ’ ಸಿನಿಮಾ (Coolie Movie) ಆಗಸ್ಟ್ 14ರಂದು ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಹಾಗಾದರೆ, ಈ ಚಿತ್ರ ಎಷ್ಟು ಕಲೆಕ್ಷನ್ ಮಾಡಬಹುದು ಎಂಬ ಕೌತುಕ ಎಲ್ಲರ ಮನದಲ್ಲೂ ಇದೆ. ಆ ಪ್ರಶ್ನೆಗೆ ಲೋಕೇಶ್ ಕನಗರಾಜ್ (Lokesh Kanagaraj) ಅವರು ಉತ್ತರ ನೀಡಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ಕೂಲಿ’ ಸಿನಿಮಾದ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಬಾಕ್ಸ್ ಆಫೀಸ್ ಊಹೆ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಈಗಾಗಲೇ ಬಾಲಿವುಡ್, ಟಾಲಿವುಡ್ ಮತ್ತು ಸ್ಯಾಂಡಲ್ವುಡ್ ಸಿನಿಮಾಗಳು ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಸೈ ಎನಿಸಿಕೊಂಡಿವೆ. ಆದರೆ ತಮಿಳಿನ ಯಾವ ಚಿತ್ರ ಕೂಡ ಈವರೆಗೂ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿಲ್ಲ.
‘ಒಂದುವೇಳೆ ಕೂಲಿ ಸಿನಿಮಾ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೆ ನನಗೆ ಖುಷಿ ಆಗುತ್ತದೆ. ಆದರೆ ಆ ಉದ್ದೇಶದಿಂದ ನಾನು ಈ ಸಿನಿಮಾ ಮಾಡಿಲ್ಲ. ಕಥೆ ಬರೆಯುವಾಗ, ಸಿನಿಮಾ ಮಾಡುವಾಗ ಸಾವಿರ ಕೋಟಿ ರೂಪಾಯಿ ಬಗ್ಗೆ ಚರ್ಚೆ ಆಗಿಲ್ಲ. ಆದ್ದರಿಂದ ನಾನಾಗಲಿ, ನನ್ನ ತಂಡದವರಾಗಲಿ, ನನ್ನ ನಿರ್ಮಾಣ ಸಂಸ್ಥೆಯಾಗಲಿ ಯಾಕೆ ಆ ಒತ್ತಡದಲ್ಲಿ ಇರಬೇಕು? ನಾನು ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಜನರಿಗೆ ನೀಡುತ್ತಿದ್ದೇವೆ. ಸಿನಿಮಾ ಒಳ್ಳೆಯದ್ದೋ ಅಥವಾ ಕೆಟ್ಟದ್ದೋ ಎಂಬುದನ್ನು ಜನರು ನಿರ್ಧರಿಸಲಿ’ ಎಂದು ಲೋಕೇಶ್ ಕನಗರಾಜ್ ಹೇಳಿದ್ದಾರೆ.
‘ಸಾವಿರ ಕೋಟಿ, 2 ಸಾವಿರ ಕೋಟಿ ಎಂಬುದು ಒಂದು ಮ್ಯಾಜಿಕ್ ನಂಬರ್. ಉದಾಹರಣೆಗೆ, ಕ್ರಿಕೆಟರ್ 99 ರನ್ ಪಡೆದು ಔಟ್ ಆದರೆ ಹತಾಶನಾಗುತ್ತಾನೆ. ಆದರೆ 100 ಹೊಡೆದರೆ ಖುಷಿಯಾಗಿ ಸೆಲೆಬ್ರೇಟ್ ಮಾಡುತ್ತಾನೆ. 99 ರನ್ ಕೂಡ ಉತ್ತಮ ಸ್ಕೋರ್ ತಾನೆ? ನಿಮ್ಮ 99 ರನ್ ಕಾರಣದಿಂದ ನಿಮ್ಮ ಟೀಮ್ ಗೆದ್ದರೆ ಆಗಲೂ ನೀವು ಸೆಲೆಬ್ರೇಟ್ ಮಾಡಬಹುದು’ ಎಂದಿದ್ದಾರೆ ಲೋಕೇಶ್ ಕನಗರಾಜ್.
ಇದನ್ನೂ ಓದಿ: ರಜನಿಕಾಂತ್ ಭೇಟಿ ಮಾಡಿದ ನಟಿ ಧನ್ಯಾ ರಾಮ್ಕುಮಾರ್; ಖುಷಿಯ ಫೋಟೋಗಳು ಇಲ್ಲಿವೆ..
‘ಸನ್ ಪಿಕ್ಚರ್ಸ್’ ಮೂಲಕ ‘ಕೂಲಿ’ ಸಿನಿಮಾ ನಿರ್ಮಾಣ ಆಗಿದೆ. ರಜನಿಕಾಂತ್ ಜೊತೆ ನಾಗಾರ್ಜುನ, ಉಪೇಂದ್ರ, ಸತ್ಯರಾಜ್, ಶ್ರುತಿ ಹಾಸನ್, ಪೂಜಾ ಹೆಗ್ಡೆ, ಆಮಿರ್ ಖಾನ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪೂಜೆ ಹೆಗ್ಡೆ ಕಾಣಿಸಿಕೊಂಡಿರುವ ‘ಮೋನಿಕಾ’ ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.