ಎ ಸರ್ಟಿಫಿಕೇಟ್ ಕೊಟ್ಟ ಸೆನ್ಸಾರ್ ಮಂಡಳಿ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ‘ಕೂಲಿ’ ನಿರ್ಮಾಪಕರು

ಆಗಸ್ಟ್ 14ರಂದು ಬಿಡುಗಡೆ ಆದ ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ ಉತ್ತಮವಾಗಿ ಕಲೆಕ್ಷನ್ ಮಾಡಿದೆ. ಆದರೆ ಸೆನ್ಸಾರ್ ಮಂಡಳಿಯಿಂದ ಈ ಸಿನಿಮಾಗೆ ‘ಎ’ ಪ್ರಮಾಣಪತ್ರ ಸಿಕ್ಕಿದ್ದಕ್ಕೆ ನಿರ್ಮಾಪಕರಿಗೆ ಅಸಮಾಧಾನ ಇದೆ. ಸೆನ್ಸಾರ್ ಮಂಡಳಿಯ ನಿರ್ಧಾರವನ್ನು ಪ್ರಶ್ನಿಸಿ ‘ಸನ್ ಪಿಕ್ಚರ್ಸ್’ ಸಂಸ್ಥೆಯು ಈಗ ಹೈಕೋರ್ಟ್​​ ಮೆಟ್ಟಿಲೇರಿದೆ.

ಎ ಸರ್ಟಿಫಿಕೇಟ್ ಕೊಟ್ಟ ಸೆನ್ಸಾರ್ ಮಂಡಳಿ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ‘ಕೂಲಿ’ ನಿರ್ಮಾಪಕರು
Coolie Movie

Updated on: Aug 20, 2025 | 7:13 PM

ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ನಟನೆಯ ‘ಕೂಲಿ’ ಸಿನಿಮಾ ಯಶಸ್ಸು ಕಂಡಿದೆ. ಬಾಕ್ಸ್ ಆಫೀಸ್​​ನಲ್ಲಿ ನೂರಾರು ಕೋಟಿ ರೂಪಾಯಿ ಕಮಾಯಿ ಮಾಡಿದೆ. ಬಹುತಾರಾಗಣದ ಸಿನಿಮಾ ಎಂಬ ಕಾರಣಕ್ಕೆ ಅಭಿಮಾನಿಗಳು ಈ ಸಿನಿಮಾವನ್ನು ಮೊದಲ ದಿನವೇ ಮುಗಿಬಿದ್ದು ನೋಡಿದರು. ಆದರೂ ಕೂಡ ನಿರ್ಮಾಪಕರಿಗೆ ಒಂದು ಅಸಮಾಧಾನ ಇದೆ. ‘ಕೂಲಿ’ ಸಿನಿಮಾಗೆ ಸೆನ್ಸಾರ್ ಮಂಡಳಿ (CBFC) ‘ಎ’ ಪ್ರಮಾಣಪತ್ರ ನೀಡಿದೆ. ಇದರಿಂದ ಸಹಜವಾಗಿಯೇ ಚಿತ್ರದ ಕಲೆಕ್ಷನ್ ಮೇಲೆ ಪರಿಣಾಮ ಬೀರಿದೆ. A ಪ್ರಮಾಣಪತ್ರ ನೀಡಿದ್ದನ್ನು ಪ್ರಶ್ನಿಸಿ ‘ಕೂಲಿ’ ಸಿನಿಮಾ (Coolie Movie) ನಿರ್ಮಾಪಕರು ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.

‘ಕೂಲಿ’ ಸಿನಿಮಾದಲ್ಲಿ ಹಿಂಸೆಯನ್ನು ವಿಜೃಂಭಿಸಲಾಗಿದೆ ಎಂಬ ಕಾರಣಕ್ಕೆ ಸೆನ್ಸಾರ್ ಮಂಡಳಿ ‘ಎ’ ಪ್ರಮಾಣಪತ್ರ ನೀಡಿತು. ಅದನ್ನು ಪ್ರಶ್ನಿಸಿದ ಚಿತ್ರತಂಡದವರು ಮೇಲ್ಮನವಿ ಸಲ್ಲಿಸಿದ್ದರು. ಆಗಲೂ ಕೂಡ ಚಿತ್ರಕ್ಕೆ ಸಿಕ್ಕಿದ್ದು ‘ಎ’ ಸರ್ಟಿಫಿಕೇಟ್. ಅಂದರೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರೇಕ್ಷಕರು ಈ ಸಿನಿಮಾವನ್ನು ನೋಡುವಂತಿಲ್ಲ!

ಮಕ್ಕಳು ಈ ಸಿನಿಮಾ ನೋಡುವಂತಿಲ್ಲ ಎಂದರೆ ಫ್ಯಾಮಿಲಿ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗುತ್ತದೆ. ಮಕ್ಕಳನ್ನು ಕರೆದುಕೊಂಡು ಚಿತ್ರಮಂದಿರಕ್ಕೆ ಬಂದು ಫ್ಯಾಮಿಲಿ ಸಮೇತ ಸಿನಿಮಾ ನೋಡಬೇಕು ಎಂಬ ಆಸೆ ಇರುವವರಿಗೆ ‘ಎ’ ಪ್ರಮಾಣಪತ್ರ ಅಡ್ಡಿ ಆಗುತ್ತದೆ. ಹಾಗಾಗಿ ಬಿಸ್ನೆಸ್ ಕಡಿಮೆ ಆಗುವುದು ಸಹಜ. ‘ಕೂಲಿ’ ಸಿನಿಮಾಗೆ ‘ಎ’ ಪ್ರಮಾಣಪತ್ರ ನೀಡಿದ್ದರಿಂದ ನಿರ್ಮಾಣ ಸಂಸ್ಥೆಯಾದ ‘ಸನ್ ಪಿಕ್ಚರ್ಸ್​’ಗೆ ಅಚ್ಚರಿ ಆಗಿತ್ತು.

ಇದನ್ನೂ ಓದಿ
ರಜನಿಕಾಂತ್ ತಾಯಿ, ಸಹೋದರಿ ಮತ್ತು ಗೆಳತಿಯಾಗಿ ನಟಿಸಿದ ಏಕೈಕ ನಾಯಕಿ ಇವರು
ಕೇರಳಕ್ಕೆ ಬಂದ ರಜನಿಕಾಂತ್: ಅಭಿಮಾನಿಗಳ ಸಂಭ್ರಮ ಹೇಗಿತ್ತು ನೋಡಿ
ಕಂಡಕ್ಟರ್ ಆಗಿದ್ದಾಗಲೇ ರಜನಿಕಾಂತ್ ಸ್ಟೈಲಿಶ್​
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್

ಸಿನಿಮಾಗಳಿಗೆ ಪ್ರಮಾಣಪತ್ರ ನೀಡುವಾಗ ಸಾಕಷ್ಟು ಮಾನದಂಡಗಳನ್ನು ಪರಿಗಣಿಸಲಾಗುತ್ತದೆ. ಪ್ರತಿ ಸಿನಿಮಾ ಕೂಡ ಭಿನ್ನವಾಗಿರುತ್ತದೆ. ಪ್ರಮಾಣಪತ್ರಗಳನ್ನು ನೀಡುವಾಗ ಆಯಾ ವಿಷಯ ಮತ್ತು ಸಂದರ್ಭಕ್ಕೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈ ಮೊದಲು ‘ಕೂಲಿ’ ಚಿತ್ರಕ್ಕಿಂತಲೂ ಹೆಚ್ಚು ಆ್ಯಕ್ಷನ್ ದೃಶ್ಯಗಳನ್ನು ಹೊಂದಿದ್ದ ಸಿನಿಮಾಗಳು ಕೂಡ ‘ಯು/ಎ’ ಪ್ರಮಾಣಪತ್ರ ಪಡೆದಿದ್ದವು.

ಇದನ್ನೂ ಓದಿ: ‘ಕೂಲಿ’ ಸಿನಿಮಾ ಮೂಲಕ ರಚಿತಾ ರಾಮ್​ಗೆ ಈಡೇರಿತು ಹಲವು ವರ್ಷಗಳ ವಿಚಿತ್ರ ಕನಸು

ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ, ವಿಜಯ್ ನಟನೆಯ ‘ಬೀಸ್ಟ್’ ಮುಂತಾದ ಸಿನಿಮಾಗಳಲ್ಲಿ ಹೆಚ್ಚು ಕ್ರೌರ್ಯದ ದೃಶ್ಯಗಳಿದ್ದವು. ಆದರೂ ಆ ಸಿನಿಮಾಗಳಿಗೆ ‘ಯು/ಎ’ ಪ್ರಮಾಣಪತ್ರ ನೀಡಲಾಗಿತ್ತು. ಹಾಗಿದ್ದರೆ ಸೆನ್ಸಾರ್ ಮಂಡಳಿಯವರು ‘ಕೂಲಿ’ ಸಿನಿಮಾಗೆ ‘ಎ’ ಪ್ರಮಾಣಪತ್ರ ಕೊಟ್ಟಿದ್ದು ಯಾಕೆ ಎಂದು ಪ್ರಶ್ನಿಸಿ ನಿರ್ಮಾಪಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us