ಆರೋಗ್ಯಕ್ಕೆ ಹಾನಿಕರ ಉತ್ಪನ್ನ ಪ್ರಚಾರ ಮಾಡಬೇಡಿ; ನಟ-ನಟಿಯರಿಗೆ ರಾಷ್ಟ್ರಪತಿ ಕರೆ

ಗುಜರಾತ್‌ನ ಏಕತಾ ನಗರದಲ್ಲಿ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗವಹಿಸಿದ್ದರು. ಆರೋಗ್ಯಕ್ಕೆ ಹಾನಿಕರವಾದ ಉತ್ಪನ್ನಗಳನ್ನು ಪ್ರಚಾರ ಮಾಡದಂತೆ ಅವರು ನಟರಿಗೆ ಕರೆ ನೀಡಿದರು. ಹಿರಿಯ ನಟ ಅನಂತ್ ನಾಗ್ ಅವರಿಗೆ ಅತ್ಯುನ್ನತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಆರೋಗ್ಯಕ್ಕೆ ಹಾನಿಕರ ಉತ್ಪನ್ನ ಪ್ರಚಾರ ಮಾಡಬೇಡಿ; ನಟ-ನಟಿಯರಿಗೆ ರಾಷ್ಟ್ರಪತಿ ಕರೆ
ದ್ರೌಪದಿ ಮುರ್ಮು
Image Credit source: PIBAhmedabad
Edited By:

Updated on: Sep 23, 2026 | 8:08 AM

ಚಿತ್ರರಂಗದ ತಾರೆಗಳು ಸಮಾಜಕ್ಕೆ ಒಳ್ಳೆಯ ಬೆಳಕು ನೀಡುವ ಕೆಲಸ ಮಾಡಬೇಕು. ಯುವಜನತೆಯ ಮೇಲೆ ಪ್ರಭಾವ ಬೀರುವ ನಟ-ನಟಿಯರು ಆರೋಗ್ಯಕ್ಕೆ ಹಾನಿಯುಂಟು ಮಾಡುವ ಯಾವುದೇ ಅಪಾಯಕಾರಿ ಉತ್ಪನ್ನಗಳನ್ನು ಪ್ರಚಾರ ಮಾಡಬಾರದು. 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಿತ್ರರಂಗದ ಗಣ್ಯರಿಗೆ ಈ ಮಹತ್ವದ ಮನವಿ ಮಾಡಿದ್ದಾರೆ.

ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಪಾನ್ ಮಸಾಲಾ ಜಾಹೀರಾತು ಪ್ರಚಾರ ಮಾಡಿ ಸಂಕಷ್ಟ ಎದುರಿಸಿದ್ದಾರೆ. ಅವರಿಗೆ ನೋಟಿಸ್ ಕೂಡ ಬಂದಿದೆ. ಈ ಬೆಳವಣಿಗೆ ಮಧ್ಯೆಯೇ ದ್ರೌಪದಿ ಮುರ್ಮು ಅವರು ಈ ರೀತಿಯ ಹೇಳಿಕೆ ನೀಡಿದ್ದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಪ್ರಶಸ್ತಿ ತೀರ್ಪುಗಾರರ ಸಮಿತಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ರಾಷ್ಟ್ರಪತಿ ಆಶಿಸಿದರು. ಗುಜರಾತ್‌ನ ಏಕತಾ ನಗರದಲ್ಲಿರುವ ‘ಸ್ಟ್ಯಾಚ್ಯೂ ಆಫ್ ಯೂನಿಟಿ’ ಆವರಣದಲ್ಲಿ ಈ ವೈಭವದ ಸಮಾರಂಭ ನಡೆಯಿತು. ದೆಹಲಿಯಿಂದ ಹೊರಗೆ ಈ ರಾಷ್ಟ್ರೀಯ ಪ್ರಶಸ್ತಿ ಸಮಾರಂಭ ಆಯೋಜನೆಗೊಂಡಿದ್ದು ಇದೇ ಮೊದಲ ಬಾರಿಯಾಗಿದೆ. ಸಿನಿರಂಗದ ಕಾರ್ಮಿಕರ ಸಾಮಾಜಿಕ ಭದ್ರತೆಗೂ ರಾಷ್ಟ್ರಪತಿಗಳು ಒತ್ತು ನೀಡಿದರು.

ಖ್ಯಾತ ಹಿರಿಯ ನಟ ಅನಂತ್ ನಾಗ್ ಅವರಿಗೆ ದೇಶದ ಅತ್ಯುನ್ನತ ಚಿತ್ರ ಗೌರವವಾದ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ‘ಆರ್ಟಿಕಲ್ 370’ ಚಿತ್ರಕ್ಕಾಗಿ ನಟಿ ಯಾಮಿ ಗೌತಮ್ ಮತ್ತು ಆದಿತ್ಯ ಧರ್ ದಂಪತಿ ಪ್ರಶಸ್ತಿ ಸ್ವೀಕರಿಸಿದರು. ಮಲಯಾಳಂನ ‘ಬ್ರಹ್ಮಯುಗಂ’ ಚಿತ್ರಕ್ಕಾಗಿ ಮಮ್ಮುಟ್ಟಿ ಹಾಗೂ ‘ಚಂದು ಚಾಂಪಿಯನ್’ ಚಿತ್ರಕ್ಕಾಗಿ ಕಾರ್ತಿಕ್ ಆರ್ಯನ್ ಸೇರಿದಂತೆ ಹಲವು ದಿಗ್ಗಜರು ಪ್ರಶಸ್ತಿ ಪಡೆದರು.

ಇದನ್ನೂ ಓದಿ: ದಾದಾ ಸಾಹೇಬ್ ಫಾಲ್ಕೆ ಸ್ವೀಕರಿಸಿ ಜನ್ಮಭೂಮಿ, ಕರ್ಮಭೂಮಿಗೆ ನಮಿಸಿದ ಅನಂತ್ ನಾಗ್

ಸಂತಾಲಿ ಭಾಷೆಯ ‘ಅಂಗೆನ್’ ಕಿರುಚಿತ್ರಕ್ಕೆ ಪ್ರಶಸ್ತಿ ಸಿಕ್ಕಿರುವುದನ್ನು ರಾಷ್ಟ್ರಪತಿ ವಿಶೇ‍ಷವಾಗಿ ಸ್ಮರಿಸಿದರು. ಇದು ಸಾಂಸ್ಕೃತಿಕ ವೈವಿಧ್ಯತೆಗೆ ಸಿಕ್ಕ ಗೌರವ ಎಂದು ಅವರು ಬಣ್ಣಿಸಿದರು. ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಈ ಪ್ರಶಸ್ತಿ ಸಮಾರಂಭವನ್ನು ದೆಹಲಿಯಿಂದ ಹೊರಗೆ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಇತರ ರಾಜ್ಯಗಳ ಪ್ರಸಿದ್ಧ ಪ್ರವಾಸಿ ತಾಣಗಳಲ್ಲೂ ಈ ಕಾರ್ಯಕ್ರಮ ನಡೆಯಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.

 

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us