ಡ್ರಗ್ಸ್ ಕೇಸ್: ನಟಿ ಸಂಜನಾ ಗಲ್ರಾನಿ, ಶಿವ ಪ್ರಕಾಶ್ ಚಿಪ್ಪಿಗೆ ಬಿಗ್ ರಿಲೀಫ್!
Sanjjanaa Galrani Drug Case: ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿದ್ದ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಹಾಗೂ ಶಿವಪ್ರಕಾಶ್ ಚಿಪ್ಪಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಸ್ಯಾಂಡಲ್ವುಡ್ನಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಡ್ರಗ್ಸ್ ಪ್ರಕರಣದಲ್ಲಿ (Sandalwood Drugs Case) ನಟಿ ಸಂಜನಾ ಗಲ್ರಾನಿ (Sanjjanaa Galrani) ಹಾಗೂ ಶಿವಪ್ರಕಾಶ್ ಚಿಪ್ಪಿಗೆ ಬಿಗ್ ರಿಲೀಫ್ ಸಿಕ್ಕಿದೆ. ಇಬ್ಬರ ವಿರುದ್ದ ದಾಖಲಾಗಿದ್ದ ಎಫ್‌ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಇದ್ರಿಂದ ನಟಿ ಸಂಜನಾ ಗಲ್ರಾನಿ ಹಾಗೂ ನಿರ್ಮಾಪಕ ಶಿವಪ್ರಕಾಶ್ ಚಿಪ್ಪಿ ನಿರಾಳರಾಗಿದ್ದಾರೆ.
ಮಾದಕ ವಸ್ತು ಜಾಲದ ಜತೆ ನಂಟು ಹೊಂದಿದ್ದಾರೆ ಎಂಬ ಆರೋಪದಲ್ಲಿ 2020ರ ಸೆಪ್ಟೆಂಬರ್‌ನಲ್ಲಿ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ನಿರ್ಮಾಪಕ ಶಿವಪ್ರಕಾಶ್ ಚಿಪ್ಪಿ ಸೇರಿ ಹಲವರ ಬಂಧನವಾಗಿತ್ತು. ನಂತರ ಜೈಲು ಸೇರಿದ್ದ ಸಂಜನಾಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಡಿಸೆಂಬರ್‌ನಲ್ಲಿ ಜಾಮೀನು ಸಿಕ್ಕಿತ್ತು. ಬಳಿಕ ಎಫ್‌ಐಆರ್ ರದ್ದು ಕೋರಿ ಸಂಜನಾ ಹಾಗೂ ಶಿವಪ್ರಕಾಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆ ಅರ್ಜಿಯನ್ನು ಇಂದು (ಜೂನ್ 24) ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ಏಕಸದಸ್ಯ ಪೀಠ ಎಫ್‌ಐಆರ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: ದರ್ಶನ್ ಖೈದಿ ಸಂಖ್ಯೆ 6106; ಈ ನಂಬರ್ನಲ್ಲೇ ವಾಹನ ನೋಂದಣಿಗೆ ಹೆಚ್ಚಿದೆ ಬೇಡಿಕೆ
2020ರ ಆಗಸ್ಟ್ 26ರಂದು ಸೆಲಿಬ್ರಿಟಿಗಳು, ಸಿನಿ ನಟ, ನಟಿಯರು ಹಾಗೂ ಉದ್ಯಮಿಗಳ ಮಕ್ಕಳು ಡ್ರಗ್ಸ್ ಪಾರ್ಟಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಎನ್‌ಸಿಬಿ ಅಧಿಕಾರಿಗಳು ಬೆಂಗಳೂರಿನ ಕಲ್ಯಾಣ ನಗರದಲ್ಲಿರುವ ರಾಯಲ್ ಸೂಟ್ಸ್ ಹೋಟೆಲ್ ಮೇಲೆ ದಾಳಿ ಮಾಡಿದ್ದರು. ಆಗ ಅಪಾರ ಪ್ರಮಾಣದ ಮಾದಕ ವಸುಗಳನ್ನು ವಶಪಡಿಸಿಕೊಂಡಿದ್ದ ಅಧಿಕಾರಿಗಳು ಅನೂಪ್, ರವೀಂದ್ರನ್ ಹಾಗೂ ಡಿ. ಅಂಕಿತ ಎಂಬ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದರು. ನಂತರ ತನಿಖೆ ವೇಳೆ ಇವರು ಸ್ಯಾಂಡಲ್‌ವುಡ್ ನಟ, ನಟಿಯರಿಗೆ ಮಾದಕ ವಸ್ತು ಪೂರೈಕೆ ಮಾಡಲಾಗುತ್ತಿದ್ದರು ಎಂಬ ಸ್ಫೋಟಕ ಸಂಗತಿ ಹೊರಬಿದ್ದಿತ್ತು. ಬಳಿಕ ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.