ಕುಂದಾಪುರಕ್ಕೆ ಬಂದ ‘ಕಲ್ಕಿ’ಯ ಬುಜ್ಜಿ, ಡ್ರೈವ್ ಮಾಡಿದ ರಿಷಬ್ ಶೆಟ್ಟಿ
Kalki 2898 AD Bujji Car: ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಪ್ರಭಾಸ್ ಓಡಿಸುವ ಬುಜ್ಜಿ ಕಾರು ಕುಂದಾಪುರಕ್ಕೆ ಬಂದಿದೆ. ಕುಂದಾಪುರದಲ್ಲಿ ಈ ವಾಹನವನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿ ಓಡಿಸಿ ಖುಷಿ ಪಟ್ಟಿದ್ದಾರೆ.
‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಬಿಡುಗಡೆಗೆ ಇನ್ನೆರಡು ದಿನಗಳಷ್ಟೆ ಬಾಕಿ ಇದೆ. ಸಿನಿಮಾದ ಪ್ರಚಾರ ಜೋರಾಗಿ ನಡೆಯುತ್ತಿದೆ. ವಿಶೇಷವಾಗಿ ಈ ಸಿನಿಮಾದ ಪ್ರಚಾರದಲ್ಲಿ ಬುಜ್ಜಿಯನ್ನು ಪ್ರಧಾನವಾಗಿ ಬಳಸಲಾಗುತ್ತಿದೆ. ಸಿನಿಮಾದ ಟ್ರೈಲರ್-ಟೀಸರ್ಗಳಲ್ಲಿ ಸಹ ಬುಜ್ಜಿಯೇ ಕೇಂದ್ರ ಬಿಂದುವಾಗಿತ್ತು. ಅಂದಹಾಗೆ ಬುಜ್ಜಿ ಎಂದರೆ ಒಂದು ವಾಹನ. ಇದೀಗ ‘ಕಲ್ಕಿ’ಯ ಈ ಬುಜ್ಜಿ ವಾಹನ ಕುಂದಾಪುರಕ್ಕೆ ಬಂದಿದ್ದು, ನಟ, ನಿರ್ದೇಶಕ ರಿಷಬ್ ಶೆಟ್ಟಿಯವರು (Rishab Shetty) ಬುಜ್ಜಿಯನ್ನು ಓಡಿಸಿ ಖುಷಿ ಪಟ್ಟಿದ್ದಾರೆ.
ಬುಜ್ಜಿ, ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಪ್ರಭಾಸ್ ಓಡಿಸುವ ಮೂರು ಚಕ್ರದ ವಾಹನದ ಹೆಸರು. ಭಾರಿ ಬಲಶಾಲಿಯಾಗಿರುವ ಈ ವಾಹನ ಬೃಹತ್ ಗಾತ್ರದಲ್ಲಿದ್ದು, ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಬುಜ್ಜಿ ನಾಯಕ ಪ್ರಭಾಸ್ರ ವಾಹನ ಮಾತ್ರವಲ್ಲ ಆತ್ಮೀಯ ಗೆಳೆಯ ಸಹ. ಈ ಬುಜ್ಜಿ ವಾಹನವನ್ನು ಪ್ರಭಾಸ್ ಸೇರಿದಂತೆ ಚಿತ್ರರಂಗದ ಹಲವರು ಓಡಿಸಿ ಖುಷಿ ಪಟ್ಟಿದ್ದಾರೆ. ಇದೀಗ ವಾಹನವು ಕುಂದಾಪುರಕ್ಕೆ ಬಂದಿದ್ದು, ನಟ ರಿಷಬ್ ಶೆಟ್ಟಿ ಸಹ ವಾಹನವನ್ನು ಓಡಿಸಿದ್ದಾರೆ.
ಕುಂದಾಪುರಕ್ಕೆ ಬಂದ ಬುಜ್ಜಿಗೆ ಮದ್ದಳೆ ಮೇಳದಿಂದ ರಿಷಬ್ ಶೆಟ್ಟಿಯವರು ಸ್ವಾಗತ ಕೋರಿದರು. ಬಳಿಕ ಬುಜ್ಜಿ ವಾಹನದಲ್ಲಿ ಕೂತು ಕೆಲವು ಸುತ್ತು ಹಾಕಿದರು ರಿಷಬ್, ‘ಬುಜ್ಜಿ’ಯನ್ನು ಓಡಿಸಿ ಸಖತ್ ಥ್ರಿಲ್ ಆದರು. ‘ಟೀಸರ್ನಲ್ಲೇ ಗೊತ್ತಾಗುತ್ತೆ ಬುಜ್ಜಿಯ ಹವಾ ಹೇಗಿದೆ ಎಂದು. ಬುಜ್ಜಿಯನ್ನು ಡ್ರೈವ್ ಮಾಡಿದ್ದು ಬಹಳ ಒಳ್ಳೆಯ ಅನುಭವ. ಆಲ್ ದಿ ಬೆಸ್ಟ್ ಬುಜ್ಜಿ ಆಂಡ್ ಭೈರವ. ಜೂನ್ 27ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ, ಆಲ್ ದಿ ಬೆಸ್ಟ್ ಪ್ರಭಾಸ್’ ಎಂದಿದ್ದಾರೆ ರಿಷಬ್ ಶೆಟ್ಟಿ. ಈ ಸಮಯದಲ್ಲಿ ಅವರೊಟ್ಟಿಗೆ ಅವರ ಮಗ ಸಹ ಇದ್ದರು.
ಇದನ್ನೂ ಓದಿ:‘ಕಾಂತಾರ 2’ ಯಶಸ್ಸು ಕೋರಿ ರಿಷಬ್ ಶೆಟ್ಟಿ ಮತ್ತು ಕುಟಂಬದಿಂದ ವಿಶೇಷ ಪೂಜೆ
ಬುಜ್ಜಿಯನ್ನು ಭಾರತದ ಎಫ್1 ರೇಸರ್ ನಾರಾಯಣ್ ಸೇರಿದಂತೆ ಸಿನಿಮಾರಂಗದ ಹಲವು ಪ್ರಮುಖರು ಓಡಿಸಿ ಖುಷಿ ಪಟ್ಟಿದ್ದಾರೆ. ಭಾರತದ ಜನಪ್ರಿಯ ವಾಹನ ವಿಮರ್ಶಕರು ಸಹ ಬುಜ್ಜಿಯನ್ನು ಓಡಿಸಿ ಖುಷಿ ಪಟ್ಟಿದ್ದಾರೆ. ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಬುಜ್ಜಿ ಸೇರಿದಂತೆ ಹಲವು ರೀತಿಯ ಭಿನ್ನ ವಾಹನಗಳನ್ನು ಬಳಸಿಕೊಳ್ಳಲಾಗಿದೆ. ಈ ವಾಹನಗಳನ್ನು ಮಹೀಂದ್ರಾ ಸಂಸ್ಥೆ ಹಾಗೂ ತಮಿಳುನಾಡಿನ ಸಂಸ್ಥೆಯೊಂದು ಒಟ್ಟಿಗೆ ಸೇರಿ ನಿರ್ಮಿಸಿದೆ. ಈ ವಾಹನದ ತೂಕ ಬರೋಬ್ಬರಿ 6 ಟನ್!
‘ಕಲ್ಕಿ 2898 ಎಡಿ’ ಸಿನಿಮಾ ಜೂನ್ 27ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ಅಮಿತಾಬ್ ಬಚ್ಚನ್, ರಾಣಾ ದಗ್ಗುಬಾಟಿ, ದಿಶಾ ಪಟಾನಿ ಇನ್ನೂ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದು, ಅಶ್ವಿನಿ ದತ್ ನಿರ್ಮಾಣ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ