ತಮಿಳು ಸಿನಿಮಾದಲ್ಲಿ ದುನಿಯಾ ವಿಜಯ್, ನಯನತಾರಾ ಜೊತೆ ನಟನೆ
Duniya Vijay: 2023 ರಲ್ಲಿ ನಂದಮೂರಿ ಬಾಲಕೃಷ್ಣ ಜೊತೆಗೆ ದುನಿಯಾ ವಿಜಯ್ ತೆಲುಗು ಸಿನಿಮಾ ಒಂದರಲ್ಲಿ ನಟಿಸಿದ್ದರು. ಇದೀಗ ಮೊದಲ ಬಾರಿಗೆ ತಮಿಳು ಸಿನಿಮಾದಲ್ಲಿ ನಟಿಸಲು ಹೊರಟಿದ್ದಾರೆ ದುನಿಯಾ ವಿಜಿ. ಸಿನಿಮಾದಲ್ಲಿ ನಯನತಾರಾ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ ನಟ. ಸಿನಿಮಾದ ಮುಹೂರ್ತ ಇಂದು ನಡೆದಿದೆ.

ದುನಿಯಾ ವಿಜಯ್ (Duniya Vijay) ಇದೇ ಮೊದಲ ಬಾರಿಗೆ ತಮಿಳು ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ನಂದಮೂರಿ ಬಾಲಕೃಷ್ಣ ನಟನೆಯ ತೆಲುಗು ಸಿನಿಮಾನಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ ಮಿಂಚಿದ್ದ ದುನಿಯಾ ವಿಜಯ್, ಇದೀಗ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಮುಹೂರ್ತ ಇಂದಷ್ಟೆ ನಡೆದಿದ್ದು, ಸಿನಿಮಾದಲ್ಲಿ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಯಲಾಗುವ ನಯನತಾರಾ (Nayanathara) ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
2020ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದ್ದ ‘ಮೂಕುತ್ತಿ ಅಮ್ಮನ್’ ಸಿನಿಮಾದ ಮುಂದುವರೆದ ಭಾಗದಲ್ಲಿ ದುನಿಯಾ ವಿಜಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 2020ರ ‘ಮೂಕುತ್ತಿ ಅಮ್ಮನ್’ ಸಿನಿಮಾದಲ್ಲಿ ಆರ್ಜೆ ಬಾಲಾಜಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾದ ಸಹ ನಿರ್ದೇಶನವೂ ಅವರದ್ದೇ ಆಗಿತ್ತು. ಆದರೆ ಈಗ ‘ಮೂಕುತ್ತಿ ಅಮ್ಮನ್ 2’ ಸಿನಿಮಾವನ್ನು ತಮಿಳು ಚಿತ್ರರಂಗದ ಜನಪ್ರಿಯ ನಟ, ನಿರ್ದೇಶಕ ಸುಂದರ್ ಸಿ ನಿರ್ದೇಶನ ಮಾಡುತ್ತಿದ್ದಾರೆ.
‘ಮೂಕುತ್ತಿ ಅಮ್ಮನ್’ ಸಿನಿಮಾ ಭಕ್ತ ಮತ್ತು ದೇವಿಯ ನಡುವೆ ನಡೆಯುವ ಕತೆಯನ್ನು ಒಳಗೊಂಡಿದೆ. ಈಗ ‘ಮೂಕುತ್ತಿ ಅಮ್ಮನ್ 2’ ಸಿನಿಮಾದಲ್ಲಿ ದುನಿಯಾ ವಿಜಯ್ ಪಾತ್ರ ಯಾವುದು ಎಂಬ ಬಗ್ಗೆ ಇನ್ನೂ ಖಾತ್ರಿ ಇಲ್ಲ. ಈ ಸಿನಿಮಾದಲ್ಲಿ ನಯನತಾರಾ, ದುನಿಯಾ ವಿಜಯ್ ಹೊರತಾಗಿ ರೆಜಿನಾ ಕೆಸಾಂಡ್ರಾ, ನಟಿ, ರಾಜಕಾರಣಿ ಖುಷ್ಬು ಸುಂದರ್, ಮೀನಾ, ಅಭಿನಯ, ಹಾಸ್ಯನಟ ಯೋಗಿ ಬಾಬು ಅವರುಗಳು ಸಹ ನಟಿಸುತ್ತಿದ್ದಾರೆ.
ಇದನ್ನೂ ಓದಿ:ಮತ್ತೆ ಒಂದಾದ ದುನಿಯಾ ವಿಜಿ-ಎಸ್ ನಾರಾಯಣ್, ಜೊತೆಯಾದ ಮತ್ತೊಬ್ಬ ಸ್ಟಾರ್ ನಟ
2020ರ ‘ಮೂಕುತ್ತಿ ಅಮ್ಮನ್’ ಸಿನಿಮಾ ಕಡಿಮೆ ಬಜೆಟ್ನಲ್ಲಿ ನಿರ್ಮಾಣವಾದ ಸಿನಿಮಾ ಆಗಿತ್ತು. ಆದರೆ ‘ಮೂಕುತ್ತಿ ಅಮ್ಮನ್ 2’ ಸಿನಿಮಾಕ್ಕೆ ಭಾರಿ ಬಜೆಟ್ ಅನ್ನು ಮೀಸಲಿಡಲಾಗಿದೆ. 100 ಕೋಟಿ ಬಜೆಟ್ನಲ್ಲಿ ಸಿನಿಮಾ ಮಾಡಲಾಗುತ್ತಿದ್ದು, ಮೊದಲ ಭಾಗಕ್ಕಿಂತಲೂ ಭಿನ್ನವಾದ ಕತೆಯನ್ನು ಎರಡನೇ ಭಾಗ ಒಳಗೊಂಡಿರಲಿದೆಯಂತೆ. ಈ ಸಿನಿಮಾದಲ್ಲಿ ದೈವ ಮತ್ತು ದುಷ್ಟರ ನಡುವೆ ಹೋರಾಟ ನಡೆಯಲಿದೆ. ಈ ಸಿನಿಮಾ ಅದ್ಧೂರಿಯಾಗಿ ಮೂಡಿಬರಲಿದ್ದು, ಅದ್ಭುತವಾದ ಆಕ್ಷನ್ ದೃಶ್ಯಗಳು ಸಿನಿಮಾದಲ್ಲಿ ಇರಲಿವೆ ಎಂದು ನಿರ್ದೇಶಕರು ಹೇಳಿದ್ದಾರೆ.
ನಯನತಾರಾ ಮಾತನಾಡಿ, ‘ಮೂಕುತ್ತಿ ಅಮ್ಮನ್ ಪಾತ್ರ ಮಾಡುವುದು ಬೇರೆ ಇತರೆ ಪಾತ್ರಗಳಲ್ಲಿ ನಟಿಸುವುದಕ್ಕಿಂತಲೂ ಬಹಳ ಭಿನ್ನ. ಇದು ಭಾವನೆಗಳಿಗೆ ಸಂಬಂಧಿಸಿದ ವಿಷಯ. ಈ ಸಿನಿಮಾ ಮೂಲಕ ಪ್ರೇಕ್ಷಕರಿಗೆ ವಿಶಿಷ್ಟ ಅನುಭೂತಿಯನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದಿದ್ದಾರೆ. ನಿರ್ಮಾಪಕ ಇಶಾರಿ ಗಣೇಶ್ ಮಾತನಾಡಿ, ‘ನಯನತಾರಾ ಅವರು ಅದ್ಭುತವಾದ ಡೆಡಿಕೇಷನ್ ತೋರಿಸುತ್ತಿದ್ದಾರೆ. ಈ ಪಾತ್ರದಲ್ಲಿ ನಟಿಸಲು ಅವರು ಉಪವಾಸ ವೃತ ಆಚರಣೆ ಮಾಡುತ್ತಿದ್ದಾರೆ. ಶಿಸ್ತಿನ ಜೀವನ ಪಾಲಿಸುತ್ತಿದ್ದಾರೆ’ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ