ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ (RRR Movie) ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಈ ಚಿತ್ರ ಸೌಂಡು ಮಾಡಿದೆ. ಭಾರತೀಯ ಸಿನಿಮಾಗಳತ್ತ ಹಾಲಿವುಡ್ ಮಂದಿ ತಿರುಗಿ ನೋಡುವಂತಾಗಿದೆ. ಅದಕ್ಕೆಲ್ಲ ಕಾರಣ ಆಗಿರುವುದು ‘ನಾಟು ನಾಟು..’ ಹಾಡಿನ (Naatu Naatu Song) ಆಸ್ಕರ್ ಗೆಲುವು. ಇತ್ತೀಚೆಗೆ ನಡೆದ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಈ ಗೀತೆಗೆ ‘ಬೆಸ್ಟ್ ಒರಿಜಿನಲ್ ಸಾಂಗ್’ ಆಸ್ಕರ್ ಪ್ರಶಸ್ತಿ ಒಲಿಯಿತು. ಅದರ ಬೆನ್ನಲ್ಲೇ ಒಂದು ಅಚ್ಚರಿಯ ವಿಚಾರ ಹೊರಬಿದ್ದಿದೆ. ‘ಆರ್ಆರ್ಆರ್’ ಚಿತ್ರತಂಡದಲ್ಲೇ ಒಳಜಗಳ ಇದೆ. ಈ ಸಿನಿಮಾದ ನಿರ್ಮಾಪಕ ಡಿವಿವಿ ದಾನಯ್ಯ (DVV Danayya) ಅವರು ಅಸಮಾಧಾನ ಮಾಡಿಕೊಂಡಿದ್ದಾರೆ. ಆ ಬಗ್ಗೆ ಟಾಲಿವುಡ್ ಅಂಗಳಲ್ಲಿ ಗುಸುಗುಸು ಹಬ್ಬಿದೆ.
‘ಆರ್ಆರ್ಆರ್’ ಸಿನಿಮಾ ಆಸ್ಕರ್ ಪ್ರಶಸ್ತಿ ಗೆಲ್ಲಲು ನಡೆಸಿದ ಪ್ರಯತ್ನಗಳ ಬಗ್ಗೆ ಹಲವು ಬಗೆಯ ಮಾತುಗಳು ಕೇಳಿಬಂದಿವೆ. ಈ ಚಿತ್ರವನ್ನು ಸ್ವತಂತ್ರವಾಗಿ ಆಸ್ಕರ್ ಸ್ಪರ್ಧೆಗೆ ಕಳಿಸಲು ನಿರ್ದೇಶಕ ರಾಜಮೌಳಿ ಸಾಕಷ್ಟು ಹಣ ಕರ್ಚು ಮಾಡಿದ್ದಾರೆ ಎಂದು ಕೂಡ ಕೆಲವರು ಆರೋಪಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಿರ್ಮಾಪಕ ಡಿವಿವಿ ದಾನಯ್ಯ ಅವರ ಜೊತೆ ಚಿತ್ರತಂಡ ಸಂಪರ್ಕದಲ್ಲೇ ಇಲ್ಲ ಎಂಬ ಸತ್ಯ ಈಗ ಬಯಲಾಗಿದೆ.
ಇದನ್ನೂ ಓದಿ: Naatu Naatu: ಮಗನ ಸಿನಿಮಾದ ಹಾಡಿಗೆ ಆಸ್ಕರ್ ಪ್ರಶಸ್ತಿ; ಮೆಗಾಸ್ಟಾರ್ ಜಿರಂಜೀವಿ ಮೊದಲ ರಿಯಾಕ್ಷನ್
ಗೋಲ್ಡನ್ ಗ್ಲೋಬ್ಸ್, ಆಸ್ಕರ್ ಮುಂತಾದ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ‘ಆರ್ಆರ್ಆರ್’ ತಂಡ ತೆರಳಿದ್ದಾಗ ಅಲ್ಲಿ ನಿರ್ಮಾಪಕ ಡಿವಿವಿ ದಾನಯ್ಯ ಕಾಣಿಸಿಕೊಳ್ಳಲೇ ಇಲ್ಲ. ರಾಜಮೌಳಿ ಜೊತೆ ಅವರಿಗೆ ಇರುವ ಅಸಮಾಧಾನದ ಕಾರಣದಿಂದಲೇ ಅವರು ತಂಡದಿಂದ ಹೊರಗೆ ಉಳಿದರು ಎಂದು ಹೇಳಲಾಗುತ್ತಿದೆ. ಈಗ ಎಎನ್ಐ ಸುದ್ದಿ ಸಂಸ್ಥೆಗೆ ದಾನಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಪ್ರಶಸ್ತಿ ಬಂದಿದ್ದಕ್ಕೆ ಖುಷಿ ಇದೆ. ಆದರೆ ನಾನು ಯಾರ ಜೊತೆಯೂ ಸಂಪರ್ಕದಲ್ಲಿ ಇಲ್ಲ’ ಎಂದು ಅವರು ಹೇಳಿದ್ದಾರೆ ಎಂದು ವರದಿ ಆಗಿದೆ.
ಇದನ್ನೂ ಓದಿ: MM Keeravani Remuneration: ದುಬಾರಿ ಸಂಭಾವನೆ ಪಡೆಯುವ ಎಂಎಂ ಕೀರವಾಣಿ; ಆಸ್ಕರ್ ಪ್ರಶಸ್ತಿ ಗೆದ್ದ ಬಳಿಕ ಹೆಚ್ಚಿತು ಬೇಡಿಕೆ
‘ಫಾರ್ ಯುವರ್ ಕನ್ಸಿಡರೇಷನ್’ ಕ್ಯಾಂಪೇನ್ ಮೂಲಕ ರಾಜಮೌಳಿ ಅವರು ‘ಆರ್ಆರ್ಆರ್’ ಚಿತ್ರವನ್ನು ಆಸ್ಕರ್ ಅಂಗಳದ ತನಕ ತೆಗೆದುಕೊಂಡು ಹೋದರು. ಇದಕ್ಕೆ ದುಡ್ಡು ಖರ್ಚು ಮಾಡುವುದು ಡಿವಿವಿ ದಾನಯ್ಯ ಅವರಿಗೆ ಇಷ್ಟ ಇರಲಿಲ್ಲ ಎನ್ನಲಾಗುತ್ತಿದೆ. ಆ ಕಾರಣದಿಂದಲೇ ಅವರು ತಂಡದಿಂದ ಹೊರಗೆ ಉಳಿದುಕೊಂಡರು ಎಂಬ ಸುದ್ದಿ ಹರಡಿದೆ. ಈ ಬಗ್ಗೆ ರಾಜಮೌಳಿ ಅಥವಾ ಚಿತ್ರತಂಡದ ಯಾರಾದರೂ ಸ್ಪಷ್ಟನೆ ನೀಡಬೇಕಿದೆ.
‘ನಾಟು ನಾಟು..’ ಹಾಡಿಗೆ ಆಸ್ಕರ್ ಪ್ರಶಸ್ತಿ ಬಂದಿದ್ದನ್ನು ಭಾರತದ ಅನೇಕ ಸೆಲೆಬ್ರಿಟಿಗಳು ಸಂಭ್ರಮಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ಗಣ್ಯರು ಕೂಡ ‘ಆರ್ಆರ್ಆರ್’ ತಂಡಕ್ಕೆ ಶುಭ ಕೋರಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:04 pm, Tue, 14 March 23