
ಸೆಲೆಬ್ರಿಟಿಗಳು ಎಂದಮೇಲೆ ಅವರ ಹೆಸರುಗಳು ಆಗಾಗಾ ಡೇಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಆಗುತ್ತವೆ. ಒಬ್ಬರ ಜೊತೆ ಒಬ್ಬರು ಕಾಣಿಸಿಕೊಂಡರೆ ಸಾಕು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬುತ್ತದೆ. ಈ ಮೊದಲು ನಟಿ ಇಶಾ ಗುಪ್ತಾ (Esha Gupta) ಹಾಗೂ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಮಧ್ಯೆ ಡೇಟಿಂಗ್ ನಡೆದಿದೆ ಎಂಬ ಸುದ್ದಿ ಹಬ್ಬಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಇಶಾ ಅವರು ಸ್ಪಷ್ಟನೆ ನೀಡಿದ್ದು, ನಮ್ಮ ಮಧ್ಯೆ ಅಂಥದ್ದೇನು ನಡೆದಿಲ್ಲ ಎಂದಿದ್ದಾರೆ.
ಅದು 2018ರ ಸಮಯ. ಇಶಾ ಗುಪ್ತಾ ಹಾಗೂ ಹಾರ್ದಿಕ್ ಪಾಂಡ್ಯ ಪಾರ್ಟಿ ಒಂದರಲ್ಲಿ ಭೇಟಿ ಆದರು. ಈ ವೇಳೆ ಇಬ್ಬರ ಮಧ್ಯೆ ಪರಿಚಯ ಬೆಳೆಯಿತು ಎನ್ನಲಾಗಿದೆ. ಆದರೆ, ಇದು ಹೆಚ್ಚು ದಿನ ಉಳಿಯಲಿಲ್ಲ. ಅಚ್ಚರಿ ಎಂದರೆ ‘ಕಾಫಿ ವಿತ್ ಕರಣ್’ ಶೋನಲ್ಲಿ ಹಾರ್ದಿಕ್ ಪಾಂಡ್ಯ ಅವರು ಅಶ್ಲೀಲ ಕಮೆಂಟ್ ಮಾಡಿದಾಗ ಅದನ್ನು ಇಶಾ ಗುಪ್ತಾ ಖಂಡಿಸಿದ್ದರು. ಹಾಗಾದರೆ ಇವರ ಮಧ್ಯೆ ನಡೆದಿದ್ದು ಏನು? ಈ ಬಗ್ಗೆ ಅವರು ಮಾತನಾಡಿದ್ದಾರೆ.
‘ಹೌದು, ನಾವು ಸ್ವಲ್ಪ ಸಮಯದಿಂದ ಮಾತನಾಡುತ್ತಾ ಇದ್ದಿದ್ದು ನಿಜ. ಆದರೆ, ನಾವು ಡೇಟಿಂಗ್ ಮಾಡುತ್ತಿರಲಿಲ್ಲ. ಎರಡು ತಿಂಗಳ ಕಾಲ ನಮ್ಮ ಮಧ್ಯೆ ಮಾತುಕತೆ ಇತ್ತು. ನಮ್ಮ ಮಧ್ಯೆ ಹೊಂದಾಣಿಕೆ ಆಗಬಹುದು ಅಥವಾ ಆಗದೇ ಇರಬಹುದು ಎಂಬ ಹಂತದಲ್ಲೇ ಇದ್ದೆವು. ನಮ್ಮ ಮಧ್ಯೆ ಡೇಟಿಂಗ್ ನಡೆಯುವ ಮೊದಲೇ ಅದು ಕೊನೆಗೊಂಡಿತು. ಹೀಗಾಗಿ ನಮ್ಮ ಮಧ್ಯೆ ಡೇಟಿಂಗ್ ಎಂಬುದು ನಡೆದಿಲ್ಲ. ನಾವು ಎರಡು ಬಾರಿ ಮಾತ್ರ ಭೇಟಿ ಆಗಿದ್ದೆವು ಅಷ್ಟೇ. ಆ ಬಳಿಕ ಅದು ಕೊನೆ ಆಯಿತು’ ಎಂದಿದ್ದಾರೆ ಇಶಾ.
ಇದನ್ನೂ ಓದಿ: ನಿರ್ಮಾಪಕನಿಂದ ಪಾರಾಗಲು ಮೇಕಪ್ ಮ್ಯಾನ್ ಜೊತೆ ರೂಂ ನಲ್ಲಿ ಮಲಗಿದ್ದೆ: ನಟಿ ಇಶಾ ಗುಪ್ತಾ
2019ರ ‘ಕಾಫಿ ವಿತ್ ಕರಣ್’ ಶೋನಲ್ಲಿ ಹಾರ್ದಿಕ್ ಪಾಂಡ್ಯ ನೀಡಿದ ಹೇಳಿಕೆ ಇಶಾಗೆ ಬೇಸರ ಮೂಡಿಸಿತ್ತೇ? ಈ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ‘ಅದು ನನಗೆ ಯಾವುದೇ ಹಾನಿ ಮಾಡಿಲ್ಲ. ಏಕೆಂದರೆ ನಾವು ಆಗಲೇ ಮಾತನಾಡುವುದನ್ನು ನಿಲ್ಲಿಸಿದ್ದೆವು’ ಎಂದಿದ್ದಾರೆ ಅವರು. ಹಾರ್ದಿಕ್ ಪಾಂಡ್ಯ ಅವರ ಹೇಳಿಕೆಯನ್ನು ಕೆಲವೇ ಕೆಲವು ಸೆಲೆಬ್ರಿಟಿಗಳು ಖಂಡಿಸಿದ್ದರು. ಅದರಲ್ಲಿ ಇಶಾ ಕೂಡ ಇದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:30 am, Wed, 25 June 25