ಮತ್ತೊಮ್ಮೆ ನ್ಯಾಷನಲ್ ಅವಾರ್ಡ್ ಪಡೆಯುತ್ತಾರಾ ಅಲ್ಲು ಅರ್ಜುನ್? ಈಗಲೇ ಶುರುವಾಗಿದೆ ಚರ್ಚೆ
‘ಪುಷ್ಪ 2’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರ ನಟನೆಯನ್ನು ನೋಡಿದ ಪ್ರೇಕ್ಷಕರು ಭೇಷ್ ಎನ್ನುತ್ತಿದ್ದಾರೆ. ಮತ್ತೊಮ್ಮೆ ಅವರಿಗೆ ನ್ಯಾಷನಲ್ ಅವಾರ್ಡ್ ಸಿಗಬೇಕು ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಇಂದು (ಡಿಸೆಂಬರ್ 5) ಬಿಡುಗಡೆ ಆಗಿರುವ ‘ಪುಷ್ಪ 2’ ಸಿನಿಮಾ ಎಲ್ಲ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದ್ದು, ಭರ್ಜರಿ ಕಲೆಕ್ಷನ್ ಆಗುತ್ತಿದೆ.
‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ತೆಲುಗು ನಟ ಎಂಬ ಖ್ಯಾತಿ ಅಲ್ಲು ಅರ್ಜುನ್ ಅವರಿಗೆ ಇದೆ. ‘ಪುಷ್ಪ’ ಸಿನಿಮಾದಲ್ಲಿನ ನಟನೆಗಾಗಿ ಅವರು ಆ ಪ್ರತಿಷ್ಠಿತ ಪ್ರಶಸ್ತಿ ಪಡೆದರು. ಈ ಸಾಧನೆಗಾಗಿ ಅಲ್ಲು ಅರ್ಜುನ್ ಅವರ ಆಪ್ತರು ಮತ್ತು ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಪಟ್ಟರು. ಈಗ ‘ಪುಷ್ಪ 2’ ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರ ನಟನೆಗೆ ಪ್ರೇಕ್ಷಕರಿಂದ ಮೆಚ್ಚುಗೆ ಕೇಳಿಬರುತ್ತಿದೆ. ಈ ಬಾರಿಯೂ ಅಲ್ಲು ಅರ್ಜುನ್ ಅವರು ‘ಅತ್ಯುತ್ತಮ ನಟ’ ನ್ಯಾಷನಲ್ ಅವಾರ್ಡ್ ಪಡೆಯುತ್ತಾರಾ ಎಂಬ ಚರ್ಚೆ ಅಭಿಮಾನಿಗಳ ವಲಯದಲ್ಲಿ ಶುರುವಾಗಿದೆ.
ಅಲ್ಲು ಅರ್ಜುನ್ ಅವರು ಟಾಲಿವುಡ್ಗೆ ಮಾತ್ರ ಸೀಮಿತವಲ್ಲ. ‘ಪುಷ್ಪ’ ಸಿನಿಮಾ ತೆರೆಕಂಡ ಬಳಿಕ ಅವರು ಉತ್ತರ ಭಾರತದಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡರು. ರಾಷ್ಟ್ರ ಪ್ರಶಸ್ತಿ ಬಂದ ಬಳಿಕ ಅವರ ಮೇಲೆ ಜನರ ನಿರೀಕ್ಷೆ ಜಾಸ್ತಿ ಆಯಿತು. ಅದಕ್ಕೆ ತಕ್ಕಂತೆಯೇ ‘ಪುಷ್ಪ 2’ ಸಿನಿಮಾ ಮೂಡಿಬಂದಿದೆ ಎಂದು ಫ್ಯಾನ್ಸ್ ಹೊಗಳುತ್ತಿದ್ದಾರೆ. ‘ಇನ್ನೊಂದು ನ್ಯಾಷನಲ್ ಅವಾರ್ಡ್ ಗ್ಯಾರಂಟಿ’ ಎಂದು ಅಭಿಮಾನಿಗಳು ಸೋಶಿಯಲ್ ಮಿಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
‘ಪುಷ್ಪ 2’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರ ಗೆಟಪ್ ಮತ್ತು ಮ್ಯಾನರಿಸಂ ಭಿನ್ನವಾಗಿದೆ. ಆ್ಯಕ್ಷನ್ ದೃಶ್ಯಗಳಲ್ಲಿ ಅವರು ಅಬ್ಬರಿಸಿದ್ದಾರೆ. ಮಾಸ್ ಪ್ರೇಕ್ಷಕರಿಗೆ ಬೇಕಾದ ಮನರಂಜನೆಯನ್ನು ಅವರು ನೀಡಿದ್ದಾರೆ. ಜಾತ್ರೆ ಸನ್ನಿವೇಶ ಮತ್ತು ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಅಲ್ಲು ಅರ್ಜುನ್ ಅವರ ನಟನೆಗೆ ಹೆಚ್ಚುವರಿ ಚಪ್ಪಾಳೆ ಕೇಳಿಬರುತ್ತಿದೆ. ಪ್ರೇಕ್ಷಕರು ಈ ದೃಶ್ಯಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ‘ಪುಷ್ಪ 2’ ನೋಡಲು ಫ್ಯಾಮಿಲಿ ಸಮೇತ ಬಂದ ಅಲ್ಲು ಅರ್ಜುನ್ ಅಭಿಮಾನಿಗಳು
ಸುಕುಮಾರ್ ಅವರ ನಿರ್ದೇಶನದಲ್ಲಿ ‘ಪುಷ್ಪ 2’ ಸಿನಿಮಾ ಮೂಡಿಬಂದಿದೆ. ಅದ್ದೂರಿತನಕ್ಕೆ ಯಾವುದೇ ಕೊರತೆ ಆಗದ ರೀತಿಯಲ್ಲಿ ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯು ಈ ಸಿನಿಮಾವನ್ನು ನಿರ್ಮಾಣ ಮಾಡಿದೆ. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಬಂಗಾರದ ಬೆಳೆ ತೆಗೆಯುತ್ತಿದೆ. ಬಹುತೇಕ ಎಲ್ಲ ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ನಟಿ ರಶ್ಮಿಕಾ ಮಂದಣ್ಣ ಅವರ ನಟನೆಗೂ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಒಟ್ಟಾರೆ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಮೊದಲು ಅಬ್ಬರಿಸಿದ್ದ ಸಿನಿಮಾಗಳ ದಾಖಲೆಗಳನ್ನೆಲ್ಲ ‘ಪುಷ್ಪ 2’ ಚಿತ್ರ ಮುರಿಯುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.