
ಮಲಯಾಳಂ (Malayalam) ಚಿತ್ರರಂಗದ ತನ್ನ ಅದ್ಭುತ ಸಿನಿಮಾಗಳಿಂದ ದೇಶದ ಗಮನ ಸೆಳೆದಿದೆ. ಆದರೆ ಕಳೆದ ಕೆಲ ವರ್ಷಗಳಿಂದ ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ದೇಶದ ಚಿತ್ರರಂಗದ ಎದುರು ತಲೆ ತಗ್ಗಿಸುವಂತೆ ಮಾಡಿದೆ. ಮೊದಲಿಗೆ ಬಂದ ಹೇಮಾ ಕಮಿಟಿಯಿಂದಾಗಿ ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ಪಡುವಂತೆ ಮಾಡಿತು. ಆ ಬಳಿಕ ಡ್ರಗ್ಸ್ ಪ್ರಕರಣ ಬೆಳಕಿಗೆ ಬಂತು. ಇತ್ತೀಚೆಗೆ ಸಹ ಮಲಯಾಳಂನ ಖ್ಯಾತ ನಟ ಶೈನ್ ಟಾಮ್ ಚಾಕೊ (Shine Tom Chocko) ಮಹಿಳೆಯ ಮೇಲೆ ದೌರ್ಜನ್ಯ ಮತ್ತು ಡ್ರಗ್ಸ್ ಪ್ರಕರಣ ಎರಡರಲ್ಲೂ ಆರೋಪಿಯಾಗಿ ಪೊಲೀಸರಿಂದಲೂ ಬಂಧಿತಗೊಂಡಿದ್ದರು. ಇದೀಗ ಮಲಯಾಳಂ ನಟನಿಗೆ ಚಿತ್ರರಂಗದ ಸಂಘ ಕೊನೆಯ ಎಚ್ಚರಿಕೆ ನೀಡಿದೆ.
ಶೈನ್ ಟಾಮ್ ಚಾಕೊ ವಿರುದ್ಧ ನಟಿಯೊಬ್ಬರು ಮಲಯಾಳಂನ ಕಲಾವಿದರ ಸಂಘಕ್ಕೆ ದೂರು ನೀಡಿದ್ದರು. ತಮ್ಮ ಹಾಗೂ ಮತ್ತೊಬ್ಬ ಸಹನಟಿಯ ಜೊತೆಗೆ ಅನುಚಿತವಾಗಿ ಶೈನ್ ಟಾಮ್ ಚಾಕೊ ನಡೆದುಕೊಂಡಿದ್ದಾರೆ ಅಲ್ಲದೆ ಸೆಟ್ನಲ್ಲಿ ಡ್ರಗ್ಸ್ ಬಳಕೆ ಮಾಡಿದ್ದಾರೆ ಎಂದು ನಟಿ ವಿನ್ಸಿ ಅಲೋಷಿಯಸ್ ದೂರು ನೀಡಿದ್ದರು. ಆ ಬಳಿಕ ಪೊಲೀಸರು ಶೈನ್ ಟಾಮ್ ಚಾಕೊ ಉಳಿದುಕೊಂಡಿದ್ದ ಹೋಟೆಲ್ ಮೇಲೆ ದಾಳಿ ಮಾಡಿದ್ದರು. ಆದರೆ ಚಾಕೊ ತಪ್ಪಿಸಿಕೊಂಡರಾದರು. ಆ ಬಳಿಕ ಅವರನ್ನು ಬಂಧಿಸಿ ಆ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಇದೀಗ ಫೆಫ್ಕಾ (ಫಿಲಂ ಎಂಪ್ಲಾಯಿಸ್ ಫೆಡರೇಷನ್ ಆಫ್ ಕೇರಳ) ಶೈನ್ ಟಾಮ್ ಚಾಕೊಗೆ ಕೊನೆಯ ಎಚ್ಚರಿಕೆಯನ್ನು ನೀಡಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೆಫ್ಕಾದ ಅಧ್ಯಕ್ಷ ಉನ್ನಿಕೃಷ್ಣನ್, ‘ಶೈನ್ ಟಾಮ್ ಚಾಕೊಗೆ ಕೊನೆಯ ಎಚ್ಚರಿಕೆ ನೀಡಲಾಗಿದೆ. ಅವರು ತಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಅವರು ಕೊನೆಯ ಬಾರಿ ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಅವರ ಪ್ರತಿಭೆ, ಚಿತ್ರರಂಗಕ್ಕೆ ಈ ಹಿಂದೆ ಕೊಟ್ಟಿರುವ ಕಾಣ್ಕೆಗಳನ್ನು ಪರಿಗಣಿಸಿ ಅವರಿಗೆ ಕೊನೆ ಎಚ್ಚರಿಕೆ ನೀಡಿ, ಚಿತ್ರರಂಗದಲ್ಲಿ ಮುಂದುವರೆಯಲು ಅವಕಾಶ ನೀಡಲಾಗಿದೆ’ ಎಂದಿದ್ದಾರೆ.
ಇದನ್ನೂ ಓದಿ:ಡ್ರಗ್ಸ್ ಕೇಸ್ನಲ್ಲಿ ನಟ ಶೈನ್ ಟಾಮ್ ಚಾಕೋ ಬಂಧನ; ಕೆಲವೇ ಗಂಟೆಗಳಲ್ಲಿ ಸಿಕ್ತು ಜಾಮೀನು
ಶೈನ್ ಟಾಮ್ ಚಾಕೊ, ನಟಿ ವಿನ್ಸಿ ಅಲೋಷಿಯಸ್ಗೆ ಕ್ಷಮೆ ಸಹ ಕೇಳಿದ್ದು, ‘ನಾನು ನಡೆದುಕೊಂಡ ರೀತಿ ನಿಮಗೆ ಅಸೌಖ್ಯ ತಂದಿದ್ದರೆ ಕ್ಷಮೆ ಎಂದಿದ್ದಾರೆ. ಅಲ್ಲದೆ ಅದು ನನ್ನ ಸಹಜ ವರ್ತನೆಯಾಗಿತ್ತು ಎಂದು ಹೇಳಿದ್ದಾರೆ. ಕಲಾವಿದರ ಸಂಘ ಕರೆದಿದ್ದ ಆಂತರಿಕ ಸಭೆಯಲ್ಲಿ ಶೈನ್ ಟಾಮ್ ಚಾಕೊ, ನಟಿಗೆ ಕ್ಷಮೆ ಕೇಳಿದ್ದಾರೆ. ಮುಂದೆ ಇಂಥಹಾ ಘಟನೆ ಮರುಕಳಿಸುವುದಿಲ್ಲ ಎಂದಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಡ್ರಗ್ಸ್ ಬಳಕೆ ಪ್ರಕರಣ ಇತ್ತೀಚೆಗೆ ಹೆಚ್ಚಾಗಿದೆ. ಈ ಹಿಂದೆ ಇಬ್ಬರು ನಟರನ್ನು ಅಶಿಸ್ತಿನ ಕಾರಣಕ್ಕೆ ಚಿತ್ರರಂಗದಿಂದ ನಿಷೇಧ ಹೇರಲಾಗಿತ್ತು. ಆ ಇಬ್ಬರು ನಟರು ಸಹ ಸಿನಿಮಾ ಸೆಟ್ನಲ್ಲಿ ಡ್ರಗ್ಸ್ ಬಳಕೆ ಮಾಡಿದ್ದರು ಎನ್ನಲಾಗಿತ್ತು. ಆ ಬಳಿಕ ಅವರ ಮೇಲೆ ಹೇರಲಾಗಿದ್ದ ನಿಷೇಧ ತೆರವು ಮಾಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ