ಅತ್ಯಾಚಾರ ಆರೋಪದಲ್ಲಿ ಟಿ-ಸೀರೀಸ್ ಮ್ಯಾನೇಜಿಂಗ್ ಡೈರೆಕ್ಟರ್ ಭೂಷಣ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲು

Bhushan Kumar: ಸುಮಾರು 30 ವರ್ಷದ ಮಹಿಳೆ ಟಿ- ಸೀರೀಸ್ ವ್ಯವಸ್ಥಾಪಕ ನಿರ್ದೇಶಕ ಭೂಷಣ್ ಕುಮಾರ್ ಮೇಲೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಅತ್ಯಾಚಾರ ಆರೋಪದಲ್ಲಿ ಟಿ-ಸೀರೀಸ್ ಮ್ಯಾನೇಜಿಂಗ್ ಡೈರೆಕ್ಟರ್ ಭೂಷಣ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲು
ಭೂಷಣ್ ಕುಮಾರ್ (ಫೈಲ್ ಚಿತ್ರ)

ಮುಂಬೈ: ಭಾರತದ ಪ್ರತಿಷ್ಠಿತ ಮ್ಯೂಸಿಕ್ ಆಲ್ಬಂ ಸಂಸ್ಥೆಯಾದ ಟಿ- ಸೀರೀಸ್​ನ ವ್ಯವಸ್ಥಾಪಕ ನಿರ್ದೇಶಕ ಭೂಷಣ್ ಕುಮಾರ್ ಮೇಲೆ ಅತ್ಯಾಚಾರದ ಆರೋಪ ದಾಖಲಾಗಿದೆ. ಈ ಕುರಿತು ಪಶ್ಚಿಮ ಅಂಧೇರಿಯ  ಡಿ.ಎನ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ತನ್ನ ಸಂಸ್ಥೆಯಲ್ಲಿ ಕೆಲಸ ನೀಡುತ್ತೇನೆನ್ನುವ ಸುಳ್ಳು ಭರವಸೆಯನ್ನು ನೀಡಿ ಯುವತಿಯನ್ನು ಅತ್ಯಾಚಾರ ಮಾಡಿದ ಆರೋಪ ಭೂಷಣ್ ಕುಮಾರ್ ಮೇಲಿದೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಸುಮಾರು ಮೂವತ್ತು ವರ್ಷದ ಯುವತಿ ನೀಡಿರುವ ದೂರನ್ನು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ. ಆಕೆ ನೀಡಿರುವ ದೂರಿನಂತೆ ಭೂಷಣ್ ಕುಮಾರ್ ಆಕೆಯನ್ನು 2017ರ ಸೆಪ್ಟೆಂಬರ್​ನಿಂದ ಕಳೆದ ವರ್ಷದ ತನಕ ಅತ್ಯಾಚಾರ ನಡೆಸಿದ್ದಾರೆ. ಜೊತೆಗೆ ಈ ವಿಚಾರವನ್ನು ಹೊರಗೆಲ್ಲಾದರೂ ಬಾಯಿಬಿಟ್ಟರೆ ಆಕೆಗೆ ಹಲ್ಲೆ ನಡೆಸುವ ಬೆದರಿಕೆಯನ್ನೂ ಹಾಕಿದ್ದರು ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.

ಮುಂಬೈನ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ವಿಷಯವನ್ನು ಖಚಿತಪಡಿಸಿದ್ದು, ಭೂಷಣ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ), 420(ವಂಚನೆ) ಮತ್ತು 506(ಲೈಂಗಿಕ ದೌರ್ಜನ್ಯ)ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದಿದ್ದಾರೆ.

ಈ ಮೊದಲು 2018ರಲ್ಲೂ ಭೂಷಣ್ ಕುಮಾರ್ ವಿರುದ್ಧ ಇಂತದ್ದೇ ಆರೋಪ ಕೇಳಿಬಂದಿತ್ತು. ಕೆಲಸದ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯದ ಕುರಿತು ಧ್ವನಿಯೆತ್ತುವ ‘ಮಿ ಟೂ’ ಚಳುವಳಿ ತೀವ್ರಗೊಂಡಿದ್ದ ಸಂದರ್ಭದಲ್ಲಿ ಭೂಷಣ್ ಕುಮಾರ್ ಮೇಲೂ ಆರೋಪ ಹೊರಿಸಲಾಗಿತ್ತು. ಈಗ ದೂರು ದಾಖಲಿಸಿರುವುದು ಅದೇ ಮಹಿಳೆಯೇ ಎಂಬ ವಿಚಾರ ಇನ್ನೂ ಖಚಿತಗೊಂಡಿಲ್ಲ.

ಭೂಷಣ್ ಕುಮಾರ್ ಹಿಂದಿ ಚಿತ್ರಗಳ ನಿರ್ಮಾಣದಲ್ಲೂ ಸತತವಾಗಿ ತೊಡಗಿಸಿಕೊಂಡಿದ್ದಾರೆ. 2018ರಲ್ಲಿ ತಮ್ಮ ಕಂಪನಿಯ ಸದಸ್ಯರಿಗೆ ವಿದೇಶದಲ್ಲಿ ಆಸ್ತಿ ಮಾಡಿಕೊಡುವ ಉದ್ದೇಶದಿಂದ ಕೋಟ್ಯಾಂತರ ರೂಪಾಯಿಗಳನ್ನು ವಿದೇಶಕ್ಕೆ ಅಕ್ರಮವಾಗಿ ಸಾಗಿಸಿದ್ದಾರೆ ಎಂದು ಭೂಷಣ್ ಕುಮಾರ್ ವಿರುದ್ಧ ಐಟಿ ಅಧಿಕಾರಿಗಳು ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: ಯುವತಿ ವಿಚಾರವಾಗಿ ನಡು ರಸ್ತೆಯಲ್ಲೇ ಸ್ನೇಹಿತರ ನಡುವೆ ಮಾರಾಮಾರಿ; 8 ಜನರ ಗುಂಪಿಂದ ಯುವಕನ ಮೇಲೆ ಹಲ್ಲೆ

ಇದನ್ನೂ ಓದಿ: Danish Siddiqui: ಅಫ್ಘಾನ್ ಸೇನೆ- ತಾಲಿಬಾನ್ ಉಗ್ರರ ಸಂಘರ್ಷದಲ್ಲಿ ಭಾರತದ ಫೋಟೋ ಜರ್ನಲಿಸ್ಟ್​ ಡ್ಯಾನಿಶ್​ ಸಿದ್ಧಿಕಿ ಹತ್ಯೆ

(FIR filed against T series managing director Bhushan Kumar regarding rape case)