‘ದಲಿತನಲ್ಲ, ನಾನು ಬ್ರಾಹ್ಮಣ’: ದರ್ಶನ್ ಹಲ್ಲೆ ಪ್ರಕರಣದ ತನಿಖೆ ವೇಳೆ ಗಂಗಾಧರ್ ಹೇಳಿಕೆ
Darshan Assault Case: ದರ್ಶನ್ ಅವರಿಂದ ಹಲ್ಲೆಗೆ ಒಳಗಾಗಿದ್ದಾರೆ ಎನ್ನಲಾದ ಹೋಟೆಲ್ ಸಿಬ್ಬಂದಿ ಗಂಗಾಧರ್ ಅವರು ದಲಿತ ಸಮುದಾಯಕ್ಕೆ ಸೇರಿದವರು ಎಂದು ಹೇಳಲಾಗಿತ್ತು. ಆದರೆ ಪೊಲೀಸ್ ವಿಚಾರಣೆ ವೇಳೆ ಬೇರೆ ವಿಷಯ ತಿಳಿದುಬಂದಿದೆ.
ಮೈಸೂರಿನ ‘ಸಂದೇಶ್ ದಿ ಪ್ರಿನ್ಸ್’ ಹೋಟೆಲ್‌ನಲ್ಲಿ ನಟ ದರ್ಶನ್ (Darshan) ಅವರು ದಲಿತ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಅವರು ಆರೋಪ ಮಾಡಿದ್ದರು. ಹಲ್ಲೆ ಪ್ರಕರಣ (Assault Case) ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದರ್ಶನ್ ಅವರಿಂದ ಹಲ್ಲೆಗೆ ಒಳಗಾದ ಸಿಬ್ಬಂದಿ ಎಂದು ಹೇಳಲಾಗುತ್ತಿರುವ ಗಂಗಾಧರ್ ಅವರ ಹೇಳಿಕೆಯನ್ನೂ ಪೊಲೀಸರು ಪಡೆದುಕೊಳ್ಳುತ್ತಿದ್ದಾರೆ. ಈ ವೇಳೆ ಗಂಗಾಧರ್ ಅವರು ದೊಡ್ಡ ಟ್ವಿಸ್ಟ್ ನೀಡಿದ್ದಾರೆ.
ಗಂಗಾಧರ್ ಅವರು ದಲಿತ ಸಮುದಾಯಕ್ಕೆ ಸೇರಿದವರು ಎಂದು ಹೇಳಲಾಗಿತ್ತು. ಆದರೆ ಪೊಲೀಸ್ ವಿಚಾರಣೆ ವೇಳೆ ಬೇರೆ ವಿಷಯ ತಿಳಿದುಬಂದಿದೆ. ‘ನಾನು ದಲಿತ ಸಮುದಾಯಕ್ಕೆ ಸೇರಿದವನಲ್ಲ. ನಾನು ಬ್ರಾಹ್ಮಣ ಸಮುದಾಯಕ್ಕೆ ಸೇರಿದವನು’ ಎಂದು ಗಂಗಾಧರ್ ಅವರು ವಿಚಾರಣೆ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಮೂಲಕ ಇಂದ್ರಿಜಿತ್ ಮಾಡಿದ ಆರೋಪಗಳ ಬಗ್ಗೆ ಅನುಮಾನ ಮೂಡುವಂತಾಗಿದೆ.
ಒಟ್ಟಾರೆ ಈ ಪ್ರಕರಣದ ತನಿಖೆಗೆ ಚುರುಕು ಮುಟ್ಟಿಸಲಾಗಿದೆ. ಈ ಸಂಬಂಧ ಪೊಲೀಸರು ಸಂದೇಶ್ ಹೋಟೆಲ್ಗೆ ತೆರಳಿದ್ದು, ಅನೇಕ ಮಾಹಿತಿ ಕಲೆ ಹಾಕುತ್ತಿದ್ದಾರೆ. ಎಸಿಪಿ ಶಶಿಧರ್ ನೇತೃತ್ವದಲ್ಲಿ ಗಂಗಾಧರ್ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ದರ್ಶನ್ ವಿರುದ್ಧದ ಈ ಪ್ರಕರಣ ಹೈಪ್ ಪಡೆದುಕೊಂಡಿದೆ. ದರ್ಶನ್ ವಿರುದ್ಧ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಹಲವು ಆರೋಪಗಳನ್ನು ಮಾಡಿದ್ದಾರೆ. ಅವುಗಳ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಹಲ್ಲೆ ನಡೆದಿದೆ ಎನ್ನಲಾದ ಹೋಟೆಲ್‌ನಲ್ಲಿ ಪೊಲೀಸರ ತಂಡ ಬೀಡುಬಿಟ್ಟಿದೆ. ಅನೇಕರಿಂದ ಹೇಳಿಕೆಗಳನ್ನು ಪಡೆಯಲಾಗುತ್ತಿದೆ. ನಜರ್ಬಾದ್ ಠಾಣೆ ಇನ್ಸ್ಪೆಕ್ಟರ್ ಶ್ರೀಕಾಂತ್ ಕೂಡ ಉಪಸ್ಥಿತರಿದ್ದಾರೆ.
ಹಲ್ಲೆಗೊಳಗಾದ ವ್ಯಕ್ತಿ ಕನ್ನಡದವರೇ ಎನ್ನುವ ಗಂಭೀರ ಆರೋಪವನ್ನು ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾಡಿದ್ದಾರೆ. ಅಷ್ಟಕ್ಕೂ ಈ ಗಂಗಾಧರ್ ಯಾರು? ಅವರು ಎಲ್ಲಿಯವರು ಎನ್ನುವ ಪ್ರಶ್ನೆ ಅನೇಕರಲ್ಲಿ ಕಾಡಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದೆ. ಹಲ್ಲೆಗೊಳಗಾಗಿದ್ದ ಗಂಗಾಧರ್ ಬಗ್ಗೆ ಟಿವಿ9 ಕನ್ನಡಕ್ಕೆ ಮಾಹಿತಿ ಲಭ್ಯವಾಗಿದೆ. ಸಂದೇಶ್ ದಿ ಪ್ರಿನ್ಸ್ ಹೋಟೆಲ್‌ನಲ್ಲಿ ಗಂಗಾಧರ್ ಕಳೆದ 8 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಹೋಟೆಲ್‌ನಲ್ಲಿ ಗ್ರಾಹಕರಿಂದ ಆರ್ಡರ್ ತೆಗೆದುಕೊಳ್ಳುತ್ತಿದ್ದರು. ಹಲ್ಲೆಗೊಳಗಾಗಿದ್ದ ಗಂಗಾಧರ್ ಮೂಲತಃ ಕೇರಳದವರು. 8 ವರ್ಷಗಳ ಹಿಂದೆ ಮೈಸೂರಿಗೆ ಬಂದು ನೆಲೆಸಿದ್ದರು ಎನ್ನುವ ಮಾಹಿತಿ ಸಿಕ್ಕಿದೆ.
ಗಂಗಾಧರ ಮಾತ್ರವಲ್ಲದೆ, ಜುಲೈ 3ರಂದು ಗೋಪಾಲ್ ರಾಜ್ ಎಂಬುವವರ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ ಹಾಗೂ ಅವರು ಕೋಮಾದಲ್ಲಿದ್ದಾರೆ ಎನ್ನುವ ಗಂಭೀರ ಆರೋಪವನ್ನು ಇಂದ್ರಜಿತ್ ಮಾಡಿದ್ದರು. ಈ ಬಗ್ಗೆ ಟಿವಿ9 ಸ್ಟುಡಿಯೋದಲ್ಲಿ ಗೋಪಾಲ್ ರಾಜ್ ಹೇಳಿಕೆ ನೀಡಿದ್ದಾರೆ. ‘ನನ್ನ ಮೇಲೆ ಯಾವುದೇ ರೀತಿಯ ಹಲ್ಲೆ ನಡೆದಿಲ್ಲ. ನನಗೂ ದರ್ಶನ್ದೂ 30 ವರ್ಷಗಳ ಹಳೆಯ ಸ್ನೇಹವಿದೆ. ನನಗೂ, ದರ್ಶನ್ಗೂ ಯಾವುದೇ ಗಲಾಟೆ ಆಗಿಲ್ಲ. ಕೋಮಾದಲ್ಲಿ ಇದ್ದೇನೆ ಎನ್ನುವ ಆರೋಪಗಳು ಸುಳ್ಳು’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:
Darshan: ಇಂದ್ರಜಿತ್ ಈ ಪ್ರಕರಣವನ್ನು ಎಲ್ಲಿಗೋ ತಗೊಂಡು ಹೋಗ್ತಿದ್ದಾರೆ; ದರ್ಶನ್
ವಂಚನೆ ಯತ್ನ ಪ್ರಕರಣದ ಸುದ್ದಿಯಿಂದ ಬೇಸತ್ತಿದ್ದ ಅಭಿಮಾನಿಗಳಿಗೆ ದರ್ಶನ್ ಕಡೆಯಿಂದ ಗುಡ್ನ್ಯೂಸ್