ಜೀ ಕನ್ನಡದಲ್ಲಿ ಗಣೇಶ್ ಸಿನಿಮಾ ‘ಗೀತಾ’; ಭಾಷಾಪ್ರೇಮದ ಜೊತೆ ಒಂದು ಪ್ರೇಮಕಥೆ
Zee Kannada: ಜುಲೈ 4ರಂದು ಸಂಜೆ 4.30ಕ್ಕೆ ಜೀ ಕನ್ನಡ ಮತ್ತು ಜೀ ಕನ್ನಡ ಎಚ್ಡಿಯಲ್ಲಿ ಗಣೇಶ್ ನಟನೆಯ ‘ಗೀತಾ’ ಸಿನಿಮಾದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗಲಿದೆ. ಶಾನ್ವಿ ಶ್ರೀವಾಸ್ತವ, ಪ್ರಯಾಗ ಮಾರ್ಟಿನ್ ಹಾಗೂ ಪಾರ್ವತಿ ಅರುಣ್ ಈ ಚಿತ್ರದ ನಾಯಕಿಯರು.
ನಟ ಗಣೇಶ್ ಅವರಿಗೆ ಜು.2ರಂದು ಜನ್ಮದಿನ. ಕೊವಿಡ್ ಸಂದರ್ಭವಾದ್ದರಿಂದ ಅವರು ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಹಾಗಂತ ಅಭಿಮಾನಿಗಳ ವಲಯದಲ್ಲಿ ಸಂಭ್ರಮಕ್ಕೇನೂ ಕೊರತೆ ಆಗಿಲ್ಲ. ಸೋಶಿಯಲ್ ಮೀಡಿಯಾ ಮೂಲಕ ಭರ್ಜರಿ ಶುಭಾಶಯಗಳು ಹರಿದುಬಂದವು. ಹೊಸ ಸಿನಿಮಾಗಳ ಪೋಸ್ಟರ್ಗಳು ರಿಲೀಸ್ ಆದವು. ಈ ಖುಷಿಯನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಜೀ ಕನ್ನಡ ವಾಹಿನಿಯಲ್ಲಿ ಇದೇ ಭಾನುವಾರ (ಜು.4) ಗಣೇಶ್ ನಟನೆಯ ‘ಗೀತಾ’ ಸಿನಿಮಾ ಪ್ರಸಾರವಾಗಲಿದೆ.
ಜುಲೈ 4ರಂದು ಸಂಜೆ 4.30ಕ್ಕೆ ಜೀ ಕನ್ನಡ ಮತ್ತು ಜೀ ಕನ್ನಡ ಎಚ್ಡಿಯಲ್ಲಿ ಗೀತಾ ಸಿನಿಮಾದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗಲಿದೆ. ಈ ಚಿತ್ರಕ್ಕೆ ವಿಜಯ ನಾಗೇಂದ್ರ ನಿರ್ದೇಶನ, ಅನೂಪ್ ರೂಬೆನ್ಸ್ ಸಂಗೀತ ನಿರ್ದೇಶನವಿದೆ. ಈ ಸಿನಿಮಾದಲ್ಲಿ ಗಣೇಶ್ಗೆ ನಾಯಕಿಯರಾಗಿ ಶಾನ್ವಿ ಶ್ರೀವಾಸ್ತವ, ಪ್ರಯಾಗ ಮಾರ್ಟಿನ್ ಹಾಗೂ ಪಾರ್ವತಿ ಅರುಣ್ ನಟಿಸಿದ್ದಾರೆ. ಡೈನಾಮಿಕ್ ಹೀರೋ ದೇವರಾಜ್ ಹಾಗೂ ಸುಧಾರಾಣಿ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಗಣೇಶ್ ಸಿನಿಮಾಗಳ ಪಟ್ಟಿಯಲ್ಲಿ ‘ಗೀತಾ’ ವಿಭಿನ್ನ ಸಿನಿಮಾ. ಯಾಕೆಂದರೆ, ಈ ಚಿತ್ರದಲ್ಲಿ ಕನ್ನಡ ಭಾಷಾಪ್ರೇಮದ ಕಥಾಹಂದರ ಇದೆ. ಗೋಕಾಕ್ ಚಳುವಳಿಯ ಹಿನ್ನೆಲೆಯಲ್ಲಿ ಒಂದು ನವಿರಾದ ಪ್ರೇಮಕಥೆಯನ್ನು ಹೇಳಲಾಗಿದೆ. ಕನ್ನಡಿಗರಲ್ಲಿ ಮಾತೃಭಾಷೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಈ ಚಿತ್ರ ಮಾಡಲಿದೆ. ಚಿತ್ರದ ಹಲವು ದೃಶ್ಯಗಳು ರೆಟ್ರೋ ಶೈಲಿಯಲ್ಲಿ ಮೂಡಿಬಂದಿರುವುದು ವಿಶೇಷ. ಕೊಲ್ಕತ್ತ, ಬೆಂಗಳೂರು, ಮೈಸೂರು, ಮನಾಲಿ ಮುಂತಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದೆ.
‘ಗೀತಾ’ ಸಿನಿಮಾ ತಯಾರಾಗಿದ್ದು ಗಣೇಶ್ ಅವರ ಹೋಮ್ ಬ್ಯಾನರ್ನಲ್ಲಿಯೇ ಎಂಬುದು ಇನ್ನೊಂದು ವಿಶೇಷ. ಈಗ ಅವರ ಜನ್ಮದಿನದ ಆಸುಪಾಸಿನಲ್ಲಿ ಈ ಚಿತ್ರವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಜೀ ಕನ್ನಡ ವಾಹಿನಿಯು ಗೋಲ್ಡನ್ ಸ್ಟಾರ್ ಅಭಿಮಾನಿಗಳಿಗೆ ಒದಗಿಸುತ್ತಿದೆ. ಪ್ರಸ್ತುತ ಹಲವು ಸಿನಿಮಾಗಳಲ್ಲಿ ಗಣೇಶ್ ತೊಡಗಿಕೊಂಡಿದ್ದಾರೆ. ‘ಗಾಳಿಪಟ 2’, ‘ಸಖತ್’, ‘ರಾಯಗಡ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರತಂಡಗಳು ಅವರಿಗೆ ಜನ್ಮದಿನದ ಶುಭ ಕೋರಿವೆ.
ಇದನ್ನೂ ಓದಿ:
ಗೋಲ್ಡನ್ ಸ್ಟಾರ್ ಗಣೇಶ್ ಜನ್ಮದಿನ; ‘ಸಖತ್’, ‘ಗಾಳಿಪಟ 2’ ಚಿತ್ರಗಳಿಂದ ಸಿಕ್ಕ ಗಿಫ್ಟ್ಗಳೇನು?
ಇಷ್ಟೊಂದು ಸಾವು-ನೋವಿನಲ್ಲಿ ಸಂಭ್ರಮಿಸುವುದು ಸರಿಯಲ್ಲ; ಅಭಿಮಾನಿಗಳಿಗೆ ಗಣೇಶ್ ವಿಶೇಷ ಮನವಿ