ಮತ್ತೆ ಬರುತ್ತಿದೆ ‘ಜಂಟಲ್ ಮ್ಯಾನ್’ ಅರ್ಜುನ್ ಸರ್ಜಾ ಬದಲಿಗೆ ಬೇರೆ ನಾಯಕ

Gentleman: ಸೂಪರ್ ಡೂಪರ್ ಹಿಟ್ ಸಿನಿಮಾಗಳಾದ 'ಜಂಟಲ್​ಮ್ಯಾನ್', 'ಕಾದಲನ್', 'ಕಾದಲ್ ದೇಸಂ' ಸಿನಿಮಾಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಕುಂಜುಮೋಹನ್ ಇದೀಗ 'ಜಂಟಲ್​ಮ್ಯಾನ್ 2' ಸಿನಿಮಾ ಪ್ರಾರಂಭಿಸಿದ್ದಾರೆ.

ಮತ್ತೆ ಬರುತ್ತಿದೆ 'ಜಂಟಲ್ ಮ್ಯಾನ್' ಅರ್ಜುನ್ ಸರ್ಜಾ ಬದಲಿಗೆ ಬೇರೆ ನಾಯಕ
ಜಂಟಲ್​ಮ್ಯಾನ್ 2
Follow us
ಮಂಜುನಾಥ ಸಿ.
|

Updated on: Aug 20, 2023 | 9:56 PM

ಜಂಟಲ್ ಮ್ಯಾನ್‘ (Gentleman), ‘ಕಾದಲನ್’, ‘ಕಾದಲ್ ದೇಶಂ’ ಸಿನಿಮಾಗಳು ತಮಿಳಿನ ಎವರ್ ಗ್ರೀನ್ ಸಿನಿಮಾಗಳು. ಈ ಸಿನಿಮಾಗಳ ಮೇಕಿಂಗ್, ಕತೆ, ನಟರುಗಳ ನಟನೆ ಎಲ್ಲವೂ ಹಲವು ವರ್ಷಗಳ ಕಾಲ ನೆನಪಿನಲ್ಲಿ ಉಳಿಯುವಂಥಹದ್ದು. ಈ ಸಿನಿಮಾಗಳಿಗೆ ಎ.ಆರ್.ರೆಹಮಾನ್ (AR Rahman) ನೀಡಿದ ಸಂಗೀತಕ್ಕಂತೂ ಸಾವೇ ಇಲ್ಲ. ಆಗಿನ ಕಾಲಕ್ಕೆ ಈ ಭಿನ್ನ ರೀತಿಯ ಸಿನಿಮಾಗಳಿಗೆ ಯಥೇಚ್ಛವಾಗಿ ಬಂಡವಾಳ ಸುರಿದು, ಈ ಎವರ್​ಗ್ರೀನ್ ಸಿನಿಮಾಗಳನ್ನು ಪ್ರೇಕ್ಷಕರಿಗೆ ತಲುಪಿಸಿದವರು ನಿರ್ಮಾಪಕ ಕೆ.ಟಿ. ಕುಂಜುಮೋನ್. ಬಹಳ ವರ್ಷಗಳ ಬಳಿಕ ಕೆ.ಟಿ. ಕುಂಜುಮೋನ್ ಮತ್ತೆ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದಾರೆ. ಈ ಬಾರಿ ಅವರು ‘ಜಂಟಲ್ ಮ್ಯಾನ್ 2′ ಸಿನಿಮಾ ನಿರ್ಮಿಸುತ್ತಿದ್ದಾರೆ.

‘ಜಂಟಲ್ ಮ್ಯಾನ್ 2’ ಚಿತ್ರವು ಶನಿವಾರ, ಚೆನ್ನೈನಲ್ಲಿ ಅದ್ದೂರಿಯಾಗಿ ಪ್ರಾರಂಭವಾಗಿದೆ. ಹಲವು ಅದ್ಧೂರಿ, ಯಶಸ್ವಿ ತಮಿಳು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹಿರಿಯ ನಿರ್ಮಾಪಕ ಕೆ.ಟಿ. ಕುಂಜುಮೋನ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚೆನ್ನೈನ ರಾಜ ಮುತ್ತಯ್ಯ ಸಭಾಂಗಣದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ನಿರ್ದೇಶಕ ಗೋಕುಲ್ ಕೃಷ್ಣ ಅವರಿಗೆ ನಿರ್ಮಾಪಕ ಕುಂಜುಮೋನ್, ಚಿತ್ರದ ಸ್ಕ್ರಿಪ್ಟ್ ಹಸ್ತಾಂತರಿಸುವ ಮೂಲಕ ಸಿನಿಮಾಕ್ಕೆ ಚಾಲನೆ ನೀಡಲಾಗಿದ್ದು, ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ.

RRR ಚಿತ್ರದ ‘ನಾಟು-ನಾಟು’ ಗೀತೆಗೆ ಆಸ್ಕರ್ ಪ್ರಶಸ್ತಿ ಪಡೆದಿರುವ ಎಂಎಂ ಕೀರವಾಣಿ ‘ಜಂಟಲ್​ಮ್ಯಾನ್ 2’ ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಸಿನಿಮಾಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರೂ ಭಾಗಿಯಾಗಿದ್ದು ಕೀರವಾಣಿಯನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಮಾರಂಭದಲ್ಲಿ ಚಿತ್ರಸಾಹಿತಿ ವೈರಮುತ್ತು ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

ಇದನ್ನೂ ಓದಿ: AR Rahaman: ನನ್ನ ಆಸ್ಕರ್ ಭಾಷಣವನ್ನು ತಪ್ಪಾಗಿ ಅರ್ಥೈಸಲಾಗಿತ್ತು: ಎಆರ್ ರೆಹಮಾನ್

ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಕೆ.ಟಿ. ಕುಂಜುಮೋನ್, ‘ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ‘ಜೆಂಟಲ್ ಮ್ಯಾನ್’ ಗಳಾಗಿರಬೇಕು. ನಾನು ಇದುವರೆಗೂ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದೇನೆ. 200ಕ್ಕೂ ಹೆಚ್ಚು ಚಿತ್ರಗಳ ವಿತರಣೆ ಮಾಡಿದ್ದೇನೆ. ನನಗೆ ಪ್ರೇಕ್ಷಕರ ನಾಡಿಮಿಡಿತ ಗೊತ್ತಿದೆ. ಪ್ರೇಕ್ಷಕರ ಬೇಡುತ್ತಿರು ವಿಷಯವನ್ನೇ ಸಿನಿಮಾ ಮಾಡುತ್ತಿದ್ದೇವೆ. ನನಗೆ ಪ್ರೇಕ್ಷಕರು ಗುರುಸಮಾನರು. ಅವರು ಚಿತ್ರ ನೋಡಿ ಆಶಿರ್ವಾದ ಮಾಡಿದರಷ್ಟೇ ನಾವು ಗೆಲ್ಲುವುದಕ್ಕೆ ಸಾಧ್ಯ. ಹಾಗಾಗಿ, ಅವರಿಗೆ ಇಷ್ಟವಾಗುವಂತಹ ಚಿತ್ರ ಮಾಡುವುದು ನನ್ನ ಮೊದಲ ಆದ್ಯತೆ’ ಎಂದು ಹೇಳಿದರು.

ಸಿನಿಮಾ ಬಗ್ಗೆ ಮಾತನಾಡಿದ ಕುಂಜುಮೋನ್, ಈ ಸಿನಿಮಾ ಮಾಡುವುದಕ್ಕೆ ಎಂಎಂ ಕೀರವಾಣಿ ಮುಖ್ಯ ಕಾರಣ. ‘ಜಂಟಲ್ ಮ್ಯಾನ್ 2′ ಸಿನಿಮಾಕ್ಕೆ ಸಂಗೀತ ನಿರ್ದೇಶಿಸಬೇಕು ಎಂದು ಅವರ ಬಳಿ ಕೇಳಿದಾಗ, ಹೈದರಾಬಾದ್​ಗೆ ಬರುವುದಕ್ಕೆ ಹೇಳಿದರು. ನಾನು ಹೈದರಾಬಾದ್​ಗೆ ಹೋಗಿ ಅವರನ್ನು ಭೇಟಿ ಮಾಡಿದೆ. ಅವರು ಚಿತ್ರದ ತಾರಾಗಣದ ಬಗ್ಗೆ ಆಗಲಿ, ತಂತ್ರಜ್ಞರ ಬಗ್ಗೆ ಆಗಲಿ ಒಂದೂ ಮಾತನ್ನೂ ಕೇಳಲಿಲ್ಲ. ಅಡ್ವಾನ್ಸ್ ಸಹ ಪಡೆಯಲಿಲ್ಲ. ಈ ಚಿತ್ರವನ್ನು ನಿಮಗಾಗಿ ಮಾಡುತ್ತಿದ್ದೇನೆ ಎಂದರು. ಅದೇ ರೀತಿ ಹಿರಿಯ ಚಿತ್ರಸಾಹಿತಿ ವೈರಮುತ್ತು ಸಹ ಅಡ್ವಾನ್ಸ್ ಪಡೆಯಲಿಲ್ಲ. ತಮಗೆ ಅವಶ್ಯಕತೆ ಇದ್ದಾಗ ಕೇಳುವುದಾಗಿ ಹೇಳಿದರು. ಅಷ್ಟೇ ಅಲ್ಲ, ಕೊಚ್ಚಿಯಲ್ಲಿ ನಡೆದ ಸಂಗೀತ ಸಂಯೋಜನೆಗೂ ಅವರು ತಮ್ಮ ದುಡ್ಡಿನಲ್ಲೇ ಬರುವುದಾಗಿ ಹೇಳಿದರು’ ಎಂದು ಹೇಳಿದರು.

‘ಜಂಟಲ್ ಮ್ಯಾನ್ 2’ ಸಿನಿಮಾದಲ್ಲಿ ಚೇತನ್ ಚೀನು ನಾಯಕನಾಗಿ ನಟಿಸುತ್ತಿದ್ದಾರೆ. ನಾಯಕಿಯರಾಗಿ ನಯನತಾರಾ ಚಕ್ರವರ್ತಿ ಹಾಗೂ ಪ್ರಿಯಾ ಲಾಲ್ ಅಭಿನಯಿಸುತ್ತಿದ್ದಾರೆ. ಕನ್ನಡದ ನಟಿ ಸುಧಾರಾಣಿ, ಸಿತಾರಾ, ಸುಮನ್, ಸತ್ಯಪ್ರಿಯಾ ಸೇರಿದಂತೆ ಬೇರೆಬೇರೆ ಭಾಷೆಗಳ ಪ್ರತಿಭಾವಂತ ಕಲಾವಿದರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ