
2024ರ ಜನವರಿ 12ರಂದು ‘ಹನು-ಮಾನ್’ ಸಿನಿಮಾ ಬಿಡುಗಡೆಯಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಬ್ಬರಿಸಿತ್ತು. ಸೂಪರ್ ಹೀರೋ ಕಥೆಯನ್ನು ಹೊಂದಿದ್ದ ಆ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿತ್ತು. ‘ಹನು-ಮಾನ್’ ಸಿನಿಮಾದ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ, ನಿರ್ಮಾಣ ಸಂಸ್ಥೆ ‘ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್’ ತನ್ನ ಫ್ಯಾಂಟಸಿ ಸಿನಿಮಾ ಜಗತ್ತನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಮುಂದಾಗಿದೆ. ಈ ಸಂಸ್ಥೆಯು ತನ್ನ ಮುಂದಿನ ಮಹತ್ವಾಕಾಂಕ್ಷೆಯ ಚಿತ್ರಕ್ಕೆ ‘ಹನುಮಾನ್ 2: ದಿ ರೈಸ್ ಆಫ್ ವಾನರಾಸ್’ ಎಂದು ಶೀರ್ಷಿಕೆ ಇಟ್ಟಿದೆ. ಅಲ್ಲದೇ, ಸಿನಿಮಾವನ್ನು ಅಧಿಕೃತವಾಗಿ ಘೋಷಿಸಲಾಗಿದೆ.
‘ಹನುಮಾನ್ 2: ದಿ ರೈಸ್ ಆಫ್ ವಾನರಾಸ್’ ಸಿನಿಮಾದಲ್ಲಿ ಯುವ ನಟ ಪಂಜ ವೈಷ್ಣವ್ ತೇಜ್ ಅವರು ಹೀರೋ ಆಗಿ ನಟಿಸಲಿದ್ದಾರೆ. ಪುರಾಣ ಮತ್ತು ಕಲ್ಪನೆಯ ಕಥೆ ಹೊಂದಿರುವ ಈ ಚಿತ್ರವು ಪ್ರೇಕ್ಷಕರಿಗೆ ಹೊಸದೊಂದು ರೋಚಕ ಸಿನಿಮ್ಯಾಟಿಕ್ ಅನುಭವ ನೀಡುವ ಭರವಸೆ ನೀಡಿದೆ. ಚಿತ್ರದ ಶೀರ್ಷಿಕೆಯ ಜೊತೆಗೆ ಬಿಡುಗಡೆಯಾಗಿರುವ ಅನೌನ್ಸ್‌ಮೆಂಟ್ ಪೋಸ್ಟರ್ ಕೂಡ ಗಮನ ಸೆಳೆಯುತ್ತಿದೆ.
ಈ ಪೋಸ್ಟರ್ನಲ್ಲಿ ಹನುಮಂತನ ಚಿತ್ರವು ಹಿನ್ನೆಲೆಯಲ್ಲಿ ಕಾಣಿಸಿದೆ. ವಾನರನ ಬಾಲದ ಮೇಲೆ ವ್ಯಕ್ತಿಯೊಬ್ಬರು ಮೇಲೇರುತ್ತಿರುವ ದೃಶ್ಯವಿದೆ. ಮೋಡಗಳನ್ನು ಸೀಳಿಕೊಂಡು ಮುನ್ನುಗ್ಗುತ್ತಿರುವ ಆ ಪಾತ್ರ ಯಾರದ್ದು ಎಂಬುದು ಗೌಪ್ಯವಾಗಿದೆ. ಒಟ್ಟಾರೆಯಾಗಿ ಈ ಪೋಸ್ಟರ್ ನೋಡಿದರೆ ಇದೊಂದು ಪಕ್ಕಾ ಫ್ಯಾಂಟಸಿ ಸಿನಿಮಾ ಆಗಿರಲಿದೆ ಎಂಬುದು ಖಚಿತವಾಗಿದೆ.
ವಿ.ಐ. ಆನಂದ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ವಿಭಿನ್ನ ಕಲ್ಪನಾತ್ಮಕ ಮತ್ತು ಫ್ಯಾಂಟಸಿ ಕಥೆಗಳನ್ನು ಹೇಳುವುದರಲ್ಲಿ ಹೆಸರುವಾಸಿಯಾಗಿರುವ ಅವರು ಈ ಮಹತ್ವಾಕಾಂಕ್ಷೆಯ ಸಿನಿಮಾಗೆ ಕಥೆ ಬರೆದಿದ್ದಾರೆ. ವಿ.ಐ. ಆನಂದ್ ಅವರ ಸೃಜನಶೀಲ ದೃಷ್ಟಿಕೋನ ಮತ್ತು ಪಂಜ ವೈಷ್ಣವ್ ತೇಜ್ ಅವರ ನಟನೆಯ ಸಂಗಮವು ತೆರೆಯ ಮೇಲೆ ಹೊಸ ಮ್ಯಾಜಿಕ್ ಸೃಷ್ಟಿಸಲಿದೆ ಎಂಬುದನ್ನು ನೋಡಲು ಸಿನಿಪ್ರಿಯರು ಕಾದಿದ್ದಾರೆ.
ಇದನ್ನೂ ಓದಿ: ‘ಹನುಮಾನ್ 2’ vs ‘ಜೈ ಹನುಮಾನ್‘: ಏನಿದು ವಿವಾದ?
‘ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್’ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾದ ಕೆ. ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ಅವರು ‘ಹನುಮಾನ್ 2: ದಿ ರೈಸ್ ಆಫ್ ವಾನರಾಸ್’ ಚಿತ್ರಕ್ಕೆ ಅದ್ದೂರಿಯಾಗಿ ಬಂಡವಾಳ ಹೂಡುತ್ತಿದ್ದಾರೆ. ಈಗಾಗಲೇ ‘ಹನು-ಮಾನ್’ ಮೂಲಕ ದೊಡ್ಡ ಗೆಲುವು ಕಂಡಿರುವ ಈ ನಿರ್ಮಾಪಕರು ಹಲವು ಬಹುನಿರೀಕ್ಷಿತ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:46 pm, Sun, 22 November 26