ರಶ್ಮಿಕಾ ವೈಯಕ್ತಿಕ ವಿಚಾರವನ್ನು ಸಿನಿಮಾದ ಪ್ರಚಾರಕ್ಕೆ ಬಳಸಿಕೊಂಡ ‘ಹಾಯ್ ನಾನ್ನ’ ಟೀಮ್
ನಾನಿ ನಟನೆಯ ‘ಹಾಯ್ ನಾನ್ನ’ ಚಿತ್ರತಂಡಕ್ಕೂ ರಶ್ಮಿಕಾ ಮಂದಣ್ಣ ಅವರಿಗೂ ಯಾವುದೇ ಸಂಬಂಧ ಇಲ್ಲ. ಈ ತಂಡದಲ್ಲಿ ವಿಜಯ್ ದೇವರಕೊಂಡ ಕೂಡ ಕೆಲಸ ಮಾಡಿಲ್ಲ. ಹಾಗಿದ್ದರೂ ಕೂಡ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅವರ ವೈಯಕ್ತಿಕ ಫೋಟೋವನ್ನು ಬಳಸಿಕೊಂಡು ಪ್ರಚಾರ ಮಾಡಿದ್ದು ವಿವಾದಕ್ಕೆ ಕಾರಣ ಆಗಿದೆ.
ತೆಲುಗಿನ ಖ್ಯಾತ ನಟ ನಾನಿ ಅವರು ‘ಹಾಯ್ ನಾನ್ನ’ (Hi Nanna) ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ಕೂಡ ನಟಿಸಿದ್ದಾರೆ. ಡಿಸೆಂಬರ್ 7ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಹಾಗಾಗಿ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅದರ ಜೊತೆಗೆ ಈ ಚಿತ್ರತಂಡ ಒಂದು ಎಡವಟ್ಟು ಮಾಡಿಕೊಂಡಿದೆ. ಇತ್ತೀಚೆಗೆ ‘ಹಾಯ್ ನಾನ್ನ’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ನಡೆಯಿತು. ಆ ವೇದಿಕೆಯಲ್ಲಿ ಚಿತ್ರಕ್ಕೆ ಸಂಬಂಧವೇ ಇಲ್ಲದ ರಶ್ಮಿಕಾ ಮಂದಣ್ಣ (Rashmika Mandanna) ಅವರ ವೈಯಕ್ತಿಕ ವಿಚಾರವನ್ನು ಎಳೆದು ತರಲಾಗಿದೆ. ಇದಕ್ಕೆ ನೆಟ್ಟಿಗರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರತಂಡದವರು ಕ್ಷಮೆ ಕೇಳಬೇಕು ಎಂದು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ (Vijay Deverakonda) ಅವರ ಅಭಿಮಾನಿಗಳು ಪಟ್ಟು ಹಿಡಿದ್ದಾರೆ.
ಈ ಹಿಂದೆ ರಶ್ಮಿಕಾ ಮಂದಣ್ಣ ಅವರು ತಮ್ಮ ಮಾಲ್ಡೀವ್ಸ್ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದರು. ಅದೇ ರೀತಿ ವಿಜಯ್ ದೇವರಕೊಂಡ ಕೂಡ ಮಾಲ್ಡೀವ್ಸ್ನಲ್ಲಿ ತಾವು ತೆಗೆಸಿಕೊಂಡ ಫೋಟೋವನ್ನು ಪೋಸ್ಟ್ ಮಾಡಿದ್ದರು. ಇಬ್ಬರೂ ಬೇರೆ ಬೇರೆ ಸಂದರ್ಭದಲ್ಲಿ ಫೋಟೋ ಹಂಚಿಕೊಂಡಿದ್ದರೂ ಕೂಡ ಅವರು ಜೊತೆಯಾಗಿಯೇ ಮಾಲ್ಡೀವ್ಸ್ನಲ್ಲಿ ಕಾಲ ಕಳೆದಿದ್ದಾರೆ ಎಂದು ನೆಟ್ಟಿಗರು ಊಹಿಸಿದ್ದರು. ಈಗ ಅದೇ ಎರಡು ಫೋಟೋವನ್ನು ಬಳಸಿಕೊಂಡು ‘ಹಾಯ್ ನಾನ್ನ’ ತಂಡ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.
ಇದನ್ನೂ ಓದಿ: ರಶ್ಮಿಕಾ ಮಾತ್ರವಲ್ಲ, ಡೀಪ್ಫೇಕ್ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..
‘ಹಾಯ್ ನಾನ್ನ’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ನಡೆಯುವಾಗ ಎಲ್ಇಡಿ ಪರದೆಯ ಮೇಲೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಫೋಟೋಗಳನ್ನು ಅಕ್ಕ-ಪಕ್ಕ ಇಟ್ಟು ಬಿತ್ತರ ಮಾಡಲಾಗಿದೆ. ತಮ್ಮ ಸಿನಿಮಾದ ಪ್ರಚಾರಕ್ಕಾಗಿ ಬೇರೆಯವರ ವೈಯಕ್ತಿಕ ವಿಚಾರವನ್ನು ಈ ರೀತಿ ಬಳಸಿಕೊಂಡಿದ್ದು ನಿಜಕ್ಕೂ ಕೀಳು ಮಟ್ಟದ ಗಿಮಿಕ್ ಎಂದು ಅನೇಕರು ಟೀಕೆ ಮಾಡುತ್ತಿದ್ದಾರೆ. ಇದಕ್ಕೆ ನಾನಿ ಮತ್ತು ಅವರ ತಂಡದವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.
ಇದನ್ನೂ ಓದಿ: ‘ಅನಿಮಲ್’ ಸಿನಿಮಾದಲ್ಲಿ ನಟಿಸಲು ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ ಎಷ್ಟು?
‘ಗೀತ ಗೋವಿಂದಂ’ ಸಿನಿಮಾದಲ್ಲಿ ನಟಿಸಿದಾಗಿನಿಂದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಡುವೆ ಸ್ನೇಹ ಬೆಳೆಯಿತು. ನಂತರ ಅವರು ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲೂ ತೆರೆಹಂಚಿಕೊಂಡರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಅನೇಕರ ಗುಮಾನಿ. ಆದರೆ ಈ ವಿಚಾರವನ್ನು ರಶ್ಮಿಕಾ ಮಂದಣ್ಣ ಅವರಾಗಲೀ, ವಿಜಯ್ ದೇವರಕೊಂಡ ಅವರಾಗಲಿ ಒಪ್ಪಿಕೊಂಡಿಲ್ಲ. ವೃತ್ತಿಜೀವನದಲ್ಲಿ ಅವರಿಬ್ಬರು ಪರಸ್ಪರ ಬೆಂಬಲ ನೀಡುತ್ತಾ ಮುಂದೆ ಸಾಗುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.