ರೇವ್ ಪಾರ್ಟಿ: ನಟಿ ಹೇಮಾ ವಿರುದ್ಧ ಪ್ರಕರಣಕ್ಕೆ ರಾಜ್ಯ ಹೈಕೋರ್ಟ್ ತಡೆ
Hema Kolla: ತೆಲುಗು ಚಿತ್ರರಂಗದ ಜನಪ್ರಿಯ ಪೋಷಕ ನಟಿ ಹಾಗೂ ಮಾ ಅಸೋಸಿಯೇಷನ್ ಸದಸ್ಯೆ ಆಗಿದ್ದ ಹೇಮಾ ಅವರು ಕಳೆದ ವರ್ಷ ಜೂನ್ ತಿಂಗಳಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಇದೀಗ ಹೇಮಾ ಅವರ ಪ್ರಕರಣದ ವಿಚಾರಣೆಗೆ ರಾಜ್ಯ ಹೈಕೋರ್ಟ್ ತಡೆ ನೀಡಿದೆ.
ಕಳೆದ ವರ್ಷ ಮೇ ತಿಂಗಳಲ್ಲಿ ಬೆಂಗಳೂರಿನ ಜಿಆರ್ ಫಾರ್ಮ್ ಹೌಸ್ನಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣದಲ್ಲಿ ತೆಲುಗು ನಟಿ ಹೇಮಾ ಬಂಧನ ಆಗಿತ್ತು. ತಾವು ರೇವ್ ಪಾರ್ಟಿಗೆ ಹೋಗಿಯೇ ಇಲ್ಲ, ನಾನು ಹೈದರಾಬಾದ್ನಲ್ಲೇ ಇದ್ದೀನಿ ಎಂದು ಹೇಮಾ ಸುಳ್ಳು ಹೇಳಿದ್ದರು. ಆದರೆ ನಟಿ ಹೇಮಾ ಅನ್ನು ಬಂಧಿಸಿದ ಪೊಲೀಸರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಜಾಮೀನಿನ ಮೇಲೆ ಹೊರಬಂದಿದ್ದ ಹೇಮಾ, ಬೆಂಗಳೂರು ಪೊಲೀಸರ ಮೇಲೆ ಹಲವು ಆರೋಪಗಳನ್ನು ಮಾಡಿದ್ದರು. ಇದೀಗ ನಟಿ ಹೇಮಾ ವಿರುದ್ಧ ಪ್ರಕರಣಕ್ಕೆ ಕರ್ನಾಟಕ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಹೈಕೋರ್ಟ್ನಲ್ಲಿ ವಾದ ಮಂಡಿಸಿದ ಹೇಮಾ ಪರ ವಕೀಲರು, ಕೇವಲ ಇತರೆ ಸಾಕ್ಷ್ಯಗಳ ಹೇಳಿಕೆ ಆಧರಿಸಿ ನಟಿ ಹೇಮಾ ವಿರುದ್ಧ ಮಾದಕ ವಸ್ತು ನಿಗ್ರಹ ಕಾಯ್ದೆಯ ಅಡಿ ಪ್ರಕರಣ ದಾಖಲಿಸಲಾಗಿದೆ. ಆದರೆ ಹೇಮಾ ಮಾದಕ ವಸ್ತು ಸೇವಿಸಿದ್ದರು ಎಂಬುದಕ್ಕೆ ಯಾವುದೇ ಸಾಕ್ಷ್ಯಗಳು ಇಲ್ಲ ಎಂದು ಅವರು ವಾದಿಸಿದರು. ಹೇಮಾ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯ, ಹೇಮಾ ವಿರುದ್ಧ ಪ್ರಕರಣದ ವಿಚಾರಣೆಗೆ ತಡೆ ನೀಡಿದೆ. ಅಲ್ಲದೆ ಪ್ರಾಸಿಕ್ಯೂಷನ್ಗೆ ನೋಟೀಸ್ ಸಹ ನೀಡಿದೆ.
ಇದನ್ನೂ ಓದಿ:Hema Kolla: ಬೆಂಗಳೂರು ಡ್ರಗ್ಸ್ ಪ್ರಕರಣದ ಬಗ್ಗೆ ನಟಿ ಹೇಮಾ ವಿಡಿಯೋ
ಮೇ ತಿಂಗಳ 19ನೇ ತಾರೀಖಿನಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿಆರ್ ಫಾರ್ಮ್ ಹೌಸ್ ನಲ್ಲಿ ಪಾರ್ಟಿ ನಡೆಸಲಾಗಿತ್ತು. ಈ ಪಾರ್ಟಿಯಲ್ಲಿ ಮದ್ಯದ ಜೊತೆಗೆ ಮಾದಕ ವಸ್ತುಗಳನ್ನು ಸಹ ಸೇವಿಸಲಾಗಿತ್ತು. ಪಾರ್ಟಿ ಮೇಲೆ ದಾಳಿ ಮಾಡಿದ್ದ ಪೊಲೀಸರು ಪಾರ್ಟಿಯಲ್ಲಿ ಹಾಜರಿದ್ದವರ ರಕ್ತದ ಮಾದರಿಗಳನ್ನು ತೆಗೆದುಕೊಂಡಿದ್ದರು. ಹೇಮಾ ಅವರು ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿ ತಾವು ಬೆಂಗಳೂರಿನಲ್ಲಿ ಇಲ್ಲ ಹೈದರಾಬಾದ್ನ ಹೊರವಲಯದಲ್ಲಿದ್ದೇನೆ ಎಂದು ಸುಳ್ಳು ಹೇಳಿ, ಮಾಧ್ಯಮಗಳು ಹಾಗೂ ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡಿದ್ದರು.
ರಕ್ತದ ಪರೀಕ್ಷಾ ವರದಿಗಳು ಬಂದ ಬಳಿಕ ಹೇಮಾ ಅವರಿಗೆ ಎರಡು ಬಾರಿ ಬೆಂಗಳೂರು ಪೊಲೀಸರು ನೊಟೀಸ್ ನೀಡಿದರು. ಆದರೆ ಹೇಮಾ ವಿಚಾರಣೆಗೆ ಹಾಜರಾಗಿರಲಿಲ್ಲ. ಕೊನೆಗೆ ಜೂನ್ 3 ರಂದು ಹೆಬ್ಬಗೋಡಿ ಪೊಲೀಸರು ನಟಿ ಹೇಮಾ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಹತ್ತು ದಿನ ಜೈಲಿನಲ್ಲಿ ಕಳೆದಿದ್ದ ಹೇಮಾ ಜೂನ್ 13 ರಂದು ಜಾಮೀನು ಪಡೆದು ಹೊರಬಂದರು. ಈಗ ಅವರ ಮೇಲಿನ ಪ್ರಕರಣದ ವಿಚಾರಣೆಗೆ ತಡೆ ನೀಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ