NTR 30: ಜೂ ಎನ್ಟಿಆರ್ ಸಿನಿಮಾಕ್ಕೆ ಹಾಲಿವುಡ್ ಆಕ್ಷನ್ ನಿರ್ದೇಶಕ
ಜೂ ಎನ್ಟಿಆರ್ ನಟನೆಯ 30 ನೇ ಸಿನಿಮಾಕ್ಕೆ ಆಕ್ಷನ್ ದೃಶ್ಯಗಳನ್ನು ಸಂಯೋಜಿಸಲು ಹಾಲಿವುಡ್ನ ಜನಪ್ರಿಯ ಆಕ್ಷನ್ ಕೊರಿಯೋಗ್ರಾಫರ್ ಅನ್ನು ಕರೆಸಲಾಗಿದೆ.
ಆರ್ಆರ್ಆರ್ (RRR) ಸಿನಿಮಾ ಮೂಲಕ ಭಾರತೀಯ ಚಿತ್ರರಂಗದ ಶಕ್ತಿ ವಿಶ್ವಕ್ಕೆ ಅರಿವಾಗಿದೆ. ಈಗ ಭಾರತದ ಕೆಲವು ಸ್ಟಾರ್ಗಳು ಹಾಲಿವುಡ್ ಸ್ಟಾರ್ಗಳಷ್ಟೆ ಜಾಗತಿಕ ಮಟ್ಟದಲ್ಲಿ ಜನಪ್ರಿಯರು. ಆರ್ಆರ್ಆರ್ ಸಿನಿಮಾದ ನಟ ರಾಮ್ ಚರಣ್ಗೆ (Ram Charan) ಈಗಾಗಲೇ ಹಾಲಿವುಡ್ನಿಂದ (Hollywood) ಆಫರ್ ಒಂದು ಬಂದಿದೆ. ಅದೇ ಸಿನಿಮಾದಲ್ಲಿ ನಟಿಸುವ ಜೂ ಎನ್ಟಿಆರ್ ರ (Jr NTR) ಮುಂದಿನ ಸಿನಿಮಾದಲ್ಲಿ ಕೆಲಸ ಮಾಡಲು ಹಾಲಿವುಡ್ನಿಂದಲೇ ಆಕ್ಷನ್ ಕೊರಿಯೋಗ್ರಾಫರ್ ಒಬ್ಬರು ಭಾರತಕ್ಕೆ ಬಂದಿದ್ದಾರೆ!
ಆರ್ಆರ್ಆರ್ ಬಳಿಕ ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ಜೂ ಎನ್ಟಿಆರ್ ನಟಿಸುತ್ತಿದ್ದು ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೆ ಅದ್ಧೂರಿಯಾಗಿ ನೆರವೇರಿದೆ. ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ನಾಯಕಿ. ಈ ಸಿನಿಮಾವನ್ನು ಭಾರಿ ದೊಡ್ಡ ಲೆವೆಲ್ನಲ್ಲಿ ತೆರೆಗೆ ತರಲು ಕೊರಟಾಲ ಶಿವ ಸಜ್ಜಾಗಿದ್ದು, ಸಿನಿಮಾಕ್ಕೆ ಅತ್ಯುತ್ತಮ ತಂತ್ರಜ್ಞರನ್ನು ಕಲೆ ಹಾಕುತ್ತಿದ್ದಾರೆ.
ಜೂ ಎನ್ಟಿಆರ್ ರ ಈ ಸಿನಿಮಾ ಪಕ್ಕಾ ಆಕ್ಷನ್ ಸಿನಿಮಾ ಆಗಿರಲಿದ್ದು ಅತ್ಯುತ್ತಮ ಆಕ್ಷನ್ ದೃಶ್ಯಗಳನ್ನು ಸಿನಿಮಾದಲ್ಲಿ ಅಳವಡಿಸಲೆಂದು ವಿಶ್ವದ ಟಾಪ್ ಆಕ್ಷನ್ ಕೊರಿಯೋಗ್ರಾಫರ್ ಅನ್ನು ಹಾಲಿವುಡ್ನಿಂದ ಕರೆಸಲಾಗಿದೆ. ಸಿನಿಮಾ ಜಗತ್ತಿನ ಅತ್ಯುತ್ತಮ ಆಕ್ಷನ್ ಸಿನಿಮಾಗಳ ಸಾಲಿನಲ್ಲಿ ನಿಲ್ಲುವ ಟಾಮ್ ಕ್ರೂಸ್ರ ಮಿಷನ್ ಇಂಪಾಸಿಬಲ್, ಡೈ ಹಾರ್ಡ್, ರ್ಯಾಂಬೊ, ಟ್ರಾನ್ಸ್ಫಾರ್ಮರ್ಸ್, ದಿ ಫಾರ್ಸ್ ಆಂಡ್ ದಿ ಫ್ಯೂರಿಯಸ್ ಸಿನಿಮಾಕ್ಕೆ ಆಕ್ಷನ್ ನಿರ್ದೇಶನ ಮಾಡಿರುವ ಕೆನ್ನಿ ಬೇಟ್ಸ್, ಜೂ ಎನ್ಟಿಆರ್ ನಟನೆಯ ಮೂವತ್ತನೆ ಸಿನಿಮಾಕ್ಕೆ ಆಕ್ಷನ್ ದೃಶ್ಯಗಳನ್ನು ನಿರ್ದೇಶನ ಮಾಡಲಿದ್ದಾರೆ.
ಕೆನ್ನಿ ಬೇಟ್ಸ್ ಈಗಾಗಲೇ ಜೂ ಎನ್ಟಿಆರ್ 30 ತಂಡವನ್ನು ಸೇರಿಕೊಂಡಿದ್ದು, ನಿರ್ದೇಶಕ ಹಾಗೂ ಪ್ರೊಡಕ್ಷನ್ ಡಿಸೈನರ್ ಜೊತೆ ಸೇರಿಕೊಂಡು ಕೆಲಸ ಆರಂಭಿಸಿದ್ದಾರೆ. ಆರ್ಆರ್ಆರ್ ಸೇರಿದಂತೆ ಬಾಹುಬಲಿ, ಪೊನ್ನಿಯಿನ್ ಸೆಲ್ವನ್ ಇನ್ನೂ ಹಲವು ದೊಡ್ಡ ಬಜೆಟ್ ಸಿನಿಮಾಗಳಿಗೆ ಕೆಲಸ ಮಾಡಿರುವ ಪ್ರೊಡಕ್ಷನ್ ಡಿಸೈನರ್ ಸಾಬು ಸಿರಿಲ್, ಜೂ ಎನ್ಟಿಆರ್ರ ಮೂವತ್ತನೇ ಸಿನಿಮಾಕ್ಕೆ ಪ್ರೊಡಕ್ಷನ್ ಡಿಸೈನರ್ ಆಗಿದ್ದು, ಸಿನಿಮಾದ ಚಿತ್ರೀಕರಣ ಆರಂಭಕ್ಕೂ ಮುನ್ನವೇ ಸಿನಿಮಾ ಸೆಟ್ಗಳ ಮಿನಿಯೇಚರ್ ಮಾದರಿಗಳನ್ನು ಮಾಡಿ ಆಕ್ಷನ್ ದೃಶ್ಯಗಳು ಹೇಗಿರಬೇಕು, ಸೆಟ್ಗಳನ್ನು ಹೇಗೆ ನಿರ್ಮಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಕೆನ್ನಿ ಬೇಟ್ಸ್, ಸಾಬು ಸಿರಿಲ್ ಹಾಗೂ ನಿರ್ದೇಶಕ ಕೊರಟಾಲ ಶಿವ ಅವರುಗಳು ಹಡುಗಿನ ಮಾದರಿಯ ಮುಂದೆ ನಿಂತು ದೃಶ್ಯವೊಂದರ ಬಗ್ಗೆ ಚರ್ಚೆ ಮಾಡುತ್ತಿರುವ ಫೋಟೊ ಒಂದು ಇದೀಗ ವೈರಲ್ ಆಗಿದೆ.
ಆಕ್ಷನ್ ನಿರ್ದೇಶಕ ಕೆನ್ನಿ ಬೇಟ್ಸ್ಗೆ ಇದು ಮೊದಲ ಭಾರತೀಯ ಸಿನಿಮಾ ಏನಲ್ಲ. ಈ ಹಿಂದೆ ರಜನೀಕಾಂತ್, ಅಕ್ಷಯ್ ಕುಮಾರ್ ಒಟ್ಟಿಗೆ ನಟಿಸಿದ್ದ ರೋಬೊ 2.0 ಹಾಗೂ ಪ್ರಭಾಸ್ ನಟನೆಯ ಸಾಹೋ ಸಿನಿಮಾಕ್ಕೂ ಕೆನ್ನಿ ಬೇಟ್ಸ್ ಫೈಟ್ ದೃಶ್ಯಗಳನ್ನು ಸಂಯೋಜಿಸಿದ್ದರು. ಹಾಲಿವುಡ್ನ ಬಹು ಜನಪ್ರಿಯ ಸಿನಿಮಾಗಳಾದ ಟ್ರಾನ್ಸ್ಫಾರ್ಮರ್ಸ್, ಮಿಷನ್ ಇಂಪಾಸಿಬಲ್, ಡೈ ಹಾರ್ಡ್, ರ್ಯಾಂಬೊ 3, ರಶ್ ಹವರ್ 3, ಮಿಸ್ಟರ್ ಆಂಡ್ ಮಿಸಸ್ ಸ್ಮಿತ್, ದಿ ಫಾಸ್ಟ್ ಆಂಡ್ ಫ್ಯೂರಿಯಸ್, ದಿ ಇಟಾಲಿಯನ್ ಜಾಬ್, ಪರ್ಲ್ ಬಾರ್ಬಲ್, ದಿ ರಾಕ್ ಇನ್ನೂ ಹಲವು ಸಿನಿಮಾಗಳಿಗೆ ಆಕ್ಷನ್ ನಿರ್ದೇಶಕನಾಗಿ, ಸ್ಟಂಟ್ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ.