Amanda Bynes: ಬೆತ್ತಲೆಯಾಗಿ ನಡು ರಸ್ತೆಯಲ್ಲಿ ಓಡಾಡಿದ ಖ್ಯಾತ ನಟಿ; ಮಾನಸಿಕ ಆಸ್ಪತ್ರೆಗೆ ದಾಖಲಿಸಿದ ಪೊಲೀಸರು
ಲಾಸ್ ಏಂಜಲಿಸ್ನ ರಸ್ತೆಯಲ್ಲಿ ಅಮಾಂಡಾ ಬೈನ್ಸ್ ಬೆತ್ತಲಾಗಿ ತಿರುಗಾಡಿದ್ದಾರೆ. ದಾರಿಯಲ್ಲಿ ಬರುವ ವಾಹನಗಳನ್ನು ಅಡ್ಡಗಟ್ಟಿ ಸಹಾಯ ಬೇಡಿದ್ದಾರೆ.
ಹಾಲಿವುಡ್ನ ಖ್ಯಾತ ನಟಿ ಅಮಾಂಡಾ ಬೈನ್ಸ್ (Amanda Bynes) ಅವರ ಅಭಿಮಾನಿಗಳಿಗೆ ಇದು ಬೇಸರದ ಸುದ್ದಿ. ಲಾಸ್ ಏಂಜಲಿಸ್ನ (Los Angeles) ಬೀದಿಯಲ್ಲಿ ಅಮಾಂಡಾ ಬೈನ್ಸ್ ಬೆತ್ತಲಾಗಿ ಓಡಾಡಿದ ಘಟನೆ ವರದಿ ಆಗಿದೆ. ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದ ಅವರು 90ರ ದಶಕದಲ್ಲಿ ತುಂಬ ಫೇಮಸ್ ಆಗಿದ್ದರು. ಈಗ ಅವರಿಗೆ 36 ವರ್ಷ ವಯಸ್ಸು. ಭಾನುವಾರ (ಮಾರ್ಚ್ 19) ಅಮಾಂಡಾ ಬೈನ್ಸ್ ಅವರು ಸಂಪೂರ್ಣ ಬೆತ್ತಲಾಗಿ ನಡು ರಸ್ತೆಯಲ್ಲಿ ತಿರುಗಾಡಿದ್ದಾರೆ. ಅವರನ್ನು ಕಂಡ ಎಲ್ಲರಿಗೂ ಅಚ್ಚರಿ ಆಗಿದೆ. ಈಗ ಅವರನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮಾಂಡಾ ಬೈನ್ಸ್ ಅವರ ವರ್ತನೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.
ವಿಚಿತ್ರವಾಗಿದೆ ನಟಿಯ ವರ್ತನೆ:
ಮೊದಲಿನಿಂದಲೂ ಅಮಾಂಡಾ ಬೈನ್ಸ್ ಅವರ ಮಾನಸಿಕ ಆರೋಗ್ಯದಲ್ಲಿ ಏರುಪೇರು ಆಗುತ್ತಲೇ ಇತ್ತು. ಈಗ ಅದು ಮಿತಿ ಮೀರಿದಂತಿದೆ. ಲಾಸ್ ಏಂಜಲಿಸ್ನ ರಸ್ತೆಯಲ್ಲಿ ಬೆತ್ತಲಾಗಿ ತಿರುಗಾಡಿದ ಅವರು ಸ್ವತಃ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ. ದಾರಿಯಲ್ಲಿ ಬರುವ ವಾಹನಗಳನ್ನು ಅಡ್ಡಗಟ್ಟಿ ಸಹಾಯ ಬೇಡಿದ್ದಾರೆ. ಮೊದಲು ಅವರನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಯಿತು. ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು ಎನ್ನಲಾಗಿದೆ.
ಇದನ್ನೂ ಓದಿ: ಮಾನಸಿಕ ಅಸ್ವಸ್ಥತೆಯು ಹೃದಯ ಹಾಗೂ ಮನಸ್ಸನ್ನು ಹಾನಿಗೊಳಿಸಬಹುದು
ಅಮಾಂಡಾ ಬೈನ್ಸ್ಗೆ ವಿವಾದ ಹೊಸದಲ್ಲ:
1996ರಲ್ಲಿ ಬಾಲನಟಿಯಾಗಿ ಅಮಾಂಡಾ ಬೈನ್ಸ್ ಅವರು ಕಿರುತೆರೆಯಲ್ಲಿ ಜನಪ್ರಿಯತೆ ಪಡೆದುಕೊಂಡರು. ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಖ್ಯಾತಿ ಹೆಚ್ಚಿಸಿಕೊಂಡರು. ಒಂದಷ್ಟು ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. 2012ರಿಂದ ಈಚೆಗೆ ಅಮಾಂಡಾ ಬೈನ್ಸ್ ಹಲವು ವಿವಾದಗಳನ್ನು ಮಾಡಿಕೊಂಡಿದ್ದಾರೆ. ಮಾದಕ ವಸ್ತು ಸೇವನೆ, ಮದ್ಯಪಾನದ ಬಳಿಕ ವಾಹನ ಚಾಲನೆ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದುಂಟು.
ಇದನ್ನೂ ಓದಿ: ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡ ಆರೋಪಿಗಳು
ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ನಟಿ:
2014ರಲ್ಲಿ ಅಮಾಂಡಾ ಬೈನ್ಸ್ ಅವರು ತಂದೆ-ತಾಯಿ ವಿರುದ್ಧವೇ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಮಾದಕ ವಸ್ತು ಸೇವನೆಯ ಪರಿಣಾಮದಿಂದ ಅವರು ಆ ರೀತಿ ಆರೋಪ ಹೊರಿಸಿದ್ದರು ಎಂಬುದು ನಂತರ ತಿಳಿದುಬಂತು. ತಮಗೆ ಬೈ-ಪೋಲರ್ ಡಿಸಾರ್ಡರ್ ಇದೆ ಎಂಬುದು ಅವರು ಬಳಿಕ ಬಹಿರಂಗಪಡಿಸಿದರು.
ಅಮಾಂಡಾ ಬೈನ್ಸ್ ಅವರ ಮಾನಸಿಕ ಸ್ಥಿತಿ ಸರಿಯಿಲ್ಲದ ಕಾರಣ ಅವರ ಎಲ್ಲ ವ್ಯವಹಾರಗಳ ಜವಾಬ್ದಾರಿಯನ್ನು ನ್ಯಾಯಾಲಯವು ಪೋಷಕರಿಗೆ ವಹಿಸಿತ್ತು. ಆದರೆ ತಾವೇ ಎಲ್ಲವನ್ನೂ ನಿಭಾಯಿಸಿಕೊಳ್ಳುವುದಾಗಿ 2022ರಲ್ಲಿ ಅಮಾಂಡಾ ಬೈನ್ಸ್ ಅನುಮತಿ ಪಡೆದುಕೊಂಡಿದ್ದರು. ಅದಾಗಿ ಒಂದು ವರ್ಷ ಕಳೆಯುತ್ತಿದ್ದಂತೆಯೇ ಅವರು ಬೆತ್ತಲಾಗಿ ತಿರುಗಾಡಿದ ಘಟನೆ ಬೆಳಕಿಗೆ ಬಂದಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:16 pm, Tue, 21 March 23